ADVERTISEMENT

ಕೋಟೆ ನಗರಿಯಲ್ಲಿ ಕಬಡ್ಡಿ ಕಲರವ

ಡಿ.ಬಿ, ನಾಗರಾಜ
Published 19 ನವೆಂಬರ್ 2017, 7:22 IST
Last Updated 19 ನವೆಂಬರ್ 2017, 7:22 IST

ವಿಜಯಪುರ: ಕೋಟೆ ನಗರಿ ಖ್ಯಾತಿಯ, ಐತಿಹಾಸಿಕ ತಾಳಿಕೋಟೆ ಪಟ್ಟಣ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ. ಇದೇ 19ರ ಭಾನುವಾರ, 20ರ ಸೋಮವಾರ ಎರಡು ದಿನ ಕಬಡ್ಡಿ ಕಲರವ ಅನುರಣಿಸಲಿದೆ. ಪಂದ್ಯಾವಳಿಗಾಗಿ ನಾಲ್ಕು ಅಂಕಣಗಳನ್ನು ಸಿದ್ದಗೊಳಿಸಲಾಗಿದ್ದು, ತಲಾ ಎರಡು ಅಂಕಣಗಳಲ್ಲಿ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾವಳಿ ನಡೆಯಲಿವೆ.

ಭಾನುವಾರ ಮುಂಜಾನೆ 9 ಗಂಟೆಗೆ ಆರಂಭಗೊಳ್ಳಲಿರುವ ಕಬಡ್ಡಿ ಕಲರವ ಸೋಮವಾರ ಮುಸ್ಸಂಜೆವರೆಗೂ ಮಾರ್ದನಿಸಲಿದೆ. ಹೊನಲು ಬೆಳಕಿನ ಪಂದ್ಯಾವಳಿಗಳು ನಡೆಯಲಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಪೂರ್ಣಗೊಳಿಸಲಾಗಿದೆ.

ನಾಲ್ಕು ಅಂಕಣದ ಸುತ್ತಲೂ 15 ಅಡಿ ದೂರದಲ್ಲಿ ಯೂ ಶೇಪ್‌ ಮಾದರಿಯಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದ್ದು, 6000 ಜನರು ಪಂದ್ಯಾವಳಿ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಅಂಕದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಳಿಕೋಟೆಯ ಎಚ್.ಎಸ್.ಪಾಟೀಲ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪಂದ್ಯಾವಳಿ ನಡೆಯಲಿವೆ. ದೂರದ ಜಿಲ್ಲೆಯ ಕ್ರೀಡಾಪಟುಗಳು ಶನಿವಾರವೇ ಪಟ್ಟಣಕ್ಕೆ ಬಂದಿಳಿದಿದ್ದು, ಮುಸ್ಸಂಜೆ ತಾಲೀಮು ನಡೆಸಿದರು.

ರಾಜ್ಯದ ಎಲ್ಲ ಪದವಿ ಪೂರ್ವ ಶೈಕ್ಷಣಿಕ ಜಿಲ್ಲೆಗಳ ತಲಾ 32 ಬಾಲಕರ–ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಒಟ್ಟು 900 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ವಸತಿ–ಊಟೋಪಚಾರದ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಸಂಘಟಕರು ಆಯೋಜಿಸಿದ್ದಾರೆ ಎಂದು ಡಿಡಿಪಿಯು ಹೇಳಿದರು.

‘ಬಾಲಕಿಯರಿಗೆ ತಾಳಿಕೋಟೆ ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಎಚ್.ಎಸ್.ಪಾಟೀಲ ಪದವಿ ಪೂರ್ವ ಕಾಲೇಜು, ಎಸ್.ಕೆ.ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕರ ವಸತಿ ವ್ಯವಸ್ಥೆ ಮಾಡಲಾಗಿದೆ.

ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರಿಗೆ ಸೇರಿದಂತೆ ಸಂಘಟಕರಿಗೆ ಊಟದ ವ್ಯವಸ್ಥೆಯನ್ನು ನಮ್ಮ ಸಂಸ್ಥೆಯ ಆವರಣದಲ್ಲಿ ಮಾಡಲಾಗಿದೆ. ಪಂದ್ಯಾವಳಿ ಸ್ಥಳಕ್ಕೂ ವಸತಿ ಸ್ಥಳಕ್ಕೂ ಸಾಕಷ್ಟು ದೂರವಿದ್ದು, ಕ್ರೀಡಾಪಟುಗಳನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ’ ಎಂದು ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ತಿಳಿಸಿದರು.

ಮೆರವಣಿಗೆ: ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಕ್ರೀಡಾಪಟುಗಳು ಭಾನುವಾರ ಬೆಳಿಗ್ಗೆ ತಾಳಿಕೋಟೆ ಪಟ್ಟಣದ ಎಸ್.ಕೆ.ಪದವಿ ಕಾಲೇಜಿನಿಂದ ಮೆರವಣಿಗೆ ಮೂಲಕ ಬಿಜಾಪುರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕತ್ರಿ ಬಜಾರ, ಶಿವಾಜಿ ಸರ್ಕಲ್, ಬಸ್ ನಿಲ್ದಾಣ ಮಾರ್ಗವಾಗಿ ಪಂದ್ಯಾವಳಿ ನಡೆಯುವ ಮೈದಾನಕ್ಕೆ ಬರುವುದು ವಿಶೇಷ. ಪಂದ್ಯಾವಳಿ ಆಯೋಜನೆಯ ಸ್ಥಳದಿಂದ ಅನತಿ ದೂರದಲ್ಲೇ ಉದ್ಘಾಟನಾ ಸಮಾರಂಭದ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದೆ.

ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಅನುಭವ ಹೊಂದಿರುವ 26 ನಿರ್ಣಾಯಕರು ಸೇರಿದಂತೆ, ಜಿಲ್ಲೆಯ 10ಕ್ಕೂ ಹೆಚ್ಚು ನಿರ್ಣಾಯಕರು ತೀರ್ಪು ನೀಡಲಿದ್ದಾರೆ. ಒಟ್ಟಾರೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಎ.ಬಿ.ಅಂಕದ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.