ADVERTISEMENT

ಒಕ್ಕಲೆಬ್ಬಿಸಬೇಡಿ: ಪುರಸಭೆಗೆ ಮನವಿ

ಶಿರೋಳ ರಸ್ತೆ ಆಶ್ರಯ ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:18 IST
Last Updated 5 ಜನವರಿ 2017, 10:18 IST

ಮುದ್ದೇಬಿಹಾಳ: ಪಟ್ಟಣದ ಶಿರೋಳ ರಸ್ತೆ ಪಕ್ಕದಲ್ಲಿರುವ ಆಶ್ರಯ ಬಡಾವಣೆಯಲ್ಲಿ ವಾಸವಾಗಿರುವ ಜನರು ಪುರಸಭೆ ನೀಡಿದ ನಿವೇಶನ ತೆರವು ಸೂಚನೆ ಧಿಕ್ಕರಿಸಿದ್ದು,  ಈಗ ವಾಸವಿರುವ ತಾವೇ ನಿಜವಾದ ಫಲಾನುಭವಿಗಳು. ನಾವು ನಮ್ಮ ನಿವೇಶನ ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಮಂಗಳವಾರ ನಿವೇಶನಗಳಿರುವ ಬಡಾವಣೆಗೆ ತೆರಳಿದ್ದ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಅವರು ನಿಮ್ಮ ಬಳಿ ಮನೆ ವಿತರಿಸಿದ್ದಕ್ಕೆ ಹಕ್ಕು ಪತ್ರಗಳಿದ್ದರೆ ಮಾತ್ರ ಮನೆಗಳು ನಿಮ್ಮದಾಗಿರುತ್ತವೆ. ಹಕ್ಕುಪತ್ರ, ಇನ್ನಿತರ ದಾಖಲೆ ಇಲ್ಲದವರು ಮನೆ ತೆರವುಗೊಳಿಸಬೇಕು. ಮೂಲ ಫಲಾನುಭವಿಗಳು ಬಂದಲ್ಲಿ ಅವರಿಗೆ ಮನೆ ಬಿಟ್ಟುಕೊಟ್ಟು ವಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿ ಹೋಗಿದ್ದರು.

ಇದರಿಂದ ಆತಂಕಕ್ಕೊಳಗಾದ ಸದ್ಯ ವಾಸವಿರುವ ನಿವಾಸಿಗಳು ಬುಧವಾರ ಸಂಜೆ ಆ ವಾರ್ಡ ಪ್ರತಿನಿಸುವ ಪುರಸಭೆ ಸದಸ್ಯ ಸಾಹೇಬಲಾಲ ಬಾವೂರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನಾವು 10 ವರ್ಷಕ್ಕೂ ಮೇಲ್ಪಟ್ಟು ಇದೇ ಮನೆಗಳಲ್ಲಿ ವಾಸವಿದ್ದೇವೆ. ನಮಗೆ ವಿದ್ಯುತ್, ನೀರು ಸೇರಿದಂತೆ ಇನ್ನಿತರ ಯಾವುದೇ ಮೂಲ ಸೌಕರ್ಯಗಳನ್ನು ಪುರಸಭೆ ಆಡಳಿತ ಒದಗಿಸದಿದ್ದರೂ ಚಿಮಣಿ ಬೆಳಕಿನಲ್ಲಿ ನಮ್ಮ ಬದುಕು ಕಟ್ಟಿಕೊಂಡಿದ್ದೇವೆ. ಸರ್ಕಾರ ಕೂಡ ವಾಸವಿರುವವರ ಹೆಸರಲ್ಲೇ ಆಶ್ರಯ ಮನೆ ಕೊಡುವ ಮಾತನ್ನು ಒತ್ತಿ ಹೇಳಿದೆ.

ಇಂಥದ್ದರಲ್ಲಿ ಏಕಾಏಕಿ ಮನೆ ತೆರವುಗೊಳಿಸಬೇಕು ಎಂದರೆ ನಾವು ಮಕ್ಕಳು ಮರಿಗಳೊಂದಿಗೆ ಕುಟುಂಬ ಸಮೇತ ಎಲ್ಲಿ ಹೋಗಿ ಜೀವಿಸಬೇಕು. ದಯಮಾಡಿ  ಒಕ್ಕಲೆಬ್ಬಿಸಬೇಡಿ ಎಂದು ಗೋಳು ತೋಡಿಕೊಂಡರು.

ಭೀಮವ್ವ ಮನಗೂಳಿ, ಕಮಲವ್ವ ಸುಡಗಾಡ ಸಿದ್ದ, ಶಮಸಾದ ಶಿರೋಳ, ಯಮನವ್ವ ಸುಡುಗಾಡಸಿದ್ದ, ಅಮೀನಾ ಒಂಟಿ, ಇಂದಿರಾ ಸುಣಗಾರ, ನೀಲಮ್ಮ ಕಟ್ಟಿ, ಮುರ್ತುಜ್ ನಾಯ್ಕೋಡಿ, ಮಹಿಬೂಬ ಕಟಗಿ, ಮಾಬೂಬ್ಬಿ ಜಾಗಿರದಾರ, ನಾಜಬಿನ್ ಶಿರೋಳ, ಮಾಬುಬ್ಬಿ ಹಮಾಲಿ, ಹುಸೇನಬಿ ತಾಂಬೂಲ ಸೇರಿದಂತೆ 50 ಕ್ಕೂ ಹೆಚ್ಚು ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.