ADVERTISEMENT

ಸಾಲು ಸಾಲು ರಜೆ; ಗೋಕರ್ಣಕ್ಕೆ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 9:14 IST
Last Updated 25 ಡಿಸೆಂಬರ್ 2017, 9:14 IST
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಕಂಡು ಬಂದ ಪ್ರವಾಸಿಗರ ದಂಡು
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಕಂಡು ಬಂದ ಪ್ರವಾಸಿಗರ ದಂಡು   

ಗೋಕರ್ಣ: ಕ್ರಿಸ್‌ಮಸ್ ಅಂಗವಾಗಿ ಸಾಲು ಸಾಲು ರಜೆಗಳ ಕಾರಣದಿಂದ ಗೋಕರ್ಣದಲ್ಲಿ ಪ್ರವಾಸಿಗರು ಮತ್ತು ಶಾಲಾ ವಿದ್ಯಾರ್ಥಿಗಳು ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ.

ಮುಖ್ಯರಸ್ತೆಯ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲಾಗದೇ ಪರದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಭದ್ರಕಾಳಿ ದೇವಾಲಯದಿಂದ ಗಂಜಿಗದ್ದೆವರೆಗೂ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮುಖ್ಯ ದೇವಾಲಯಗಳು ಪ್ರವಾಸಿಗರ ಸರತಿ ಸಾಲಿನಿಂದ ತುಂಬಿದೆ.

ಕ್ರಿಸ್‌ಮಸ್ ರಜಾ ಸವಿಯಲು ಹಾಗೂ ಇಲ್ಲಿನ ಕಡಲತೀರಗಳಲ್ಲಿ ಮೋಜು ಮಾಡಲು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ವಸತಿ ಗೃಹಗಳೆಲ್ಲಾ ಪ್ರವಾಸಿಗರಿಂದ ತುಂಬಿದ್ದು, ವಸತಿಗಳಿಗಾಗಿ ಜನರು ಪರದಾಡುವ ಸ್ಥಿತಿ ಕಂಡು ಬಂದಿದೆ. ವಾಹನ ಜಂಗುಳಿ ನಿಯಂತ್ರಿಸಲು ಪಿ.ಎಸ್.ಐ. ಸಂತೋಷಕುಮಾರ್ ಅವರೇ ಸಂಚಾರ ಸುಗಮಗೊಳ್ಳುವಂತೆ ನೋಡಿಕೊಂಡಿದ್ದಾರೆ.

ADVERTISEMENT

ಓಂ ಕಡಲತೀರದಲ್ಲಿ ಕಿಲೋ ಮೀಟರ್ ಗಟ್ಟಲೇ ದೂರದವರೆಗೆ ವಾಹನಗಳನ್ನು ನಿಲ್ಲಿಸಲಾಗಿದೆ. ಎಲ್ಲ ಕಡಲತೀರಗಳು ಪ್ರವಾಸಿಗರಿಂದ ತುಂಬಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂತೋಷ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.