ADVERTISEMENT

ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸುತ್ತೇನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:36 IST
Last Updated 11 ನವೆಂಬರ್ 2017, 9:36 IST

ಕೊಣ್ಣೂರ(ತಾಳಿಕೋಟೆ): ‘ಇದೇ 14 ರಂದು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನತೆಗೆ ಮಲತಾಯಿ ಧೋರಣೆ ತೋರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಛಳಿ ಬಿಡಿಸುವ ಕೆಲಸ ಮಾಡುತ್ತೇನೆ’ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಕೊಣ್ಣೂರ ಮಡಿಕೇಶ್ವರ, ಢವಳಗಿ ಗ್ರಾಮಗಳಲ್ಲಿ ಜರುಗಿದ ಉತ್ತರ ಕರ್ನಾಟಕ ಕನ್ನಡಿಗರ ಸ್ವಾಭಿಮಾನಿ ಯಾತ್ರೆ ಕಾರ್ಯಕ್ರಮ ನಂತರ ಅವರು ಮಾತನಾಡಿದರು.
‘ಒಂದು ಲಕ್ಷ ಜನ ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿ.ಎಂ ಕುಮಾರಸ್ವಾಮಿ ಸಮ್ಮುಖದಲ್ಲಿ 50 ಸಾವಿರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಜೆಡಿಎಸ್ ಸೇರುವೆ. ಪಕ್ಷದ ಎಲ್ಲ 33 ಶಾಸಕರ ಜೊತೆ ಬೆಳಗಾವಿ ಸುವರ್ಣಸೌಧ ಪ್ರವೇಶಿಸಿ ನಂತರ ಅಧಿವೇಶನದಲ್ಲಿ ಪಾಲ್ಗೊಳ್ಳುವೆ’ ಎಂದು ಹೇಳಿದರು.

‘ರಾಷ್ಟ್ರೀಯ ಪಕ್ಷಗಳ ಜನವಿರೋಧಿ ನೀತಿಯಿಂದ ಬೇಸತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‌ನತ್ತ ಆಸೆ ಇಟ್ಟುಕೊಂಡಿರುವುದರಿಂದಲೇ ರಾಯಚೂರಿನಲ್ಲಿ ಆರಂಭಗೊಂಡಿರುವ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಬೆಂಬಲ ನೀಡುತ್ತಿದ್ದಾರೆ' ಎಂದರು.

ADVERTISEMENT

‘ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಹೋರಾಟ ಮಾಡುವ ನಾಯಕತ್ವ ಜನರಿಗೆ ಅವಶ್ಯ ಇತ್ತು. ಅದರ ನೇತೃತ್ವ ನಾನು ವಹಿಸಿಕೊಂಡಿದ್ದೇನೆ. ಈ ಭಾಗದಲ್ಲಿ 50-60 ಶಾಸಕ ಸ್ಥಾನ ಗೆಲ್ಲುವುದು ಜೆಡಿಎಸ್ ಗುರಿ’ ಎಂದು ತಿಳಿಸಿದರು.

ಬಿಜೆಪಿಗೆ ಹೋಗೊಲ್ಲ: ‘ಜೆಡಿಎಸ್ ಶಾಸಕರಾದ ಮಾನಪ್ಪ ವಜ್ಜಲ, ರಾಯಚೂರು ನಗರದ ಡಾ.ಶಿವರಾಜ ಪಾಟೀಲ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎನ್ನುವುದು ಕೇವಲ ಊಹಾಪೋಹ. ರಾಯಚೂರಿನಲ್ಲಿ ಚಾಲನೆಗೊಂಡ ಯಾತ್ರೆಯಲ್ಲಿ ಈ ಶಾಸಕರೂ ಭಾಗವಹಿಸಿದ್ದರು. ಅವರ ಜೊತೆ ನಾನು ಈಗಾಗಲೇ ಮಾತ ನಾಡಿದ್ದೇನೆ. ಅವರು ಜೆಡಿಎಸ್‌ನಲ್ಲಿಯೇ ಇರುವುದನ್ನು ಖಚಿತಪಡಿಸಿದ್ದಾರೆ’ ಎಂದು ನಡಹಳ್ಳಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.