ADVERTISEMENT

18 ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:03 IST
Last Updated 14 ಮೇ 2017, 10:03 IST

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಪ್ರೌಢಶಾಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇಕಡ ನೂರರ ಸಾಧನೆ ತೋರಿವೆ. ಅವುಗಳಲ್ಲಿ ಒಂಬತ್ತು ಸರ್ಕಾರಿ, ಎಂಟು ಅನುದಾನರಹಿತ ಹಾಗೂ ಒಂದು ಅನುದಾನಿತ ಪ್ರೌಢಶಾಲೆಗಳು ಸೇರಿವೆ.

ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಆರು ತಾಲ್ಲೂಕುಗಳಿಂದ ಒಟ್ಟಾರೆ ಶೇ 80.09 ಫಲಿತಾಂಶ ದಾಖಲಿಸಿ ಶೈಕ್ಷಣಿಕ ಜಿಲ್ಲೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಶೇ 85.54 ಫಲಿತಾಂಶ ದಾಖಲಿಸಿ ರಾಜ್ಯ ಮಟ್ಟದಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕೆ ಹೊಲಿಸಿದಾಗ ಈ ವರ್ಷ ಗುಣಾತ್ಮಕ ಫಲಿತಾಂಶದಲ್ಲಿ ಗಣನೀಯ ಹೆಚ್ಚಳ ಸಾಧಿಸಿದೆ ಎಂದು ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 9862 ವಿದ್ಯಾರ್ಥಿಗಳಲ್ಲಿ 7898 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1964 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ ಫಲಿತಾಂಶವನ್ನು ಶ್ರೇಣಿಕರಿಸಿ ಪ್ರಕಟಿಸಲಾಗಿದೆ. ಇದರಲ್ಲಿ ‘ಎ+’ -ಶ್ರೇಣಿಯಲ್ಲಿ 753, ‘ಎ’ ಶ್ರೇಣಿಯಲ್ಲಿ 1479, ‘ಬಿ+’ನಲ್ಲಿ -1912, ‘ಬಿ‘ಯಲ್ಲಿ 2029, ‘ಸಿ+’ನಲ್ಲಿ -1432 ಹಾಗೂ ‘ಸಿ’ಯಲ್ಲಿ -293 ಮಕ್ಕಳು ಫಲಿತಾಂಶ ಪಡೆದಿದ್ದಾರೆ.

ADVERTISEMENT

ಶೈಕ್ಷಣಿಕ ಜಿಲ್ಲೆಯಲ್ಲಿನ  ಒಟ್ಟು 170 ಪ್ರೌಢ ಶಾಲೆಗಳಲ್ಲಿ 98 ಶಾಲೆಗಳು ಶೇ 80ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿವೆ. ಶೇ 60-–80 ಫಲಿತಾಂಶ 58 ಶಾಲೆಗಳಲ್ಲಿ, ಶೇ 40–-60 ಫಲಿತಾಂಶ- 10 ಶಾಲೆಗಳಲ್ಲಿ, ಶೇ 40ಕ್ಕಿಂತ ಕಡಿಮೆ ಫಲಿತಾಂಶ 04 ಶಾಲೆಗಳಲ್ಲಿ ಬಂದಿದ್ದು, ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆ ಯಾವುದೂ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಿದ್ದಾಪುರ ಹಾಗೂ ಜೊಯಿಡಾ ತಾಲ್ಲೂಕುಗಳು ರಾಜ್ಯ ಮಟ್ಟದಲ್ಲಿ ಕ್ರಮವಾಗಿ 7 ಹಾಗೂ 11 ನೇ  ಸ್ಥಾನ ಪಡೆದಿವೆ. ಶೈಕ್ಷಣಿಕ ಜಿಲ್ಲೆಯ ಆರು ತಾಲ್ಲೂಕುಗಳಿಂದ ಆಂಗ್ಲ ಮಾಧ್ಯಮದಲ್ಲಿ 625 ಅಂಕಗಳಿಗೆ 615 ಅಂಕಗಳಿಗಿಂತ ಹೆಚ್ಚು ಸಾಧನೆ ಮಾಡಿದ 22 ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮದಲ್ಲಿ 613ಕ್ಕಿಂತ ಹೆಚ್ಚು ಅಂಕ ಗಳಿಸಿದ  11 ವಿದ್ಯಾರ್ಥಿಗಳು ಇದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 4915 ಬಾಲಕರಲ್ಲಿ 3744 ಬಾಲಕರು, ಒಟ್ಟು 4947 ಬಾಲಕಿಯರಲ್ಲಿ 4154 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ತೇರ್ಗಡೆಯ ಪ್ರಮಾಣ ಶೇ 83.97 ಇದ್ದು,  ಬಾಲಕರಿಗಿಂತ ಬಾಲಕಿಯರು ಶೇ 7.8 ಹೆಚ್ಚಿನ ಸಾಧನೆ ಮಾಡಿದ್ದಾರೆ.

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇನ್ನೂ ಹೆಚ್ಚಿನ ಶ್ರಮ ವಹಿಸಿ ಫಲಿತಾಂಶವನ್ನು ಉತ್ತಮಪಡಿಸಲು ವಿಶೇಷ  ಕಾರ್ಯತಂತ್ರ ಅಳವಡಿಸಲಾಗುವುದು. ಫಲಿತಾಂಶ ಕಡಿಮೆ ಬಂದ                ಶಾಲೆಗಳ ಕಡೆಗೆ ವಿಶೇಷ ಗಮನ ಹರಿಸಿ ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಉತ್ತಮಪಡಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.