ADVERTISEMENT

ಕಾಂಗ್ರೆಸ್ಸಿಗರ ಬಣ್ಣ ಬಯಲು ಮಾಡುವೆ; ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 6:24 IST
Last Updated 2 ಡಿಸೆಂಬರ್ 2017, 6:24 IST
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು   

ವಿಜಯಪುರ: ‘ಅಧಿಕಾರಕ್ಕೆ ಬಂದ 24 ತಾಸಿನೊಳಗೆ ಕಾಂಗ್ರೆಸ್ಸಿಗರ ಭ್ರಷ್ಟಾಚಾರದ ಬಣ್ಣ ಬಯಲು ಮಾಡುವೆ. ಹಗರಣಗಳ ಕುರಿತು ಸಮಗ್ರ ತನಿಖೆಗೆ ಆದೇಶಿಸದಿದ್ದರೆ, ನನ್ನ ಹೆಸರು ಬಿ.ಎಸ್‌.ಯಡಿಯೂರಪ್ಪನೇ ಅಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುಡುಗಿದರು.

ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ ಅಧಿಕಾರ ಮದದಿಂದ ವರ್ತಿಸುತ್ತಿದ್ದಾರೆ. ದುರಂಹಕಾರ ಪ್ರದರ್ಶಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಎಸಿಬಿಯಿಂದ ಕ್ಲೀನ್‌ ಚೀಟ್, ಸಿಐಡಿಯಿಂದ ಕ್ಲೀನ್‌ ಚೀಟ್... ಹೀಗೆ ತನ್ನ ಅಧಿಕಾರ ಬಲ ಪ್ರಯೋಗಿಸಿ ಎಲ್ಲ ಕಡೆಗಳಿಂದಲೂ ಕ್ಲೀನ್ ಚೀಟ್ ಮಾಡಿಸಿಕೊಂಡಿರುವ, ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರ ನಿಜ ಬಣ್ಣವನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ಬಯಲು ಮಾಡುತ್ತೇನೆ’ ಎಂದು ಬಿಎಸ್‌ವೈ ಗುಡುಗಿದರು.

ADVERTISEMENT

‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ನಡೆಸಿ, ಪ್ರತಿ ವರ್ಷ ₨ 10 ಸಾವಿರ ಕೋಟಿ ನೀಡುವುದಾಗಿ ಬೊಗಳಿದ್ದ ಕಾಂಗ್ರೆಸ್ ನಾಯಕರು ಈಗ ತಮ್ಮ ಮಾತು ಮರೆತು ತುಘಲಕ್ ಆಡಳಿತ ನಡೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಯತ್ನಾಳ ವಿರುದ್ಧ ಪರೋಕ್ಷ ವಾಗ್ದಾಳಿ
ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ‘ವಿಜಯಪುರದಲ್ಲಿ ಬಿಜೆಪಿಯನ್ನು ನಾನೇ ಬೆಳೆಸಿದ್ದೇನೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಹೊರಟಿದ್ದಾನೆ. ಅವರಿಂದ ಇಲ್ಲಿ ಬಿಜೆಪಿ ಬೆಳೆದಿಲ್ಲ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲ ನಾಯಕರು ವಿಜಯಪುರದಲ್ಲಿ ಪಕ್ಷ ಬೆಳೆಸಿದ್ದಾರೆ. ನಾನು ಬೆಳೆಸಿದ್ದೇನೆ, ನಾನು ಬೆಳೆಸಿದ್ದೇನೆ ಎಂದು ಹೇಳಿಕೊಂಡು ಹೊರಡುವ ವ್ಯಕ್ತಿ ಕೇವಲ ಗದ್ದಲ ಸೃಷ್ಟಿಸುವುದು, ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದು ಮಾತ್ರ ಮಾಡುತ್ತಿದ್ದಾರೆ’ ಎಂದು ಯತ್ನಾಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತನಾಡಿ ‘ವಿಜಯಪುರದಲ್ಲಿ ಬಹಳ ದಿನಗಳಿಂದ ಮೇಲ್ಸೇತುವೆ ನಿರ್ಮಾಣದ ಕೂಗು, ಒತ್ತಾಯ ಕೇಳಿಬಂದಿತ್ತು. ಆ ಖಾತೆಯ ಸಚಿವರೇ ವಿಜಯಪುರ ಜಿಲ್ಲೆಯವರಾಗಿದ್ದರೂ, ಅವರಿಗೆ ಈ ಧ್ವನಿ ಕೇಳಿರಲಿಲ್ಲ’ ಎಂದು ವ್ಯಂಗ್ಯವಾಡಿದರು.

ಢೋಂಗಿ ಕಾಂಗ್ರೆಸ್ಸಿಗರಿಗೆ ದಲಿತರು ಮತ ಹಾಕಬೇಡಿ; ಕೇಂದ್ರ ಸಚಿವ ಮನವಿ

ಕಾಂಗ್ರೆಸ್‌ ವಿರುದ್ಧ ಜಿಗಜಿಣಗಿ, ಕಾರಕೋಳ ಕಿಡಿ
ವಿಜಯಪುರ: ‘ನಾನು ದಲಿತ. ವಿದ್ಯಾವಂತನಿದ್ದೇನೆ. ನನ್ನ ಸಮುದಾಯದ ಜನರು ಯಾವುದೇ ಕಾರಣಕ್ಕೂ ಢೋಂಗಿ ಕಾಂಗ್ರೆಸ್ಸಿಗರಿಗೆ ಮತ ಹಾಕಬಾರದು’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮನವಿ ಮಾಡಿದರು.

‘ಕಾಂಗ್ರೆಸ್ಸಿಗರು ಮತ ಕೇಳಲು ನಮ್ಮ ಓಣಿ, ಕೇರಿಗೆ ಬರುತ್ತಿದ್ದಂತೆ ನಾನು ಹೇಳಿದಂತೆ ನೀವು ಗಂಡಸರಾಗಿ ಪ್ರಶ್ನಿಸಿ. ನಮ್ಮ ಅಂಬೇಡ್ಕರ್‌ ನಿಧನರಾದಾಗ ರಾಜ್‌ಘಾಟ್‌ನಲ್ಲಿ ಏಕೆ ಜಾಗ ಕೊಡಲಿಲ್ಲ. ಚುನಾವಣೆಗೆ ನಿಂತಾಗ ಒಟ್ಟಾಗಿ ಸೋಲಿಸಿದ್ದೇಕೆ ? ಸಂಸತ್‌ನ ಕೇಂದ್ರ ಸಭಾಂಗಣದಲ್ಲಿ ಬಹು ವರ್ಷಗಳ ಕಾಲ ಯಾವ ಕಾರಣಕ್ಕಾಗಿ ಭಾವಚಿತ್ರ ಹಾಕಲಿಲ್ಲ ಎಂಬುದನ್ನು ಪ್ರಶ್ನಿಸಿ’ ಎಂದು ಗುರುವಾರ ರಾತ್ರಿ ನಗರದಲ್ಲಿ ನಡೆದ ಪರಿವರ್ತನಾ ರ‍್ಯಾಲಿಯಲ್ಲಿ ಜಿಗಜಿಣಗಿ ಹೇಳಿದರು.

‘ದಲಿತರಿಗೆ ಗೌರವ ನೀಡದ ನಾಚಿಕೆಗೇಡಿ ಕಾಂಗ್ರೆಸ್ಸಿಗರಿಗೆ ಮುಂದೆ ಎಂದೆಂದೂ ನಿಮ್ಮ ವೋಟು ಹಾಕಬೇಡಿ’ ಎಂದು ಮತ್ತೊಮ್ಮೆ ಕೇಂದ್ರ ಸಚಿವರು ನೆರೆದಿದ್ದ ಜನಸ್ತೋಮದಲ್ಲಿ ಮನವಿ ಮಾಡಿದರು.

ಬೇವರ್ಸಿ ಕಾಂಗ್ರೆಸ್ಸಿಗರು: ‘ದಲಿತರ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಉಪಾಹಾರ ಸೇವಿಸಿದ್ದಕ್ಕೆ ಬೇವರ್ಸಿ ಕಾಂಗ್ರೆಸ್ಸಿಗರು ಕಟು ಟೀಕೆ ನಡೆಸಿದರು’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಕಿಡಿಕಾರಿದರು.

‘ಕಾಂಗ್ರೆಸ್ಸಿಗರಿಗೆ ಸಂಸ್ಕೃತಿಯಿಲ್ಲ. ದಲಿತರು, ಹಿಂದುಳಿದವರು, ಮುಸ್ಲಿಮರನ್ನು ಇಂದಿಗೂ ಭಯದಲ್ಲಿಟ್ಟುಕೊಂಡು ವೋಟು ಪಡೆಯುವುದೊಂದೇ ಅವರ ಗುರಿ. ಬಹು ವರ್ಷ ಗರೀಬಿ ಹಠಾವೋ ಹೆಸರಿನಲ್ಲಿ ಅಧಿಕಾರದ ಸವಿಯುಂಡರೇ ಹೊರತು, ಒಂದೇ ಒಂದು ಮಾದರ ಓಣಿ, ಕೇರಿ ಇಂದಿಗೂ ಗರೀಬಿ ಹಠಾವೋದಿಂದ ಮುಕ್ತಿ ಮಾಡಲಿಲ್ಲ. ಇದರ ಬದಲಿಗೆ ತಮ್ಮ ಗರೀಬಿಯನ್ನಷ್ಟೇ ಹಠಾವೋ ಮಾಡಿಕೊಂಡರು’ ಎಂದು ಕಾರಜೋಳ ಲೇವಡಿ ಮಾಡಿದರು.

ಸೋನಿಯಾ–ರಾಹುಲ್ ಇಂದಿಗೂ ಬೇಲ್‌ನಲ್ಲೇ ಇದ್ದಾರೆ: ಬಿಎಸ್‌ವೈ

ವಿಜಯಪುರ: ‘ಪದೇ ಪದೇ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವ ಎಂದು ಟೀಕಿಸುವ ಕಾಂಗ್ರೆಸ್ಸಿಗರಿಗೆ, ಇಂದಿಗೂ ತಮ್ಮ ಅಧಿನಾಯಕಿ, ಯುವ ರಾಜ ಬೇಲ್‌ನಲ್ಲೇ ಹೊರಗಿರುವುದು ಗೊತ್ತಿಲ್ಲವೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

‘ನನ್ನ ವಿರುದ್ಧ ಟೀಕೆ ನಡೆಸುವ ಕಾಂಗ್ರೆಸ್ಸಿಗರಿಗೆ, ಈ ಹಿಂದಿನ ಯುಪಿಎ ಅವಧಿಯಲ್ಲಿನ ಭ್ರಷ್ಟಾಚಾರದ ಹಗರಣಗಳು ಮರೆತು ಹೋದವಾ ಎಂದು’ ಗುರುವಾರ ರಾತ್ರಿ ನಗರದಲ್ಲಿ ನಡೆದ ಪರಿವರ್ತನಾ ರ‍್ಯಾಲಿಯಲ್ಲಿ ಛೇಡಿಸಿದರು.

‘ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧ ಹರಿಹಾಯ್ದ ಬಿಎಸ್‌ವೈ, ನನ್ನ ವಿರುದ್ಧದ ಹಗರಣಗಳನ್ನು 24 ತಾಸಿನೊಳಗೆ ಬಹಿರಂಗಪಡಿಸು. ಡಿ 2ರ ಶನಿವಾರ ನಿನ್ನ ಕ್ಷೇತ್ರದಲ್ಲೇ ತಕ್ಕ ಉತ್ತರ ನೀಡುವೆ’ ಎಂದು ಸವಾಲು ಹಾಕಿದರು.

‘ಎಂ.ಬಿ.ಪಾಟೀಲ ರೈತರ ಪಾಲಿಗೆ ನೀನು ಬದುಕಿದ್ದಿಯೋ ? ಸತ್ತಿಯೋ ? ಎಂಬುದೇ ತಿಳಿಯುತ್ತಿಲ್ಲ. ಕೃಷ್ಣಾಕೊಳ್ಳದ ನೀರಾವರಿ ಯೋಜನೆಗಳಿಗೆ ₹ 1 ಲಕ್ಷ ಕೋಟಿ ಬೇಕಿದ್ದರೂ, ಪ್ರಧಾನಮಂತ್ರಿ ಕಾಲು ಹಿಡಿದು ತಂದು ಕೊಡುವೆ. ಮೊದಲು ಆಲಮಟ್ಟಿಯ ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ಗೆ ಎತ್ತರಿಸಲು ಕ್ರಮ ತೆಗೆದುಕೋ’ ಎಂದು ಯಡಿಯೂರಪ್ಪ ಹೇಳಿದರು.

* *

ಪುಟಗಟ್ಟಲೇ ಜಾಹೀರಾತು ಕೊಟ್ಟಿರುವುದೇ ಕಾಂಗ್ರೆಸ್‌ ಸರ್ಕಾರದ ನೀರಾವರಿ ಸಾಧನೆ. ಯುಕೆಪಿಗಾಗಿ ಕೇವಲ ₨ 6890 ಕೋಟಿ ಖರ್ಚು ಮಾಡಿದ್ದಾರೆ
ಬಸವರಾಜ ಬೊಮ್ಮಾಯಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.