ADVERTISEMENT

ಕೂಡಗಿ ಎನ್‌ಟಿಪಿಸಿ ವಿರುದ್ಧ ನಿಲ್ಲದ ಹೋರಾಟ

ಚರ್ಚೆಯ ಆಹ್ವಾನ ತಿರಸ್ಕಾರ: ಮುಚ್ಚಳಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 6:45 IST
Last Updated 22 ಆಗಸ್ಟ್ 2014, 6:45 IST
ಕೂಡಗಿ ಎನ್‌ಟಿಪಿಸಿ ವಿರುದ್ಧ ನಿಲ್ಲದ ಹೋರಾಟ
ಕೂಡಗಿ ಎನ್‌ಟಿಪಿಸಿ ವಿರುದ್ಧ ನಿಲ್ಲದ ಹೋರಾಟ   

ವಿಜಾಪುರ: ಕೂಡಗಿ ಸೂಪರ್ ಥರ್ಮಲ್‌ ಪವರ್ ಘಟಕದ ವಿರುದ್ಧ ನಡೆಯುತ್ತಿರುವ ತೀವ್ರ ಪ್ರತಿಭಟನೆ­ಯನ್ನು ಶಾಂತಗೊಳಿಸಲು ರೈತ ಸಂಘದ ಮುಖಂಡರು, ರೈತರನ್ನು ಮನವೊಲಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯದಲ್ಲಿ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಲು ಆ.14ರಂದು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.21ರ ನಂತರ ಜಿಲ್ಲಾಡಳಿತ, ಅವಳಿ ಜಿಲ್ಲೆಗಳ ಉಸ್ತುವಾರಿ ಸಚಿವರು, ಇಂಧನ ಸಚಿವರ ಸಮಕ್ಷಮದಲ್ಲಿ ರೈತರ ಸಭೆ ನಡೆಸಲಾಗುವುದು.

ಕೂಡಗಿ ಸುತ್ತಮುತ್ತಲ ಗ್ರಾಮಗಳ ಪ್ರಮುಖ­ರನ್ನು ಬೆಂಗಳೂರಿಗೆ ಕರೆಸಿಕೊಂಡು ಘಟಕ ಸ್ಥಾಪನೆ ಕುರಿತಂತೆ ರೈತರ, ಮುಖಂಡರ ಮನವೊಲಿಸ­ಲಾಗುವುದು ಎಂದು ಪ್ರಕಟಿಸಿದ್ದರು. ಸಿದ್ದರಾಮಯ್ಯ ಅವರ ಆಹ್ವಾನವನ್ನು ಸ್ಥಳೀಯ ಹೋರಾಟಗಾರರು ಮಂಗಳವಾರ ಮುತ್ತಗಿಯಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ತಿರಸ್ಕರಿಸಿದ್ದಾರೆ.

ಸರ್ಕಾರ ಆಯೋಜಿಸುವ ಸಭೆ ಕುರಿತು ಇದು­ವರೆಗೂ ಜಿಲ್ಲಾಡಳಿತದಿಂದ ರೈತ ಪ್ರಮುಖರಿಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ. ದಿನ ನಿಗದಿಪಡಿಸಿ ಆಹ್ವಾನ ನೀಡಿದರೂ ಸರ್ಕಾರದ ಸಭೆಯಲ್ಲಿ ಪಾಲ್ಗೊಳ್ಳದಂತೆ ರೈತರು ನಿರ್ಣಯ ಅಂಗೀಕರಿಸಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಲಮಟ್ಟಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರನ್ನು ಮುಖ್ಯಮಂತ್ರಿ ಭೇಟಿ ಮಾಡದೆ ಖಾಕಿ ಕಾವಲಿನಲ್ಲೇ ಕೃಷ್ಣೆಗೆ ಬಾಗಿನ ಅರ್ಪಿಸಿ ಹಾರಿ ಬಂದ ‘ಉಕ್ಕಿನ ಹಕ್ಕಿ’ಯಲ್ಲೇ ಮರಳಿದರು. ಘಟನೆ ನಡೆದು ಒಂದೂವರೆ ತಿಂಗಳು ಗತಿಸಿದರೂ ಜಿಲ್ಲಾ ಉಸ್ತು­ವಾರಿ ಸಚಿವರಾಗಲಿ, ಸಂಸದರಾಗಲಿ ಸಂತ್ರಸ್ತ ಗ್ರಾಮಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ.

ಸುತ್ತಮುತ್ತಲ ಹಳ್ಳಿಗಳ ರೈತ ಪ್ರಮುಖರು ಬೆಂಗಳೂರಿಗೆ ತೆರಳಿದರೂ, ಘಟಕದಿಂದ ಹಾನಿಯಿಲ್ಲ. ಸ್ಥಾವರ ನಿರ್ಮಾಣಕ್ಕೆ ಸಹಕರಿಸಿ. ರಾಜ್ಯಕ್ಕೆ, ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ­ವಾಗುತ್ತದೆ ಎಂಬ ಹೇಳಿಕೆಗಳೇ ಪುನರಾವರ್ತನೆ ಆಗುತ್ತವೆ ವಿನಾ ಸುಪ್ರೀಂಕೋರ್ಟ್‌ನಲ್ಲಿ ಮುಚ್ಚಳಿಕೆ ಬರೆದುಕೊಡಲು ಯಾರೂ ಸಿದ್ಧರಿಲ್ಲ. ಆದ್ದರಿಂದ ಬೆಂಗಳೂರಿಗೆ ತೆರಳಿ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ರೈತರು ಒಕ್ಕೊರಲ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರೈತ ಸಂಘದ ಪ್ರಮುಖರು ತಿಳಿಸಿದ್ದಾರೆ.

ಅಹೋರಾತ್ರಿ ಧರಣಿಗೆ ನಿರ್ಧಾರ: ಕೂಡಗಿ ಶಾಖೋತ್ಪನ್ನ ಸ್ಥಾವರದ ಪರ ಜಿಲ್ಲೆಯ ಜನಪ್ರತಿನಿಧಿಗಳ ಜತೆ ರಾಜ್ಯ ಸರ್ಕಾರದ ಬ್ಯಾಟಿಂಗ್ ಬಿರುಸಾಗಿದೆ. ಸ್ಥಾವರ ನಿರ್ಮಾಣ ಖಚಿತ. ಪೂರಕ ಸಹಕಾರ ನೀಡಿ ಎಂದು ಮಾಧ್ಯಮಗಳ ಮೂಲಕವೇ ಜಿಲ್ಲಾ  ಉಸ್ತುವಾರಿ ಸಚಿವರು ಸೇರಿದಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಸ್ಥಾವರ ಪರ ನಿಲುವು ತಳೆಯುತ್ತಿದ್ದಂತೆ ಗೋಲಿಬಾರ್ ಪ್ರಕರಣದ ನಂತರ ಹೋರಾಟದ ಮುಂಚೂಣಿ ವಹಿಸಿರುವ ರಾಜ್ಯ ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಹೋರಾಟ ತೀವ್ರಗೊಳಿಸಲು ಕೂಡಗಿ ಸುತ್ತಲಿನ ಹಳ್ಳಿಗಳಲ್ಲಿ ರೈತರ ಸಂಘಟನೆಗೆ ಮುಂದಾಗಿದೆ.

ಈಗಾಗಲೇ ರೈಲು ತಡೆ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿ ಸ್ಥಾವರ ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಸಂಘ ಇದೀಗ ತನ್ನ ಆಕ್ರೋಶವನ್ನು ರಾಜ್ಯ ಸರ್ಕಾರದತ್ತ ತಿರುಗಿಸಿದೆ.

ಬಸವನ ಬಾಗೇವಾಡಿ ತಹಶೀಲ್ದಾರ್ ಕಚೇರಿ ಎದುರು ಆ 27ರಿಂದ ಜಾನುವಾರು, ಚಕ್ಕಡಿ, ಕುರಿಗಳ ಜತೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದು, ಶೀಘ್ರವೇ ಪ್ರಕಟಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ನಿವಾಸದ ಎದುರು ಜಾನುವಾರುಗಳ ಜತೆ ಪ್ರತಿಭಟಿಸುವ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯಲಾಗಿದೆ. ಇದೀಗ ಮಳೆ ಬಿದ್ದಿದೆ. ಕೃಷಿ ಕೆಲಸಗಳಿಗೆ ಆದ್ಯತೆ ನೀಡಬೇಕು. ಜತೆಗೆ ದೂರದ ಸ್ಥಳವಾಗುತ್ತದೆ ಎಂಬ ಕಾರಣದಿಂದ ನಿರ್ಧಾರ ಬದಲಿಸಲಾಗಿದೆ. ತಹಶೀಲ್ದಾರ್‌ ಕಚೇರಿ ಎದುರು ಅಹೋರಾತ್ರಿ ಧರಣಿಯ ಪರಿಣಾಮ ನೋಡಿ­ಕೊಂಡು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು.

ಸ್ಥಾವರದಿಂದ ಮುಂದಿನ ದಿನಗಳಲ್ಲಿ ಕೂಡಗಿ ಸುತ್ತಲಿನ ಪರಿಸರ, ಜನ ಜೀವನಕ್ಕೆ ಧಕ್ಕೆ ಉಂಟಾದರೆ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಲಾಗುವುದು ಎಂದು ಎನ್‌ಟಿಪಿಸಿ ಸುಪ್ರೀಂಕೋರ್ಟ್‌ನಲ್ಲಿ ಮುಚ್ಚಳಿಕೆ ಬರೆದುಕೊಟ್ಟರೆ ಹೋರಾಟಕ್ಕೆ ಇತಿಶ್ರೀ ಹಾಕಲಾಗುವುದು. ಆದರೆ ಎನ್‌ಟಿಪಿಸಿ ಅಧಿಕಾರಿಗಳಾಗಲಿ, ಸರ್ಕಾರಗಳಾಗಲಿ ಈ ಕುರಿತು ಮಾತನಾಡಲು ಮುಂದಾಗುತ್ತಿಲ್ಲ’ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.