ADVERTISEMENT

ಖಾದಿ ಉತ್ಪನ್ನಕ್ಕೆ ವ್ಯಾಟ್‌ ವಿನಾಯ್ತಿ

ಖಾದಿ ಗ್ರಾಮೋದ್ಯೋಗ ಸಂಘದ ಉಪಾಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:07 IST
Last Updated 10 ಜನವರಿ 2017, 7:07 IST
ವಿಜಯಪುರ: ಖಾದಿ ಮತ್ತು ಗ್ರಾಮೋದ್ಯೋಗ ಸಂಘಗಳಿಂದ ಉತ್ಪಾದನೆಯಾಗುವ, ಮಾರಾಟ ವಾಗುವ ವಸ್ತುಗಳಿಗೆ ವ್ಯಾಟ್ ತೆರಿಗೆ ಸಂಪೂರ್ಣ ವಿನಾಯ್ತಿ ನೀಡಬೇಕು ಎಂದು ಖಾದಿ ಗ್ರಾಮೋದ್ಯೋಗ ಸಂಘದ ಉಪಾಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಒತ್ತಾಯಿಸಿದರು.
 
ಖಾದಿ ಹಾಗೂ ಗ್ರಾಮೋದ್ಯೋಗ ಸಂಘದ ಅಭಿವೃದ್ಧಿಗೆ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ. ಇದರಿಂದ ಖಾದಿ ಉತ್ಪನ್ನಗಳ ಮಾರಾಟ, ಉತ್ಪಾದನಾ ವಸ್ತುಗಳಿಗೆ ಸಂಪೂರ್ಣವಾಗಿ ತೆರಿಗೆ ವಿನಾಯ್ತಿ ನೀಡುವುದರಿಂದ ಖಾದಿ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರಕುತ್ತದೆ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
 
ಖಾದಿ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದ ಅವರು, ಖಾದಿ ಸಂಸ್ಥೆಗಳು ಮುಖ್ಯವಾಗಿ ದುಡಿಯುವ ಬಂಡವಾಳವಿಲ್ಲದೆ ಆರ್ಥಿಕ ತೊಂದರೆ ಎದುರಿಸುತ್ತಿವೆ. ಅನೇಕ ರೀತಿಯ ಕಾರ್ಮಿಕ ಕಾನೂನುಗಳಿಂದಾಗಿ ಖಾದಿ ಸಂಸ್ಥೆಗಳು ತೊಂದರೆ ಎದುರಿಸುತ್ತಿವೆ. ಅಪ್ರಮಾಣಿತ ಖಾದಿ ಭಂಡಾರಗಳಿಂದಾಗಿ ಪ್ರಮಾಣಿತ ಖಾದಿ ಭಂಡಾರಗಳು ನಷ್ಟ ಅನುಭವಿಸುತ್ತಿವೆ. ಕೈಗಾರಿಕಾ ಕಾನೂನುಗಳು ಸಹ ಖಾದಿ ಉದ್ಯಮಕ್ಕೆ ಹೊಡೆತ ನೀಡುತ್ತಿವೆ ಎಂದು ದೂರಿದರು.
 
ಸರ್ಕಾರ ಖಾದಿ ಗ್ರಾಮೋದ್ಯೋಗ ಉದ್ಯಮದ ಉತ್ತೇಜನಕ್ಕಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಖಾದಿ ಉದ್ಯಮದ ಅಭಿವೃದ್ಧಿಗಾಗಿ ಕೂಡಲೇ ಖಾದಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಸುಬು ದಾರರನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ರೋಜಗಾರ ಯೋಜನೆಯಡಿ ಸೇರ್ಪಡೆ ಮಾಡಬೇಕು. ಇದರಿಂದಾಗಿ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ವೇತನ ದೊರಕಿದಂತಾಗುತ್ತದೆ. ಖಾದಿ ಮಾರಾಟದ ಮೇಲೆ ರಿಯಾಯ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಈ ಎಲ್ಲ ಕ್ರಮಗಳಿಂದಾಗಿ ಖಾದಿ ಉದ್ಯಮ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು.
 
ಖಾದಿ ಗ್ರಾಮೋದ್ಯೋಗಕ್ಕೆ ಸರ್ಕಾರ ಹಲ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಅದರಲ್ಲಿ ಎರಡು ಮಾತಿಲ್ಲ. ಖಾದಿಯಲ್ಲಿ ಕೆಲಸ ಮಾಡುವ ನೂಲುಗರಿಗೆ, ನೇಕಾರರಿಗೆ, ಇನ್ನಿತರ ಕೆಲಸಗಾರರಿಗೆ, ಕಾರ್ಯಕರ್ತರಿಗೆ ವಿಶೇಷ ಪ್ರೋತ್ಸಾಹ ಮಜೂರಿಯನ್ನು ಸಹ ಬಿಡುಗಡೆ ಮಾಡಿರುವುದು ಸಂತೋಷದ ಸಂಗತಿ. ಅದರನ್ವಯ 1 ಲಡಿಗೆ ₹ 3, ಖಾದಿ 1 ಮೀಟರ್‌ಗೆ ₹ 7, ಇತರೆ ಕೆಲಸಗಾರರಿಗೆ ₹ 9, ಕಾರ್ಯಕರ್ತರಿಗೆ ಖಾದಿ ಹುಟ್ಟುವಳಿ ಮೇಲೆ ಶೇ 9.5ರಷ್ಟು ವಿಶೇಷ ಮಜೂರಿ ಮಂಜೂರು ಮಾಡಿರುವುದು ಹೊಸ ಭರವಸೆ ಮೂಡಿಸಿದೆ ಎಂದರು.
 
ಖಾದಿ ಬಜಾರ ಸಂಚಾಲಕ ಎಸ್.ಎಲ್.ಹಿರೇಮಠ, ಖಾದಿ ಮಂಡಳಿ ನಿರ್ದೇಶಕ ಸದಾಶಿವ ಗುದಿಗೆನ್ನವರ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಸಾವಿತ್ರಮ್ಮ ದಳವಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  
 
**
ಖಾದಿ ಬಜಾರ್‌ 2017; 12ರಂದು ಚಾಲನೆ
ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಇದೇ 12ರಿಂದ 26ರವರೆಗೆ ‘ಖಾದಿ ಬಜಾರ್-–2017’ ಖಾದಿ ಉತ್ಪನ್ನಗಳ ಮಾರಾಟ ಮೇಳ ನಡೆಯಲಿದೆ ಎಂದು ಖಾದಿ ಬಜಾರ್ ಉಪಾಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ತಿಳಿಸಿದರು.
 
ಇದೇ 12ರಿಂದ ನಡೆಯಲಿರುವ ಖಾದಿ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ ಗ್ರಾಮೋದ್ಯೋಗ ಸಂಘದ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 
ವಸ್ತು ಪ್ರದರ್ಶನದಲ್ಲಿ ನಾನಾ ಬಗೆಯ ಖಾದಿ ಉತ್ಪನ್ನಗಳು, ರಂಗು ರಂಗಿನ ಖಾದಿ ಬಟ್ಟೆಗಳು, ವಿವಿಧ ಗ್ರಾಮೋದ್ಯೋಗ ವಸ್ತುಗಳನ್ನು ಯೋಗ್ಯ ದರದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಮಾರಾಟ ಮಾಡಲಾಗುತ್ತಿದೆ. 
 
ಖಾದಿ ಉತ್ಸವ ಆಯೋಜಿಸಿದಾಗ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಬಾರಿ ಅಂದಾಜು ₹ 60 ಲಕ್ಷ ವಹಿವಾಟು ನಡೆಯುವ ನಿರೀಕ್ಷೆ ಹೊಂದಲಾಗಿದೆ. ಈ ಹಿಂದೆಯೂ ಖಾದಿ ಮೇಳಗಳನ್ನು ಆಯೋಜಿಸಿದ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ವಹಿವಾಟು ನಡೆದಿತ್ತು. 
 
2010ರಲ್ಲಿ ₹ 80 ಲಕ್ಷ, 2011ರಲ್ಲಿ ₹ 85 ಲಕ್ಷ, 2012ರಲ್ಲಿ ₹ 90 ಲಕ್ಷ ಮೊತ್ತದ ದಾಖಲೆ ಪ್ರಮಾಣದಲ್ಲಿ ವಹಿವಾಟು ನಡೆದಿತ್ತು. ಈ ಬಾರಿ ನೋಟು ರದ್ದತಿ ಕಾರಣದಿಂದಾಗಿ ವಹಿವಾಟು ಕಡಿಮೆ ನಡೆಯಲಿದೆ ಎಂದು ಅಂದಾಜಿಸಲಾಗಿದ್ದು, ₹ 60 ಲಕ್ಷ ವಹಿವಾಟು ನಡೆಯಬಹುದು ಎಂದರು.
 
**
ಜೂನ್‌ 2016ರಿಂದ ನೇಕಾರರಿಗೆ ಮಜೂರಿ ಹೆಚ್ಚಿಸಲಾಗಿದೆ. ಈ ಹಿಂದೆ ಒಂದು ಲಡಿಗೆ ₹ 5.50 ಇದ್ದ ಮಜೂರಿಯನ್ನು ಈಗ 1 ಮೀ.ಗೆ ₹ 17 ಏರಿಸಲಾಗಿದೆ 
-ಬಾಪುಗೌಡ ಪಾಟೀಲ ಶೇಗುಣಸಿ
ಉಪಾಧ್ಯಕ್ಚ

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.