ADVERTISEMENT

ಅಭ್ಯರ್ಥಿಗಳಿಂದ ರೋಡ್‌ ಶೋ, ನಾಮಪತ್ರ ಸಲ್ಲಿಕೆ

ಉಮೇದುವಾರಿಕೆ ಸಲ್ಲಿಕೆಗೆ ಅಂತಿಮ ದಿನ: ಮೆರವಣಿಗೆಗಳ ಅಬ್ಬರ, ಅಭಿಮಾನಿಗಳ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 13:12 IST
Last Updated 25 ಏಪ್ರಿಲ್ 2018, 13:12 IST

ಮುದ್ದೇಬಿಹಾಳ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಮಂಗಳವಾರ ಇಬ್ಬರು ಅಭ್ಯರ್ಥಿಗಳಿಂದ ಬೃಹತ್‌ ರೋಡ್‌ ಶೋ ನಡೆಯಿತು.

ನಮ್ಮ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ ವರ್ತೂರ ಮಂಗಳವಾರ ಸಾವಿರಾರು ಬೆಂಬಲಿಗರೊಂದಿಗೆ ಇಲ್ಲಿನ ಇಂದಿರಾ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮಾ ವೃತ್ತದ ಮೂಲಕ ತಹಶೀಲ್ದಾರ್‌ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು. ವಕೀಲ ಎಚ್.ವೈ.ಪಾಟೀಲ, ಎನ್.ಆರ್.ಮೊಕಾಶಿ ಇದ್ದರು.

ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ವರ್ತೂರ ಪ್ರಕಾಶ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಂದಾಜು 20 ಸಾವಿರ ಮತಗಳಿಂದ ರಕ್ಷಿತ ಗೆಲವು ಸಾಧಿಸುತ್ತಾನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಈಗ ಬೇರೆ ಬೇರೆ ಪಕ್ಷಗಳಲ್ಲಿ ಹಾಲುಮತದ ಮುಖಂಡರು ಗುರುತಿಸಿಕೊಂಡಿದ್ದಾರೆ. ಆದರೆ ಮತದಾನದ ವೇಳೆಯಲ್ಲಿ ಅವರೆಲ್ಲರೂ ನಮ್ಮ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ. ಕೋಲಾರದಲ್ಲಿ ನಿನ್ನೆ ನಾನು ನಾಮಪತ್ರ ಸಲ್ಲಿಸಿದ್ದು ಅಲ್ಲಿ ನನಗೆ ಎದುರಾಳಿಯೇ ಇಲ್ಲ. ಆದ್ದರಿಂದ ಹೆಚ್ಚಿನ ಪ್ರಚಾರವನ್ನು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕೈಗೊಳ್ಳಲಿದ್ದೇನೆ’ ಎಂದರು.
ಬಿಜೆಪಿಯಿಂದಲೂ ಅಬ್ಬರದ ಪ್ರಚಾರ:

ಬಿಜೆಪಿ ಪಕ್ಷದ ಅಭ್ಯರ್ಥಿ ಎ.ಎಸ್.ಪಾಟೀಲ ನಡಹಳ್ಳಿ ಅವರು ಮಂಗಳವಾರ ತಾಲ್ಲೂಕಿನ ಸರೂರ ಗ್ರಾಮದ ಹಾಲುಮತದ ಮೂಲ ಗುರುಪೀಠ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಬೆಂಬಲಿಗರೊಂದಿಗೆ ಮಂಗಳವಾರ ಎರಡನೇ ನಾಮಪತ್ರ ಸಲ್ಲಿಸಿದರು. ಸರೂರ ಗ್ರಾಮದಿಂದ ಪಾದಯಾತ್ರೆ ಮೂಲಕ ಬಂದ ಅವರು ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬನಶಂಕರಿ ದೇವಿಗೆ ಪೂಜೆ ಸಲ್ಲಿಸಿ ಎತ್ತಿನ ಬಂಡಿಯಲ್ಲಿ ಕುಟುಂಬ ಸಮೇತ ಕುಳಿತು ಡೊಳ್ಳಿನ ವಾದ್ಯದಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಕಚೇರಿಗೆ ಬಂದು ಚುನಾವಣಾಧಿಕಾರಿ ರಾಘವೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಡಹಳ್ಳಿ, ‘ಮುದ್ದೇಬಿಹಾಳ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ ಎನ್ನುವುದಕ್ಕೆ ಇಂದು ಮೆರವಣಿಗೆಯಲ್ಲಿ ಬಂದ ಜನಸಾಗರವೆ ಸಾಕ್ಷಿ. ನನಗೆ ಗೆಲುವು ನಿಶ್ಚಿತ’ ಎಂದರು.

ಬಿಜೆಪಿ ನಾಯಕರ ಗೈರು:

ಮಂಗಳವಾರ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಕೆಲವು ಪ್ರಮುಖರ ಗೈರು ಹಾಜರಾತಿ ಬಗ್ಗೆ ಸಹ ಚರ್ಚೆ ನಡೆಯಿತು. ನಡಹಳ್ಳಿ ಪತ್ನಿ ಮಹಾದೇವಿ ಪಾಟೀಲ, ಮಗ ಭರತ ಪಾಟೀಲ, ಬಿಜೆಪಿ ಹಿರಿಯ ಮುಖಂಡರಾದ ಮಹಾಂತಪ್ಪಗೌಡ ಪಾಟೀಲ ನಾಲತವಾಡ, ಮಲಕೇಂದ್ರರಾಯಗೌಡ ಪಾಟೀಲ, ಬಾಬುಲಾಲ ಓಸ್ವಾಲ, ಶಿವಶಂಕರಗೌಡ ಹಿರೇಗೌಡರ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ, ಬಿ.ಜಿ.ಜಗ್ಗಲ, ಸಿ.ಬಿ.ಅಸ್ಕಿ, ರಾಜು ಹೊನ್ನಟಗಿ, ರಾಜೇಂದ್ರಗೌಡ ರಾಯಗೊಂಡ, ಶರಣು ಬೂದಿಹಾಳಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.