ADVERTISEMENT

‘ಕಳಸಾ–ಬಂಡೂರಿ ಯೋಜನೆ ಜಾರಿ ಮಾಡಿ’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 6:53 IST
Last Updated 7 ಅಕ್ಟೋಬರ್ 2015, 6:53 IST

ಮುಂಡಗೋಡ: ‘ಬಡ ರೈತರ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಂತ ಯಾವುದೇ ಸರ್ಕಾರ ಉಳಿದ ನಿದರ್ಶನವಿಲ್ಲ. ರೈತರ ಸ್ವಾಭಿಮಾನವನ್ನು ಕೆಣಕುವ ದುಸ್ಸಾಹಸಕ್ಕೆ ರಾಜಕೀಯ ಪಕ್ಷಗಳು ಮುಂದಾಗದೇ ಕಳಸಾ–ಬಂಡೂರಿ ಯೋಜನೆ ಜಾರಿ ಮಾಡಿ ರೈತರ ನೆರವಿಗೆ ಧಾವಿಸಬೇಕು’ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.

ಮಹಾದಾಯಿ ನ್ಯಾಯ ಮಂಡಳಿಯಿಂದ ಕಳಸಾ–ಬಂಡೂರಿ ಯೋಜನೆ ಹೊರಗಿಡುವುದು ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಇಲ್ಲಿಯ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ  ಅವರು ಮಾತನಾಡಿದರು.

‘ಕಳೆದ 84 ದಿನದಿಂದ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ಹೋರಾಟ ಮಾಡುತ್ತಿದ್ದರೂ ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಿವಿಗೊಡುತ್ತಿಲ್ಲ. ಮೂರು ಪಕ್ಷಗಳ ಮುಖಂಡರು ‘ನಾನವನಲ್ಲ‘ ಎನ್ನುವಂತೆ ರಾಜಕಾರಣ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೇ ಮತ್ತೊಂದು ನರಗುಂದ ಬಂಡಾಯ ಆದರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಚಕ್ಕಡಿ ಚಳುವಳಿಯನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕಲ್ಲೇಟು ಚಳವಳಿ ಮಾಡುವ ಪರಿಸ್ಥಿತಿ ಬಂದರೂ ಬರಬಹುದು’ ಎಂದು ಭೀಮಾಶಂಕರ ಪಾಟೀಲ ಎಚ್ಚರಿಸಿದರು.

‘ಬಿಜೆಪಿಯ ರೈತ ಚೈತನ್ಯ ಯಾತ್ರೆಯನ್ನು ಟೀಕಿಸಿದ ಅವರು ರೈತ ಬೆಳಿಗ್ಗೆಯಿಂದ ರಾತ್ರಿವರೆಗೂ ಚೈತನ್ಯದಿಂದಲೇ ಇರುತ್ತಾನೆ. ರೈತನಿಗೆ ಚೈತನ್ಯ ತುಂಬುವ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಸಮಾವೇಶಕ್ಕೆ ಖರ್ಚು ಮಾಡುವ ಹಣವನ್ನೇ ಪ್ರತಿ ತಾಲ್ಲೂಕಿನ ರೈತರಿಗೆ ಸಹಾಯಧನ ನೀಡಿದರೇ ಉತ್ತಮ. ಅಖಂಡ ಕರ್ನಾಟಕವನ್ನು ವಿಭಜನೆ ಮಾಡಬೇಕೆನ್ನುವ ಕೆಲವು ರಾಜಕಾರಣಿ ಗಳನ್ನು ಸೇನೆಯು ಖಂಡಿಸುತ್ತದೆ’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಲ್‌.ಟಿ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಸಮುದ್ರಕ್ಕೆ ಸೇರುವ ನೀರನ್ನೇ ಕುಡಿಯಲು ನೀಡಿ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ. ಕಳಸಾ–ಬಂಡೂರಿ ಯೋಜನೆ ಕೂಡಲೇ ಜಾರಿಯಾಗಬೇಕು. ರೈತರ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.

ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಮೇಶ ಬಿದರಿ, ದಲಿತ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಚಿದಾನಂದ ಹರಿಜನ, ರೈತ ಮುಖಂಡ ಹನಮಂತ ಆರೆಗೊಪ್ಪ, ಯುವ ಮುಖಂಡ ಸಿದ್ಧಪ್ಪ ಹಡಪದ, ನವನಿರ್ಮಾಣ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ಹುನಗುಂದ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.