ADVERTISEMENT

‘ಅಸ್ಮಿತೆ ಮೀರಿ ಬೆಳೆಯಬೇಕು’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 12:43 IST
Last Updated 15 ಫೆಬ್ರುವರಿ 2017, 12:43 IST

ವಿಜಯಪುರ: ಯಾವಾಗ ಬರವಣಿಗೆ ಬರಹಗಾರರನ್ನು ಹುಟ್ಟಿಸುತ್ತದೆಯೋ ಆಗ ಜಗತ್ತು ಬರಹಗಾರರನ್ನು ಗುರುತಿ ಸುತ್ತದೆ ಎಂದು ಹಿರಿಯ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ತಿಳಿಸಿದರು.

ಇಲ್ಲಿನ ಮಹಿಳಾ ವಿ.ವಿ. ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗ, ಗದಗನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನದ ವತಿಯಿಂದ ಸೋಮವಾರ ನಡೆದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ದು.ಸರಸ್ವತಿ ಅವರ ‘ಬಚ್ಚೀಸು (ಸಣ್ಣಕಥೆ)’ ಕೃತಿ ಕುರಿತು ಮಾತನಾಡಿದ ಅವರು ಅಸ್ಮಿತೆ, ಅಹಂಕಾರಗಳನ್ನು ಮೀರುವ ಸಾಧ್ಯತೆ ಲೇಖಕಿಯರನ್ನು ಮೇರು ಸ್ಥಾನಕ್ಕೆ ಕೊಂಡೊಯ್ಯುತ್ತದೆ. ನಿಷ್ಠುರತೆಯು ನಮ್ಮ ಬರವಣಿಗೆಗೆ ಬಹು ದೊಡ್ಡ ಶಕ್ತಿಯಾಗಿದೆ. ಲೋಕ ವಿಮರ್ಶೆ ಇದ್ದು, ಆತ್ಮ ವಿಮರ್ಶೆ ಇರದಿದ್ದರೆ ಅದು ಉತ್ತಮ ಬರವಣಿಗೆಯಾಗದು ಎಂದರು.

ಲೇಖಕಿ ಡಾ.ಶುಭಾ ಮರವಂತೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರ ‘ಎಲ್ಯಾದರೂ ಬದುಕಿರು ಗೆಳೆಯಾ (ಸಣ್ಣಕಥೆ)’ ಕೃತಿ ಕುರಿತು ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಸಾಹಿತ್ಯವು ಬಿಡುಗಡೆಯ ಭರವಸೆ ಗಳನ್ನು ತಂದುಕೊಡುತ್ತಿರು ವುದು ಆಶಾದಾಯಕ ಸಂಗತಿ. ತನ್ನನ್ನು ತಾನು ಮೀರುವ ಬಗೆ ಕಾಣಿಸುವ, ಕೇಳಿಸುವ ಬಗೆಯ ದ್ವಂದ್ವವನ್ನು ಮಹಿಳೆ ಮೀರು ತ್ತಿರುವುದು ಇಂದಿಗೂ ಗೊಂದಲಮಯ ಆಗಿದೆ. ತನ್ನನ್ನು ತಾನು ಮರು ವ್ಯಾಖ್ಯಾನಗೊಳಿಸುತ್ತಿರುವುದು ಅರಿವಿನ ಜಗತ್ತಿಗೆ ಕಾಣಿಸುತ್ತದೆ.  ಪ್ರೊ.ಸಿ.ವಿ. ವೇಣುಗೋಪಾಲ ಪ್ರೊ.ಆರ್. ಸುನಂದಮ್ಮ ಅವರ ‘ದ್ವಿತ್ವ’ ಕಾದಂಬರಿ ಕುರಿತು ಹಾಗೂ ಡಾ.ಎಂ. ಉಷಾ ಡಾ.ಎಚ್.ಎಸ್. ಅನುಪಮಾ ಅವರ ‘ಚಿವುಟಿದಷ್ಟೂ ಚಿಗುರು (ಸಣ್ಣಕಥೆ)’ ಕೃತಿ ಕುರಿತು ಮಾತನಾಡಿದರು.

ಲೇಖಕಿಯರು ತಮ್ಮ ಪುಸ್ತಕಗಳನ್ನು ಕುರಿತು ಅನಿಸಿಕೆಗಳನ್ನು ಹಂಚಿ ಕೊಂಡರು. ಸಾಹಿತ್ಯಾಸಕ್ತರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಇದ್ದರು. ಡಾ.ರೇಣುಕಾ ಮಂದ್ರೂಪ ನಿರೂಪಿಸಿ, ಗೀತಾ ಎಚ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.