ADVERTISEMENT

ಕಾಲುವೆಗೆ ಪ್ರಾಯೋಗಿಕವಾಗಿ ನೀರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 6:44 IST
Last Updated 16 ಡಿಸೆಂಬರ್ 2017, 6:44 IST
ಮುಳವಾಡ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಎಂ.ಬಿ.ಪಾಟೀಲ
ಮುಳವಾಡ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಎಂ.ಬಿ.ಪಾಟೀಲ   

ವಿಜಯಪುರ: ಏಷ್ಯಾ ಖಂಡದಲ್ಲೇ ಬೃಹತ್ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ. ಜಿಲ್ಲೆಯ ಜನರ ಬಹು ದಿನಗಳ ಕನಸು ಮುಳವಾಡ ಏತ ನೀರಾವರಿ ನಾಲ್ಕನೇ ಹಂತದ ಯೋಜನೆ ಶನಿವಾರ ನನಸಾಗಲಿದೆ.

ಮುಳವಾಡ ಏತ ನೀರಾವರಿ ಯೋಜನೆಯ 4ನೇ ಹಂತದ ಮುಳವಾಡ ಗ್ರಾಮದ ಹತ್ತಿರ ನಿರ್ಮಿಸಿರುವ 4 ಎ ಲಿಫ್ಟ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ಬೆಳಿಗ್ಗೆ ಪ್ರಾಯೋಗಿಕವಾಗಿ ಬಬಲೇಶ್ವರ ಶಾಖಾ ಕಾಲುವೆಗೆ ನೀರು ಹರಿಸಲು ಚಾಲನೆ ನೀಡಲಾಗುತ್ತದೆ.

ಮುಳವಾಡ ಏತ ನೀರಾವರಿ ಯೋಜನೆ ಬಬಲೇಶ್ವರ ಶಾಖಾ ಕಾಲುವೆಯ ರಾಷ್ಟ್ರೀಯ ಹೆದ್ದಾರಿ- 218 ಕ್ರಾಸಿಂಗ್ ಕಾಮಗಾರಿ, ಮುಳವಾಡ, -ಕಾರಜೋಳ ಸಮೀಪ ವಿವಿಧ ಕಾಲುವೆಗಳನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ವೀಕ್ಷಿಸಿದರು.

ADVERTISEMENT

ನಂತರ ಮಾತನಾಡಿ, ‘ಬ್ರಿಟಿಷರ ಕಾಲದಲ್ಲೇ ಸರ್ವೇಯಾಗಿ ಇದುವರೆಗೂ ನನೆಗುದಿಗೆ ಬಿದ್ದಿದ್ದ ಮುಳವಾಡ ಏತ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದೀಗ ಹಂತ ನಾಲ್ಕರ ಕಾಮಗಾರಿಗಳು ಪೂರ್ಣಗೊಂಡಿವೆ. ಶನಿವಾರದಿಂದಲೇ ಕಾಲುವೆಗಳಿಗೆ ನೀರು ಹರಿಸಲು ಚಾಲನೆ ನೀಡಲಾಗುವುದು’ ಎಂದು ಪ್ರಕಟಿಸಿದರು.

ಮುಳವಾಡ 4 ಎ ಲಿಫ್ಟ್‌ನಲ್ಲಿ ಈ ಬೃಹತ್ ಮೋಟಾರ್‌ ಚಾಲನೆಗೊಳಿಸಲು 220 ಕೆ.ವಿ. ವಿದ್ಯುತ್ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಮಸೂತಿಯಿಂದ 12.5 ಕಿ.ಮೀ. ವಿದ್ಯುತ್ ಲೈನ್ ಸಂಪರ್ಕ ಪೂರ್ಣ ಗೊಂಡಿದೆ ಎಂದು ಹೇಳಿದರು.

64,210 ಎಕರೆಗೆ ನೀರಾವರಿ: ಮುಳವಾಡ 4ಎ ಲಿಫ್ಟ್‌ನಿಂದ ಎರಡು ಕಾಲುವೆಗಳು ಆರಂಭಗೊಂಡಿದ್ದು, 41 ಕಿ.ಮೀ. ಉದ್ದದ ಬಬಲೇಶ್ವರ ಶಾಖಾ ಕಾಲುವೆ 39 ಕಿ.ಮೀ. ಪೂರ್ಣಗೊಂಡಿದೆ. ಮುಳವಾಡ, ಕಾರಜೋಳ, ಕಾಖಂಡಕಿ, ಬಬಲೇಶ್ವರ, ನಿಡೋಣಿ, ತೊನಶ್ಯಾಳ, ಕುಬಕಡ್ಡಿ, ಸಾರವಾಡ, ದೂಡಿಹಾಳ, ಮದಗುಣಕಿ, ಶೇಗುಣಸಿ, ಕಂಬಾಗಿ, ಹಲಗಣಿ, ಯಕ್ಕುಂಡಿ, ಕಣಮುಚನಾಳ, ದಾಶ್ಯಾಳ, ತಿಗಣಿಬಿದರಿ, ನಾಗರಾಳ, ಕುಮಠೆ, ಅರ್ಜುಣಗಿ, ಹೊಕ್ಕುಂಡಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಖಾಜಿಬೀಳಗಿ, ಗೋಠೆ, ತೊದಲಬಾಗಿ, ಕಲಬೀಳಗಿ, ಗದ್ಯಾಳ ಗ್ರಾಮಗಳ 64,210 ಎಕರೆ ಭೂಮಿ ಈ ಯೋಜನೆಯಿಂದ ನೀರಾವರಿ ಗೊಳಪಡಲಿದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ಹೇಳಿದರು.

ಪ್ರತಿ ಸೆಕೆಂಡ್‌ಗೆ 19,500 ಲೀಟರ್‌ ನೀರು ಕಾಲುವೆಗೆ: ಯೋಜನೆಯಡಿ ಹಲ ಅತ್ಯಾಧುನಿಕ ಯಂತ್ರ ಅಳವಡಿಸಲಾಗಿದೆ. ಮುಳವಾಡದಲ್ಲಿ 2,690 ಎಚ್.ಪಿ.ಯ ಮೂರು ಮೋಟರ್‌ಗಳಿಂದ ಪ್ರತಿ ಸೆಕೆಂಡಿಗೆ 19,500 ಲೀಟರ್‌ ನೀರನ್ನು ಕಾಲುವೆಗೆ ಪಂಪ್‌ ಮಾಡಿ ಹರಿಸಲಿವೆ.

ಮನಗೂಳಿ ಶಾಖಾ ಕಾಲುವೆಗೆ 2,590 ಎಚ್.ಪಿ.ಯ 5 ಮೋಟರ್‌ ಅಳವಡಿಸಲಾಗುತ್ತಿದೆ. ಮುಂದಿನ ವಾರ ಪೂರ್ಣಗೊಳ್ಳಲಿದೆ. ಈ ಮೋಟಾರ್‌ಗಳಿಂದ ಪ್ರತಿ ಸೆಕೆಂಡಿಗೆ 10,482 ಲೀಟರ್‌ ನೀರು ಕಾಲುವೆಗೆ ಪಂಪ್‌ ಆಗಲಿದೆ.

32.16 ಕಿ.ಮೀ. ಉದ್ದವಿರುವ ಕಲಗುರ್ಕಿ, ಹಿಟ್ನಳ್ಳಿ, ತಳೇವಾಡ, ಮಸೂತಿ, ಕೂಡಗಿ, ಮಲಘಾಣ, ಮುತ್ತಗಿ, ಯರನಾಳ, ಹತ್ತರಕಿಹಾಳ, ಉಕ್ಕಲಿ, ಕತ್ನಳ್ಳಿ, ಹೆಗಡಿಹಾಳ, ಉತ್ನಾಳ ಗ್ರಾಮಗಳ 45,512 ಎಕರೆ ಭೂಮಿ, ಮುಳವಾಡ ಗ್ರಾಮದ 5 ಸಾವಿರ ಎಕರೆ ಭೂಮಿ ನೀರಾವರಿಗೊಳಪಡಲಿದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

* * 

ನೀರಾವರಿ ಯೋಜನೆ ಪೂರ್ಣಗೊಳ್ಳಲು ಕನಿಷ್ಠ 10–15 ವರ್ಷ ಬೇಕು. 18 ತಿಂಗಳಲ್ಲಿಯೇ ಈ ಯೋಜನೆ ಪೂರ್ಣ ಮಾಡಿದ ಹೆಮ್ಮೆ ಇಲಾಖೆಯದ್ದು
ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.