ADVERTISEMENT

‘ಅಂಗ ಘಟಕ–ಬೂತ್‌ ಸಮಿತಿ ರಚನೆಗೆ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:29 IST
Last Updated 23 ಮೇ 2017, 8:29 IST

ವಿಜಯಪುರ: ಜಿಲ್ಲಾ ಘಟಕದ 20 ಅಂಗ ಘಟಕಗಳು, ತಾಲ್ಲೂಕು ಘಟಕಗಳು ಸೇರಿದಂತೆ ಬೂತ್‌ ಸಮಿತಿಗಳನ್ನು ಜುಲೈ ಅಂತ್ಯದೊಳಗೆ ರಚಿಸಲಾಗುವುದು ಎಂದು ಜಿಲ್ಲಾ ಜೆಡಿಎಸ್‌ನ ವೀಕ್ಷಕರು, ಉಸ್ತುವಾರಿಗಳಾದ ಕೆ.ಆನಂದ್, ಸೈಯದ್‌ ಮೋಹಿನ್‌ ಅಲ್ತಾಫ್‌ ಸೋಮವಾರ ಇಲ್ಲಿ ತಿಳಿಸಿದರು.

ತಲಾ 10ರಿಂದ 15 ಸದಸ್ಯರನ್ನು ಬೂತ್‌ ಸಮಿತಿಗಳಿಗೆ ನೇಮಿಸಿ, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಸುಭದ್ರಗೊಳಿಸಲು ಜಿಲ್ಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಜಿಲ್ಲೆಯಲ್ಲಿ ನಾಲ್ಕರಿಂದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಕಾರ್ಯತಂತ್ರ ರೂಪಿಸಲಾಗುವುದು. ಸ್ಥಳೀಯ ಎಲ್ಲ ಮುಖಂಡರನ್ನು ಒಟ್ಟಿಗೆ ಕರೆದೊಯ್ದು ಚುನಾವಣೆ ಎದುರಿಸಲಾಗುವುದು ಎಂದು ಹೇಳಿದರು.

ADVERTISEMENT

ಪಕ್ಷ ಸಂಘಟನೆ ವಿಷಯದಲ್ಲಿ ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಜತೆಗೂ ಚರ್ಚಿಸಲಾಗುವುದು. ಜಿಲ್ಲಾ ಪ್ರವಾಸ ನಡೆಸುವ ಜತೆಗೆ, ಮನೆ ಮನೆಗೂ ತೆರಳಿ ಕುಮಾರಸ್ವಾಮಿ ಕೈ ಬಲಪಡಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ವಾಗ್ದಾಳಿ: ಆಡಳಿತಾರೂಢ ಕಾಂಗ್ರೆಸ್‌–ಬಿಜೆಪಿ ನೇತೃತ್ವದ ರಾಜ್ಯ–ಕೇಂದ್ರ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ನಿರೀಕ್ಷೆಯನ್ನು ಹುಸಿಗೊಳಿಸಿವೆ ಎಂದು ಜೆಡಿಎಸ್‌ ಎಸ್‌ಸಿ–ಎಸ್‌ಟಿ ಘಟಕದ ರಾಜ್ಯ ಅಧ್ಯಕ್ಷ ಕೆ.ಆನಂದ ಇದೇ ಸಂದರ್ಭ ದೂರಿದರು.

‘ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಕಿಂಚಿತ್‌ ಸ್ಪಂದಿಸುತ್ತಿಲ್ಲ. ಕೇವಲ ಹೇಳಿಕೆ, ಭಾಷಣದಲ್ಲಿಯೇ ಕಾಲಹರಣ ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳ ಕಾರ್ಯವೈಖರಿಯಿಂದ ಜನರು ಬೇಸರಗೊಂಡಿದ್ದಾರೆ. ಎಲ್ಲ ವರ್ಗದ ಜನತೆಯ ಹಿತ, ರಾಜ್ಯದ ಅಭಿವೃದ್ಧಿ ಬಯಸುವ ಪ್ರಾದೇಶಿಕ ಪಕ್ಷ ಜೆಡಿಎಸ್‌ ಅಧಿಕಾರಕ್ಕೆ ತರುವುದು ಅತ್ಯಗತ್ಯ’ ಎಂಬ ಭಾವನೆ ಹೊಂದಿದ್ದಾರೆ ಎಂದರು.

ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಸೈಯ್ಯದ್ ಮೋಹಿನ್‌ ಅಲ್ತಾಫ್ ಮಾತನಾಡಿ ಜೆಡಿಎಸ್ ಸಂಘಟನೆಗೆ ಚುರುಕು ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಹಿಂದಿನ ವಿಧಾನಸಭೆ ಚುಣಾವಣೆ ಸಂದರ್ಭದಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿ ಮತ್ತಷ್ಟು ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.