ADVERTISEMENT

ಕಬಡ್ಡಿ ಕಲರವ; ವೀಕ್ಷಣೆಗೆ ಜನಸ್ತೋಮ

ಶರಣಬಸಪ್ಪ ಎಸ್‌.ಗಡೇದ
Published 21 ನವೆಂಬರ್ 2017, 10:23 IST
Last Updated 21 ನವೆಂಬರ್ 2017, 10:23 IST

ತಾಳಿಕೋಟೆ: ಪಟ್ಟಣದಲ್ಲಿ ಎರಡು ದಿನ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿ ವೀಕ್ಷಣೆಗಾಗಿ ಅಪಾರ ಸಂಖ್ಯೆಯ ಜನಸ್ತೋಮ ಇಲ್ಲಿನ ಎಸ್.ಎಸ್.ವಿದ್ಯಾಸಂಸ್ಥೆಯ ಎಚ್.ಎಸ್.ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೀಡುಬಿಟ್ಟಿತ್ತು.

ಆಯೋಜಕರು ಟೂರ್ನಿ ವೀಕ್ಷಣೆಗಾಗಿ ನಿರ್ಮಿಸಿದ್ದ ಆರು ಸಾವಿರ ಆಸನ ಸಾಮರ್ಥ್ಯದ ವೀಕ್ಷಕ ಗ್ಯಾಲರಿ ಎರಡೂ ದಿನ ಭರ್ತಿಯಾಗಿತ್ತು. ಟೂರ್ನಿ ಆರಂಭಕ್ಕೂ ಮುನ್ನವೇ ತಮ್ಮ ಸ್ಥಾನ ಕಾದಿರಿಸಿಕೊಂಡಿರುತ್ತಿದ್ದ ಕಬಡ್ಡಿ ಪ್ರೇಮಿಗಳು, ನೆತ್ತಿ ಸುಡುವ ಬಿಸಿಲು, ಚಳಿಯನ್ನು ಲೆಕ್ಕಿಸದೆ ಮುಗಿಬಿದ್ದು ಉತ್ಸಾಹದಿಂದ ವೀಕ್ಷಿಸಿದರು. ಜತೆಗೆ ಅಭೂತಪೂರ್ವ ಪ್ರೋತ್ಸಾಹ ನೀಡಿದರು.

ಗ್ಯಾಲರಿ ಭರ್ತಿಯಾಗಿದ್ದರಿಂದ ಕುಳಿತುಕೊಳ್ಳಲು ಅವಕಾಶ ಸಿಗದಿದ್ದರೂ ಅಂಕಣದ ಸುತ್ತಲೂ ನಿಂತುಕೊಂಡೇ ಕಬಡ್ಡಿಯ ರೋಚಕ ಕ್ಷಣಗಳನ್ನು ಕ್ರೀಡಾಸಕ್ತರು ಕಣ್ತುಂಬಿಕೊಂಡ ದೃಶ್ಯಾವಳಿ ಗೋಚರಿಸಿತು.

ADVERTISEMENT

ವಿಜಯಪುರ ಜಿಲ್ಲೆ ಪ್ರತಿನಿಧಿಸಿದ್ದ ಮುದ್ದೇಬಿಹಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡ ಎರಡನೇ ಸುತ್ತಿನಲ್ಲಿ ಬೆಂಗಳೂರು ಉತ್ತರ ತಂಡದೊಂದಿಗೆ ಸೆಣೆಸುವ ಸಂದರ್ಭ, ಪ್ರೇಕ್ಷಕರು ಕುತೂಹಲದಿಂದ ವೀಕ್ಷಿಸಿದರು. ಸಿಳ್ಳೆ, ಚಪ್ಪಾಳೆ ತಟ್ಟಿ ಆಟಗಾರರನ್ನು ಹುರಿದುಂಬಿಸಿದರು. ವಿಜಯಪುರ ತಂಡದ ಆಟಗಾರರು ಗೆಲುವು ಸಾಧಿಸಿದಾಗ ಕರತಾಡನ ಮುಗಿಲು ಮುಟ್ಟಿತ್ತು. ಬಿಸಿಲಿನ ತಾಪದಲ್ಲೂ ಅಂತಿಮ ಪಂದ್ಯಗಳು ಮುಗಿಯುವ ತನಕ, ಪ್ರೇಕ್ಷಕರ ಉತ್ಸಾಹ ಕಡಿಮೆಯಾಗಿರಲಿಲ್ಲ.

‘ಕ್ರಿಕೆಟ್‌ಗಷ್ಟೇ ಕ್ರೇಜ್‌ ಇದೆ ಎಂಬ ನನ್ನ ಅನಿಸಿಕೆ ಇಲ್ಲಿ ಸುಳ್ಳಾಯ್ತು’ ಎಂದು ಎಂಬತ್ತರ ಹರೆಯದ ಲಕ್ಷ್ಮೀಬಾಯಿ ಪಾಟೀಲ, ಪಿ.ಎಂ.ಜೋಶಿ, ಸಿಂದಗಿಯ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ 70ರ ಹರೆಯದ ಕೆ.ಎಚ್.ಸೋಮಪುರ ತಿಳಿಸಿದರು.

ಅಚ್ಚುಕಟ್ಟಾದ ಊಟ: 64 ತಂಡದ ಆಟಗಾರರು, ವ್ಯವಸ್ಥಾಪಕರು ಸೇರಿದಂತೆ ನಿರ್ಣಾಯಕರು, ವಿವಿಧ ಸಮಿತಿ ಸದಸ್ಯರಿಗೆ ಸಂಗಮೇಶ್ವರ ಸಭಾ ಭವನದಲ್ಲಿ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಉಪಹಾರಕ್ಕಾಗಿ ಉಪ್ಪಿಟ್ಟು, ಅವಲಕ್ಕಿ, ಮಧ್ಯಾಹ್ನ, ರಾತ್ರಿ ಊಟಕ್ಕಾಗಿ ಚಪಾತಿ, ಕಾಳಿನ ಪಲ್ಲೆ, ವಿವಿಧ ತರಕಾರಿ ಪಲ್ಲೆ, ಉಪ್ಪಿನಕಾಯಿ, ಹುಗ್ಗಿ, ಅನ್ನ, ಸಾಂಬಾರು ಬಡಿಸಲಾಯಿತು. ಊಟ–ಉಪಾಹಾರ ಸವಿದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಊಟದ ವ್ಯವಸ್ಥೆ, ಕುಡಿಯುವ ನೀರು, ವಸತಿ ಸೇರಿದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ ಎಂದು ತುಮಕೂರು ಜಿಲ್ಲೆಯ ಬಾಲಕಿಯರ ಕಬಡ್ಡಿ ತಂಡ ಪ್ರತಿನಿಧಿಸಿದ್ದ ಎಂ.ಲಾವಣ್ಯ, ಅಶ್ವಿನಿ, ಕೊಡಗು ತಂಡದ ವ್ಯವಸ್ಥಾಪಕಿ ಸರೋಜಾ ಹೇಳಿದರು.

ಜಿಲ್ಲೆಯ ಶಿಕ್ಷಣ ಇಲಾಖೆ ಸಹಕಾರ, ಕ್ರೀಡಾ
ಕೂಟ ಆಯೋಜಿಸಿರುವ ಕಾಲೇಜಿನ ಕಾರ್ಯ ಸ್ಮರಣೀಯ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಡೆದ ಪಂದ್ಯಾವಳಿಗಳಿಗೆ ನಿರ್ಣಾಯಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆದರೆ ಈ ರೀತಿಯ ಅಚ್ಚು ಕಟ್ಟಾದ ವ್ಯವಸ್ಥೆ ನೋಡಿರಲಿಲ್ಲ ಎಂದು ಅಂತರ ರಾಷ್ಟ್ರೀಯ ನಿರ್ಣಾಯಕ ಗದಗದ ರಾಜೀವ ಕುಲಕರ್ಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.