ADVERTISEMENT

ಕಟ್ಟಡ ಸಹಾಯಾರ್ಥ ಫೆ. 8ಕ್ಕೆ ‘ಎಸ್‌ಪಿಬಿ ಸ್ವರ ವೈಭವ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:16 IST
Last Updated 9 ಜನವರಿ 2017, 9:16 IST
ವಿಜಯಪುರ: ನಗರದ ಸಿ.ಎಸ್.ಕಲ್ಮಠ ವಿದ್ಯಾಭಾರತಿ ಶಾಲಾ ಕಟ್ಟಡ ಸಹಾಯಾರ್ಥವಾಗಿ ಫೆ 8ರಂದು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ನೇತೃತ್ವದಲ್ಲಿ ‘ಸ್ವರ-ವೈಭವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಚಂದ್ರಶೇಖರ ಕವಟಗಿ ತಿಳಿಸಿದರು.
 
ವಿಜಯಪುರ ಪರಿವರ್ತನ ವೇದಿಕೆ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ನೀಡುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರೊ.ಸಿ.ಎಸ್. ಕಲ್ಮಠ ವಿದ್ಯಾಭಾರತಿ ಶಾಲೆಯ ಕಟ್ಟಡ ನಿರ್ಮಾಣ ಸಹಾಯಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 
ಸಂಸ್ಕಾರ, ದೇಶಭಕ್ತಿ, ಸಂಸ್ಕೃತಿ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾಭಾರತಿ ಶಾಲೆಯಲ್ಲಿ ಕಲಿತ ಅನೇಕರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆಯ ಸಹಾಯಾರ್ಥವಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕವಟಗಿ ವಿವರಿಸಿದರು.
 
ಪ್ರಪ್ರಥಮ ಬಾರಿಗೆ ಎಸ್.ಪಿ.ಬಾಲಸುಬ್ರಮಣ್ಯಂ ವಿಜಯಪುರ ದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿ ದ್ದಾರೆ. ಈಗಾಗಲೇ ಸಮಾರಂಭಕ್ಕೆ ಸಿದ್ಧತೆ ಕೈಗೊಳ್ಳಲಾ ಗುತ್ತಿದೆ. ಅವಳಿ ಜಿಲ್ಲೆಗಳಲ್ಲಿಯೂ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ. 25 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.
 
ಕಾರ್ಯಕ್ರಮದ ಯಶಸ್ವಿಯಾಗಿ ಸಮಿತಿಗಳನ್ನು ರಚಿಸಲಾಗಿದೆ. ಜ್ಞಾನಯೋಗಾಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮಿತಿ ಗೌರವ ಅಧ್ಯಕ್ಷರಾಗಿದ್ದು, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಡಾ.ಸತೀಶ ಜಿಗಜಿನ್ನಿ ಮಾರ್ಗ ದರ್ಶನ ನೀಡಲಿದ್ದಾರೆ. ಟಿಕೆಟ್ ನೋಂದಣಿ ಈಗಾಗಲೇ ಆರಂಭಗೊಂಡಿದೆ.
 
ಜಿಲ್ಲೆಯ ಎಲ್ಲೆಡೆ 50 ಟಿಕೆಟ್ ವಿತರಣಾ ಕೇಂದ್ರಗಳನ್ನು ತೆರೆಯಲಾ ಗುತ್ತದೆ. ಬಡ ಮಕ್ಕಳಿಗೆ, ಅಂಧ ಮಕ್ಕಳಿಗೆ ಈ ಅಪೂರ್ವವಾದ ಸಂಗೀತ ಕಾರ್ಯಕ್ರಮ ಆಸ್ವಾದಿಸುವ ಅವಕಾಶ ದೊರಕಿಸುವ ದೃಷ್ಟಿಯಿಂದ ಅನೇಕ ಪ್ರಾಯೋಜಕರು ಮುಂದೆ ಬಂದಿದ್ದಾರೆ ಎಂದು ಇದೇ ಸಂದರ್ಭ ವಿವರಿಸಿದರು.
 
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಶಿವಾನಂದ ಭುಯ್ಯಾರ, ವಿಜಯಕುಮಾರ ಕುಡಿಗನೂರ, ರಾಜು ಬಿಜ್ಜರಗಿ, ಸಂಗಮೇಶ ಹೌದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.