ADVERTISEMENT

ಏ. 10ರ ವರೆಗೆ ಕಾಲುವೆಗೆ ನೀರು

ಬಿಜೆಪಿ ಮುಖಂಡ ಬೆಳ್ಳುಬ್ಬಿ ನೇತೃತ್ವದ ನಿಯೋಗ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:40 IST
Last Updated 24 ಮಾರ್ಚ್ 2018, 12:40 IST

ಆಲಮಟ್ಟಿ(ನಿಡಗುಂದಿ): ಕೃಷ್ಣಾ ಅಚ್ಚುಕಟ್ಟು ಕಾಲುವೆಗೆ ಏಪ್ರಿಲ್ 10 ರವರೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಮುಖಂಡ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಮುಖ್ಯ ಎಂಜಿನಿಯರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಎಸ್‌.ಕೆ. ಬೆಳ್ಳುಬ್ಬಿ ಮಾತನಾಡಿ, ಸದ್ಯ ನಮ್ಮ ಭಾಗದಲ್ಲಿ ವ್ಯಾಪಕವಾಗಿ ಈರುಳ್ಳಿ, ಶೇಂಗಾ ಬೆಳೆ ಬೆಳೆದಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹೀಗಾಗಿ ವಾರಾಬಂದಿಗೆ ಅನುಗುಣವಾಗಿ ಏಪ್ರಿಲ್ 10ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಮಾರ್ಚ್ 24 ರಂದು ಬೆಂಗಳೂರಿನಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾರಾಯಣಪುರ ಜಲಾಶಯದ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಸಾಧ್ಯತೆಯಿದೆ. ಇದರಿಂದ ಆಲಮಟ್ಟಿ ಜಲಾಶಯದಲ್ಲಿ ನೀರಿನ ಕೊರತೆಯಾಗಲಿದೆ. ಯಾವುದೇ ಕಾರಣಕ್ಕೂ ಆಲಮಟ್ಟಿಯಿಂದ ಹೆಚ್ಚುವರಿ ನೀರನ್ನು ಹರಿಸಬಾರದು ಎಂದು ಆಗ್ರಹಿಸಿದರು.

ADVERTISEMENT

ಮುಖ್ಯ ಎಂಜಿನಿಯರ್ ಎಸ್.ಎಚ್. ಮಂಜಪ್ಪ ಮನವಿ ಸ್ವೀಕರಿಸಿದರು.

ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿಸಿ: ಮಹಾರಾಷ್ಟ್ರದಿಂದ ನೀರನ್ನು ಬಿಡಿಸುವುದಾಗಿ ಜಲ ಸಂಪನ್ಮೂಲ ಸಚಿವರು ಹೇಳಿದ್ದು, ವಾರದೊಳಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಬೆಳ್ಳುಬ್ಬಿ ಮನವಿ ಅರ್ಪಣೆಗೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ ಕಳೆದ ವರ್ಷ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಇದಕ್ಕೆ ಸ್ಥಳೀಯ ಶಾಸಕರ ನಿರ್ಲಕ್ಷವೇ ಕಾರಣ ಎಂದು ದೂರಿದರು.

ಬಿಜೆಪಿ ಘೋಷಿಸಿದ 43 ತಾಲ್ಲೂಕುಗಳನ್ನೇ ನಾಲ್ಕೂವರೆ ವರ್ಷ ಬಿಟ್ಟು ಕಾಂಗ್ರೆಸ್‌ ಸರ್ಕಾರ ಆರಂಭಿಸಿದ್ದು, ಯಾವುದೇ ಕಚೇರಿಯನ್ನು ಆರಂಭಿಸಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ತಿಂಗಳಲ್ಲಿಯೇ ಎಲ್ಲಾ ತಾಲ್ಲೂಕು ಹಂತದ ಕಚೇರಿಗಳನ್ನು ಆರಂಭಸುತ್ತೇವೆ ಎಂದು ಭರವಸೆ ನೀಡಿದರು.

ರೈತ ಮುಖಂಡ ಬಸವರಾಜ ಕುಂಬಾರ, ಬಾಲಚಂದ್ರ ನಾಗರಾಳ, ಸಂಗನಗೌಡ ರಾಯಗೊಂಡ, ಚಂದ್ರಗಿರಿ ದೇಸಾಯಿ, ಕರವೀರ ಮಡಿವಾಳರ, ಸುರೇಶ ಗುಮತಿಮಠ, ಹನುಮಂತ ಬೇವಿನಕಟ್ಟಿ, ಕೆ.ಎಂ. ಗಂಜ್ಯಾಳ, ಅಂದಾನಿ, ನೀಲು ರಾಠೋಡ, ರಾಘವೇಂದ್ರ ಬಣ್ಣದ, ವಿಲಾಸ ಧನವೆ, ಮುತ್ತು ಬಣ್ಣದ, ಈರಣ್ಣ ಕುಪ್ಪಸ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.