ADVERTISEMENT

ಗೋಕರ್ಣ: ಇಂದಿನಿಂದ ಶಿವರಾತ್ರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 8:48 IST
Last Updated 9 ಫೆಬ್ರುವರಿ 2018, 8:48 IST

ಗೋಕರ್ಣ: ಪುರಾಣ ಪ್ರಸಿದ್ಧ, ಮಹಾಬಲೇಶ್ವರ ಆತ್ಮಲಿಂಗ ಇರುವ ಕ್ಷೇತ್ರ ಎಂಬ ಪ್ರತೀತಿ ಇರುವ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರನ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಫೆಬ್ರುವರಿ 9ರಂದು ವಿಧಿವತ್ತಾಗಿ ಪ್ರಾರಂಭವಾಗಲಿದೆ.

ಪರಂಪರಾಗತವಾಗಿ ಒಂಬತ್ತು ದಿನ ನಡೆಯುವ ಈ ಜಾತ್ರೆಗೆ ಅರ್ಚಕರು ವೃಷಭ ಧ್ವಜಾರೋಹಣ ಮಾಡುವುದರೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಾಲನೆ ಸಿಗಲಿದೆ.

ಶುಕ್ರವಾರ ಗಣೇಶ ಪೂಜಾ, ಮೃತ್ತಿಕಾ ಹರಣೋತ್ಸವ ನಡೆಯಲಿದೆ. ಫೆ.10ರಂದು ಸ್ಥಾನ ಶುದ್ಧ್ಯಾದಿ ಹವನಾನುಷ್ಠಾನ, ಗಜವಾಹನ ಯಂತ್ರೋತ್ಸವ ನಡೆಯಲಿದೆ. 11ರಂದು ಕಲಾಶಕ್ತ್ಯಾದಿ ಹವನ, ಹಂಸವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ, 12ರಂದು ಸಿಂಹವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ನೆರವೇರಲಿದೆ.

ADVERTISEMENT

13ರಂದು ಮಾಘ ಕೃಷ್ಣ ತ್ರಯೋದಶಿ ಶಿವಯೋಗದ ಮಹಾಪರ್ವ ದಿವಸವಾಗಿದ್ದು ಅಂದು ರುದ್ರಹವನ, ಮಹಾ ಕುಂಭಾಭಿಷೇಕಪೂರ್ವಕ ಮಹಾಪೂಜೆ, ಜಲಯಾನೋತ್ಸವ, ದೀಪೋತ್ಸವ, ನಡೆಯಲಿದೆ. 14ರಂದು ಮಯೂರ ಯಂತ್ರೋತ್ಸವ, ಪುಷ್ಪರಥೋತ್ಸವ, ಭೂತಬಲಿ ಹಮ್ಮಿಕೊಳ್ಳಲಾಗಿದೆ.

15ರಂದು ಮಾಘ ಅಮಾವಾಸ್ಯೆಯಾಗಿದ್ದು ಪರಿವಾರ ಹವನ, ವೃಷಭ ವಾಹನ ಯಂತ್ರೋತ್ಸವವಿದೆ. 16ರಂದು ಮಹಾರಥೋತ್ಸವ ನೆರವೇರಲಿದೆ. ಜಾತ್ರೋತ್ಸವದ ಕೊನೆಯ ದಿನವಾದ 17ರಂದು ಜಲಯಾನೋತ್ಸವ, ಅಂಕುರಾರ್ಪಣೆಯೊಂದಿಗೆ ಮಹಾಶಿವರಾತ್ರಿ ಸಂಪನ್ನವಾಗಲಿದೆ. ಫೆ.9ರಿಂದ 16ವರೆಗೆ ಮುಖ್ಯ ತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಅತ್ಯಂತ ಎತ್ತರದ ರಥ ಎಂದೇ ಪ್ರಸಿದ್ಧಿ ಪಡೆದಿರುವ ಬ್ರಹ್ಮರಥವನ್ನು ಸ್ಥಳೀಯ ಹಾಲಕ್ಕಿ ಜನಾಂಗದವರಿಂದ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಸ್ಥಳೀಯ ಗ್ರಾಮ ಪಂಚಾಯ್ತಿ ಕೂಡ ಮಹಾಶಿವರಾತ್ರಿ ಜಾತ್ರೆಯ ಸಕಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲು ಸಿದ್ಧತೆಯಲ್ಲಿ ತೊಡಗಿದೆ. ಯಾವುದೇ ಅವಘಡ ಸಂಭವಿಸದಂತೆ ಪೊಲೀಸ್ ಇಲಾಖೆಯೂ ಸೂಕ್ತ ಬಂದೋಬಸ್ತ್ ಏರ್ಪಡಿಸಲು ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.