ADVERTISEMENT

ಕಾಂಗ್ರೆಸ್ ಕುತಂತ್ರಕ್ಕೆ ಸಮಾಜ ಬಲಿಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:44 IST
Last Updated 27 ಜುಲೈ 2017, 5:44 IST

ಸಿಂದಗಿ: ಲಿಂಗಾಯತ ಸ್ವತಂತ್ರ ಧರ್ಮ ವನ್ನಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮ್ಯನವರ ನಡೆಯನ್ನು ನಗರದಲ್ಲಿ ವ್ಯಾಪಕವಾಗಿ ಖಂಡಿಸಲಾಯಿತು. ಅಖಿಲ ಭಾರತ ವೀರಶೈವ ಮಹಾ ಸಭೆ ತಾಲ್ಲೂಕು ಶಾಖೆ, ತಾಲ್ಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜೆಡಿಎಸ್ ನೇತೃತ್ವದಲ್ಲಿ ಬುಧವಾರ ನಡೆದ ಜಂಟಿ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಲಿಂಗಾ ಯತ ಸ್ವತಂತ್ರ ಧರ್ಮ ಸ್ಥಾಪನೆ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಕಳಿಸುವ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಜೆಡಿಎಸ್ ಧುರೀಣ ಅಶೋಕ ಮನಗೂಳಿ ಖಂಡಿಸಿದರು.

ಬಸವಣ್ಣನವರನ್ನು ಬಂಡವಾಳವನ್ನಾಗಿ ಮಾಡಿಕೊಂಡು ಸದಾ ಸಮಾಜವನ್ನು ದಾರಿ ತಪ್ಪಿಸುವ ಹೇಳಿಕೆ ನೀಡುವ ಮಾತೆ ಮಹಾದೇವಿ ಜಾತಿ ಜಂಗಮರೇ ಲಿಂಗಾಯತರ ಶತ್ರುಗಳು ಎಂದು ಹೇಳಿರುವುದಕ್ಕೆ ಕೂಡಲೇ ಕ್ಷಮೆಯಾಚಿಸಬೇಕು.

ADVERTISEMENT

ಇಲ್ಲದಿದ್ದರೆ ತಾವು ಯಾವುದೇ ಊರಲ್ಲಿ ಪ್ರವೇಶಿಸಿದರೂ ಅಲ್ಲಲ್ಲಿ ಜಂಗಮ ಬಂಧುಗಳಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರಯ್ಯ ಹಿರೇಮಠ ಬಂದಾಳ ಹಾಗೂ ಗಾಣಿಗರ ಸಮಾಜದ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಪ್ರಥಮ ಗುರು ಜಂಗಮರು, ಜಂಗಮರನ್ನು ವಿರೋಧಿ ಸುವ ಜಂಗಮತ್ವ ಸ್ಥಾನದಲ್ಲಿರುವ ಸ್ವಾಮಿಗಳು ಜಂಗಮರೇ ಅಲ್ಲ ಎಂದು ಗೊಲ್ಲಾಳಪ್ಪಗೌಡ ಕಟುವಾಗಿ ಬಸವಧರ್ಮಪೀಠದ ಮಾತೆ ಮಹಾದೇವಿಯವರನ್ನು ಗುರಿಯಾ ಗಿಟ್ಟುಕೊಂಡು ಟೀಕಿಸಿದರು.

ವೀರಶೈವ ಮತ್ತು ಲಿಂಗಾಯತ ಇವೆ ರಡನ್ನೂ ಪ್ರತ್ಯೇಕಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಕೂಡ ಖಂಡನೀಯವಾದುದು ಎಂದರು.

ವೀರಶೈವ ಪರಿಕಲ್ಪನೆ ಸನಾತನವಾ ದುದು. ಬಸವಣ್ಣನವರು ವೀರಶೈವ ಧರ್ಮವನ್ನು ಪುನರುಜ್ಜೀವನಗೊಳಿ ಸಿದವರು ಎಂದು ಅಶೋಕ ವಾರದ ತಿಳಿಸಿದರು. ಸಭೆಯಲ್ಲಿ ಶ್ರೀಶೈಲ ನಂದಿಕೋಲ, ಬಸವರಾಜ ವಸ್ತ್ರದ, ಶಿವಜಾತ ಹಿರೇಮಠ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ಸಿದ್ಧಣ್ಣ ಹಿರೇಕುರುಬರ, ಬಸವರಾಜ ಅಂಬಲಗಿ, ಶರಣಯ್ಯ ಮಠ ಇದ್ದರು.

‘ಮುಖ್ಯಮಂತ್ರಿ ನಿಲುವಿಗೆ ಬೆಂಬಲ’
ಸಿಂದಗಿ: ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಲಿಂಗಾಯತ ಧರ್ಮ. ಸ್ವತಂತ್ರ ಧರ್ಮವಾದಾಗಲೇ ಲಿಂಗಾಯತರ ಏಳ್ಗೆ ಸಾಧ್ಯ. ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಹೇಳಿದರು.

ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಬಸವಣ್ಣನವರ ಜಾತ್ಯತೀತ ನಿಲುವು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸಿಕೊಂಡು ಸಾಗಿದ್ದಾರೆ. ಅವರ ಆದರ್ಶ ಎದುರಿಗಿಟ್ಟುಕೊಂಡು ಲಿಂಗಾಯತ ಸ್ವತಂತ್ರ ಧರ್ಮವನ್ನಾಗಿ ಘೋಷಣೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವುದು ಅಭಿನಂದನಾರ್ಹ ಕಾರ್ಯ ಎಂದು ಹೇಳಿದರು.

ಲಿಂಗಾಯತ ಒಂದು ಜಾತಿಗೆ ಸೀಮಿತವಾದುದು ಅಲ್ಲ. ಕೆಳವರ್ಗಗಳನ್ನೊಳಗೊಂಡ ಒಂದು ವಿಶಾಲ ಧರ್ಮ. ಇದನ್ನು ಸ್ವತಂತ್ರ ಧರ್ಮವ ನ್ನಾಗಿ ಮಾಡುವುದರಿಂದ ಶಿಕ್ಷಣ, ಉದ್ಯೋಗದ ಅವಕಾಶ ದೊರಕುತ್ತವೆ. ಸಿದ್ದರಾಮಯ್ಯನವರು ಬಸವ ತತ್ವದ ಹಾದಿಯಲ್ಲಿ ಸಾಗುತ್ತ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಘೋಷಣೆ ಮಾಡಿದ್ದಾರೆ ಎಂದರು.

ಅಲ್ಲದೇ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಹಾಕುವಂತೆ ಆದೇಶ ಮಾಡಿರುವುದು. ಮಹಿಳಾ ವಿ.ವಿ.ಗೆ ಅಕ್ಕಮಹಾದೇವಿ ನಾಮಕರಣ ಮಾಡಿರುವುದು ಸ್ವಾಗತಾರ್ಹ ಕ್ರಮ ಎಂದರು.

ಲಿಂಗಾಯತ ಕೋಮಿಗೆ ಸೇರಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವಿರೋಧಿಸುವುದು ಸರಿಯಲ್ಲ. ಲಿಂಗಾಯತ ಸಮುದಾಯದ ಬಗ್ಗೆ ನಿಜವಾದ ಕಳಕಳಿ ಇದ್ದರೆ ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ಸ್ವತಂತ್ರ ಧರ್ಮ ಘೋಷಣೆಗೆ ಮುಂದಾಗ ಬೇಕು ಎಂದು ಸಲಹೆ ನೀಡಿದರು.
ಚನ್ನೂ ವಾರದ, ಶಿವನಗೌಡ ಬಿರಾದಾರ, ಯೋಗಪ್ಪಗೌಡ ಪಾಟೀಲ, ಕೊಣ್ಣೂರ ವಕೀಲ, ಸಿ.ಎಂ.ದೇವರಡ್ಡಿ ಇದ್ದರು.

* * 

ವೀರಶೈವ, ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿ ಸಿದರೆ ಒಪ್ಪಿಗೆ ಸೂಚಿಸಲಾಗುವುದು. ಬರೀ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ನಮ್ಮದು ವಿರೋಧವಿದೆ
ಅಶೋಕ ವಾರದ
ಅಖಿಲ ಭಾರತ ವೀರಶೈವ ಮಹಾಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.