ADVERTISEMENT

ಗುಂಡಿನ ದಾಳಿ: ಬಾಣಂತಿಗೆ ಗಾಯ

ಅಪರಾಧ ಸುದ್ದಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2015, 4:39 IST
Last Updated 10 ಏಪ್ರಿಲ್ 2015, 4:39 IST

ಸಿಂದಗಿ (ವಿಜಯಪುರ): ಪಟ್ಟಣದ ಕಂಠೆಪ್ಪ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ಕಳ್ಳರ ತಂಡದಿಂದ ಗುಂಡಿನ ದಾಳಿ ನಡೆದಿದ್ದು, ಬಾಣಂತಿ ಗಾಯ ಗೊಂಡ ಘಟನೆ ನಡೆದಿದೆ.

ಅನಿತಾ ಪರಶುರಾಮ ಗುಂದಗಿ ಗುಂಡೇಟಿನಿಂದ ಗಾಯಗೊಂಡ ಮಹಿಳೆ. ದುಷ್ಕರ್ಮಿಗಳು ಉದ್ದೇಶ ಪೂರ್ವಕ ವಾಗಿ ಕೊಲೆ ಮಾಡುವ ಯತ್ನದಿಂದಲೇ ನನ್ನ ಪತ್ನಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪರುಶರಾಮ ಗುಂದಗಿ ಸಿಂದಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಘಟನೆ ವಿವರ: ಗುರುವಾರ ತಡರಾತ್ರಿ ಕಂಠೆಪ್ಪ ಬಡಾವಣೆಯಲ್ಲಿ ಕಳ್ಳರ ಗ್ಯಾಂಗ್ ಕಳವಿಗೆ ಹೊಂಚು ಹಾಕುತ್ತಿತ್ತು. ಇದು ತಿಳಿಯುತ್ತಿದ್ದಂತೆ ಎಚ್ಚೆತ್ತ ಬಡಾವಣೆಯ ನಾಗರಿಕರ ಗುಂಪು ಈ ತಂಡವನ್ನು ಬೆನ್ನಟ್ಟಿದೆ. ಜನರ ಕೈಗೆ ಸಿಗದಂತೆ ಓಡಿದ ಕಳ್ಳರು ಕತ್ತಲಲ್ಲಿ ಮರೆಯಾಗಿದ್ದಾರೆ.

ರಾತ್ರಿಯಿಡಿ ವಿದ್ಯುತ್‌ ಇರದಿದ್ದರಿಂದ ಕತ್ತಲಲ್ಲಿ ಕಳ್ಳರ ತಂಡವನ್ನು ಬೆನ್ನಟ್ಟ ಲಾಗದೆ ವಾಪಸ್‌ ಮರಳಿದೆ. ತಪ್ಪಿಸಿ ಕೊಳ್ಳುವ ಭರದಲ್ಲಿ ಕಳ್ಳರ ತಂಡ ಗುಂಡು ಹಾರಿಸಿದ್ದು, ಬಾಣಂತಿ ಕಾಲಿಗೆ ತಗುಲಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಗುಂಡು ತಗುಲಿದ್ದು ಪತ್ತೆಯಾಗಿರಲಿಲ್ಲ. ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖ ಲಿಸಿ, ಸ್ಕ್ಯಾನಿಂಗ್ ನಡೆಸಿದಾಗ ಗುಂಡು ಕಾಲಲ್ಲಿ ಇರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಿನೇಂದ್ರ ಖಣಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಡೇಟು ತಗುಲಿದ ಮಹಿಳೆ ಯದ್ದು ಪ್ರೇಮ ವಿವಾಹ. ಮನೆಯಲ್ಲಿ ವಿರೋಧವಿತ್ತು. ತಡರಾತ್ರಿ ನಡೆದ ಗುಂಡಿನ ದಾಳಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದು ಕಳ್ಳರ ಕೃತ್ಯವೋ ? ಇಲ್ಲ ಕೊಲೆಗೆ ನಡೆಸಿದ ಯತ್ನವೋ ಎಂಬ ಪ್ರಶ್ನೆಗಳಿಗೆ ತನಿಖೆಯ ನಂತರವಷ್ಟೇ ಉತ್ತರ ದೊರೆಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ 
ವಿಜಯಪುರ:
ಮಾನಸಿಕ ಅಸ್ವಸ್ಥೆ ಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲ್ಲೂಕಿನ ಸೋಮದೇವರ ಹಟ್ಟಿಯಲ್ಲಿ ನಡೆದಿದೆ.

ಮಹಾದೇವಿ (30), ಅಶ್ವಿನಿ (4), ಪವನ್ (2) ಮೃತ ತಾಯಿ ಮಕ್ಕಳು. ತಾಜಪುರ ಗ್ರಾಮದ ಮಹಾದೇವಿ ಮಾನಸಿಕ ಅಸ್ವಸ್ಥೆ. ಬುದ್ಧಿ ಸ್ಥಿಮಿತದಲ್ಲಿರದ ಕಾರಣ ತನ್ನ ಇಬ್ಬರೂ ಮಕ್ಕಳನ್ನು ಬಾವಿಗೆ ತಳ್ಳಿ ತಾನು ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ತಿಕೋಟಾ  ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಡಿಲಿಗೆ 21 ಕುರಿ ಸಾವು
ಇಂಡಿ:
ತಾಲ್ಲೂಕಿನ ಸಂಗೋಗಿ ಗ್ರಾಮ ದಲ್ಲಿ ಗುರುವಾರ ಬಿದ್ದ ಸಿಡಿಲಿಗೆ 21 ಕುರಿಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಕುರಿಗಳು ಪರಮಣ್ಣ ಹಿತ್ತಲಗುಂತಿ ಮತ್ತು ಮಲಕಪ್ಪ ಮದರಿ ಅವರಿಗೆ ಸೇರಿವೆ. ಬುಧವಾರ ಸಾಯಂಕಾಲ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಗಾಳಿಗೆ ಒಂದು ಮರ ಬಿದ್ದಿದ್ದು, ಮರದಡಿಯಲ್ಲಿ ಕಟ್ಟಿದ್ದ ಎಮ್ಮೆ ಸಾವನ್ನಪ್ಪಿದೆ. ಈ ಎಮ್ಮೆ ಸಿದ್ರಾಮ ಮಳಗಿ ಎನ್ನುವ ರೈತರಿಗೆ ಸೇರಿದ್ದಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರ್‌ಟಿಐ ಕಾರ್ಯಕರ್ತನ ಮೇಲೆ ಹಲ್ಲೆ
ತಾಳಿಕೋಟೆ:
ಪಟ್ಟಣದ ಆರ್‌ಟಿಐ ಕಾರ್ಯಕರ್ತ ಫತ್ತೆ ಮಹಮ್ಮದ್‌ ನಾಯ್ಕೊಡಿ ಎಂಬವರ ಮೇಲೆ ಮಂಗಳ ವಾರ ಬೆಳಿಗ್ಗೆ ಕೆಲ ದುಷ್ಕರ್ಮಿಗಳು ದಾಳಿ ಮಾಡಿ ತಲೆ ಒಡೆದು. ಅವರ ಬಳಿಯಿದ್ದ ಮಾಹಿತಿ ಹಕ್ಕು ಕಾಯ್ದೆಯಡಿ ಅವರು ಕೇಳಿದ್ದ ಅರ್ಜಿಗಳ ಫೈಲ್, ಹಣ, ಮೊಬೈಲ್,  ಎಟಿಎಂ ಕಾರ್ಡಗಳನ್ನು ಕಿತ್ತುಕೊಂಡು, ಥಳಿಸಿದ ಘಟನೆ ನಡೆದಿದೆ ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.