ADVERTISEMENT

‘ಉಳವಿ ಕೆರೆ ತುಂಬುವ ಕಾರ್ಯ ಶೀಘ್ರ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:33 IST
Last Updated 10 ಜುಲೈ 2017, 10:33 IST

ವಿಜಯಪುರ: ‘ಮಹಾಜ್ಞಾನಿ ಚನ್ನಬಸವಣ್ಣ ಹಾಗೂ ಶರಣ ಹರಳಯ್ಯ ನೆನಪಿಗಾಗಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಉಳವಿ ಹಾಗೂ ಸುತ್ತಲಿನ ಕೆರೆಗಳನ್ನು ತುಂಬಿಸಲು ಯೋಜನೆ ಸಿದ್ಧಪಡಿ ಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಾಲೂಕಿನ ಟಕ್ಕಳಕಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ನಿರ್ಮಿಸಿ ರುವ ಶಿವಶರಣ ಹರಳಯ್ಯ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

‘ಉಳವಿ ಕ್ಷೇತ್ರಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅಲ್ಲಿನ ಬಹುತೇಕ ಕೆರೆಗಳು ಬತ್ತಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಇದೇ ಕಾರಣಕ್ಕಾಗಿ ಅಲ್ಲಿನ ಕೆರೆಗಳನ್ನು ತುಂಬಿಸುವಂತೆ ಕೋರಿ ಉಳವಿಗೆ ತೆರಳಿದ್ದ ಸಂದರ್ಭದಲ್ಲಿ ಜನರು ಮನವಿ ಸಲ್ಲಿಸಿದ್ದರು’ ಎಂದೂ ಹೇಳಿದರು.

ADVERTISEMENT

‘ಪಾದರಕ್ಷೆಗಳನ್ನು ತಯಾರಿಸುವ ಕಾಯಕದ ಹರಳಯ್ಯ ಬಸವಣ್ಣನವರ ಸಾಮೀಪ್ಯದಿಂದಾಗಿ ಮಹಾ ಶಿವಶರಣನಾದ. ಬಸವಣ್ಣಗೆ ಅತ್ಯಂತ ಪ್ರಿಯನಾದ ಶರಣರಲ್ಲಿ ಹರಳಯ್ಯಗೆ ಅಗ್ರ ಸ್ಥಾನ. ಇಂತಹ ಮಹಾನ್‌ ಶಿವಶರಣ ನನ್ನ ಸೋದರ ಸಂಬಂಧಿಗಳಾದ ಶೇಗುಣಸಿ ಗೌಡರ ತೋಟದಲ್ಲಿ ತಪಸ್ಸು ಮಾಡಿ, ಲಿಂಗ ಪೂಜೆ ನೆರವೇರಿಸಿದ್ದಾರೆ.

ಪೂಜೆಗಾಗಿ ನೀರು ತೆಗೆದಾಗ ಅಲ್ಲಿ ಸದಾ ಹರಿಯುವ ಜಲವೇ ಉದ್ಭವವಾಗಿದೆ. ಇಂದು ಸುಕ್ಷೇತ್ರ ಹರಳಯ್ಯನ ಗುಂಡದ ಹೆಸರಿ ನಲ್ಲಿ ಪ್ರವಾಸಿ, ಪ್ರಾಕೃತಿಕ ತಾಣ ವಾಗಿ ಅಭಿವೃದ್ಧಿಗೊಂಡಿದೆ’ ಎಂದರು.

ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ರಾಜೀವ ಗಾಂಧಿ ವಸತಿ ನಿಗಮ ನಿರ್ದೇಶಕ ಮಧುಕರ ಜಾಧವ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ವಾಮನ ಚವ್ಹಾಣ, ರಾಜುಗೌಡ ಜಾಲಗೇರಿ, ಅಡಿವೆಪ್ಪ ಸಾಲಗಲ್, ಕಾಂತಾ ನಾಯಕ, ಜಕ್ಕಪ್ಪ ಹೊನಕಟ್ಟಿ, ಜವಾಹರ ಜಾಧವ, ಮುದಕು ಚಲವಾದಿ, ವಿಠ್ಠಲ ಪೂಜಾರಿ, ಪ್ರಶಾಂತ ಝಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.