ADVERTISEMENT

‘ಅನುದಾನ ಬಳಸದಿದ್ದರೆ ವಾಪಸು’

ಮನಗೂಳಿ– ದೇವಾಪುರ ರಾಜ್ಯ ಹೆದ್ದಾರಿ 61ರ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 4:51 IST
Last Updated 12 ಜುಲೈ 2017, 4:51 IST

ತಾಳಿಕೋಟೆ:  ‘ಪಟ್ಟಣದ ಮೂಲಕ ಹಾದು ಹೋಗಿರುವ ಮನಗೂಳಿ– ದೇವಾಪುರ ರಾಜ್ಯ ಹೆದ್ದಾರಿ– 61ರ ಕಾಮಗಾರಿಯನ್ನು ವಿಶ್ವ ಬ್ಯಾಂಕಿನ ನೆರವಿನಿಂದ ಕೈಗೆತ್ತಿಕೊಳ್ಳಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅನುದಾನ ಮರಳಿ ಹೋಗುತ್ತದೆ’ ಎಂದು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

ಪಟ್ಟಣದ ಮೂಲಕ ಹಾಯ್ದು ಹೋಗಿರುವ ಸದರಿ ರಾಜ್ಯ ಹೆದ್ದಾರಿಯ ಕಾಮಗಾರಿ ಪ್ರಗತಿ ಪರಿಶೀಲನೆಗಾಗಿ ಇಲ್ಲಿನ ಎಸ್‌.ಕೆ.ಕಾಲೇಜು ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯನ್ನು ನಿರ್ಮಿಸುವಾಗ 21.2 ಮೀ. ಅಗಲದ ರಸ್ತೆಯನ್ನು ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಹೆಚ್ಚುವರಿ ಸ್ಥಳ ಲಭ್ಯವಾದರೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬಹುದು’ ಎಂದೂ ಹೇಳಿದರು.

ADVERTISEMENT

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ಶಿಂಧೆ ಮಾತನಾಡಿ, ‘ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಪುರಸಭೆಯ ವಿವಿಧ ನೀರಿನ ಪೈಪ್‌ಗಳಿದ್ದು ಅವುಗಳು ಕಾಮಗಾರಿ ನಡೆಯುವಾಗ ಹಾಳಾಗಿವೆ. ಅವುಗಳ ದುರಸ್ತಿಗೆ  ಹೆದ್ದಾರಿ ಅಧಿಕಾರಿಗಳಿಗೆ ಪತ್ರ, ಠರಾವುಗಳನ್ನು ಕಳುಹಿಸಿದರು ಪ್ರತಿಕ್ರಿಯೆ ಇಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಶಿಪ್‌ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್‌ ಕಮಾಲುದ್ದೀನ್‌, ‘ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿನ ವಿದ್ಯುತ್‌ ಕಂಬಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಪುನಾ ನಿರ್ಮಿಸಲಾಗುತ್ತದೆ’ ಎಂದರು.

ಆಗ್ರಹ: ಹೆದ್ದಾರಿ ಕಾಮಗಾರಿಯಲ್ಲಿ ಸೇತುವೆಯನ್ನು ಹೊಸದಾಗಿ ಮಾಡಲು ಅವಕಾಶ  ಇಲ್ಲ. ಬದಲಾಗಿ ವಿಸ್ತರಣೆ ಮಾಡಲಾಗುವುದು ಎಂಬ ಅಧಿಕಾರಿಗಳ ಮಾತಿಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಶಿಥಿಲಗೊಂಡಿರುವ ಸೇತುವೆಯನ್ನು ವಿಸ್ತರಣೆ ಮಾಡದೇ ಹೊಸದಾಗಿ ನಿರ್ಮಿಸುವಂತೆ ನಾಗರಿಕರು, ಪುರಸಭೆ ಸದಸ್ಯರು ಒತ್ತಾಯಿಸಿದರು

ಇದಕ್ಕೆ ಸ್ಪಂದಿಸಿದ ಶಾಸಕರು, ದ್ವಿಪಥದ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಯೋಜನಾ ಪ್ರಾಧಿಕಾರದ ಮುಖ್ಯಸ್ಥರೊಂದಿಗೆ ಮಾತ ನಾಡಿ  ಅನುಮೋದನೆ ದೊರಕಿಸಿಕೊ ಡುವುದಾಗಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಬೂದೆಪ್ಪ, ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ, ಡಿವೈಎಸ್ಪಿ  ಪ್ರಭುಗೌಡ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹಾದೇವ ಮುರಗಿ, ಕೆಶಿಪ್‌ನ ಹೇಮರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.