ADVERTISEMENT

ಜಿಎಸ್‌ಟಿ ಅನುಷ್ಠಾನದಿಂದ ಆರ್ಥಿಕ ಬೆಳವಣಿಗೆ

ತುಮಕೂರಿನ ಎಸ್‌ಐಟಿ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ಆರ್‌.ಸೊಲ್ಲಾಪುರ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:06 IST
Last Updated 24 ಮಾರ್ಚ್ 2017, 6:06 IST

ವಿಜಯಪುರ: ಜಿಎಸ್‌ಟಿ ತೆರಿಗೆ ಪದ್ಧತಿ ಅನುಷ್ಠಾನದಿಂದಾಗಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ 0.9ರಿಂದ ಶೇ 1.7 ರಷ್ಟು ಹೆಚ್ಚಳ ನಿರೀಕ್ಷಿಸಬಹುದಾಗಿದೆ ಎಂದು ತುಮಕೂರಿನ ಸಿದ್ಧಗಂಗಾ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿಯ ವ್ಯವಹಾರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಆರ್. ಸೊಲ್ಲಾಪುರ ವಿಶ್ಲೇಷಿಸಿದರು.

ಬಿಎಲ್‌ಡಿಇ ಸಂಸ್ಥೆಯ ಎಎಸ್‌ಪಿ ವಾಣಿಜ್ಯ ಮಹಾ ವಿದ್ಯಾಲಯ, ವಾಣಿಜ್ಯ ತೆರಿಗೆ ಇಲಾಖೆ, ಎಎಸ್‌ಪಿ ಮಹಾ ವಿದ್ಯಾ ಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಬುಧವಾರ ನಗರದ ಬಿಎಲ್‌ಡಿಇ ಸಂಸ್ಥೆಯ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಸರಕು ಹಾಗೂ ಸೇವೆಗಳ ತೆರಿಗೆ’ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತ ನಾಡಿದ ಅವರು, ಜಿಎಸ್‌ಟಿ ಜಾರಿ ಯಿಂದಾಗಿ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯ ವನ್ನು ದಿ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ಸ್ ರಿಸರ್ಚ್‌ ಸಂಸ್ಥೆ ಸಹ ವ್ಯಕ್ತಪಡಿಸಿದೆ ಎಂದರು.

ಜಿಎಸ್‌ಟಿ ಜಾರಿಯಿಂದಾಗಿ ದೇಶಿ ಯವಾಗಿ ಉತ್ಪಾದನೆಯಾಗುವ ಸರಕು ಗಳೆಲ್ಲ ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಎದುರಿಸುವಲ್ಲಿ ಸಬಲಗೊಳ್ಳುತ್ತವೆ. ಇದ ರಿಂದಾಗಿ ದೇಶದ ರಫ್ತುಗಳು ಹೆಚ್ಚಾಗಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ವಿನಿ ಮಯ ಗಳಿಕೆ ವೃದ್ಧಿಯಾಗುತ್ತದೆ ಎಂದು ವಿಶ್ಲೇಷಿಸಿದರು.

‘ಏಕ ದೇಶ ಏಕ ತೆರಿಗೆ’ ಎಂಬ ಮೂಲ ಆಶಯ ಹೊಂದಿರುವ ಜಿಎಸ್‌ಟಿ ಯಿಂದಾಗಿ ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮೊದಲಾದ ತೆರಿಗೆಗಳು ಏಕರೂಪಗೊಂಡು ಜಿಎಸ್‌ಟಿಯಲ್ಲಿ ವಿಲೀನಗೊಳ್ಳಲಿವೆ. ಜಿಎಸ್‌ಟಿ ಒಂದು ಸರಳ ಹಾಗೂ ಸುಲಭವಾಗಿ ಅನುಷ್ಠಾ ನಕ್ಕೆ ತರಬಹುದಾದ ತೆರಿಗೆ ಪದ್ಧತಿಯಾ ಗಿದೆ. ಈ ಕಾರಣಕ್ಕಾಗಿ ಇದೊಂದು ಉದ್ಯಮಸ್ನೇಹಿ ಪರೋಕ್ಷ ತೆರಿಗೆ ವ್ಯವಸ್ಥೆ ಎಂದರೂ ಅತಿಶಯೋಕ್ತಿಯಾಗಲಾರದು ಎಂದು ವಿವರಿಸಿದರು.

ಜಿಎಸ್‌ಟಿ ತೆರಿಗೆ ಪದ್ಧತಿ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಅರ್ಧ ಶತಮಾ ನಕ್ಕೂ ಮುಂಚೆಯೇ ಜಾರಿಯಲ್ಲಿದೆ. ಈ ತೆರಿಗೆ ಪದ್ಧತಿಯಲ್ಲಿರುವ ಅನೇಕ ಅನು ಕೂಲತೆಗಳ ಫಲವಾಗಿ ಅನೇಕ ರಾಷ್ಟ್ರ ಗಳು ಈ ಪದ್ಧತಿಯನ್ನು ಅಳವಡಿಸಿ ಕೊಳ್ಳುತ್ತಿವೆ. ಇದರಿಂದಾಗಿ ಈ ಪದ್ಧತಿ ಅಳವಡಿಸಿಕೊಳ್ಳುತ್ತಿರುವ ರಾಷ್ಟ್ರಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 1954ರಲ್ಲಿ ಪ್ರಥಮವಾಗಿ ಫ್ರಾನ್ಸ್‌ನಲ್ಲಿ ಈ ವ್ಯವಸ್ಥೆ ಜಾರಿಗೊಂಡಿತು.

ಬಹುತೇಕ ಐರೋಪ್ಯ ರಾಷ್ಟ್ರಗಳಲ್ಲಿ ಸೇವಾ ತೆರಿಗೆ ಶೇ 15ರಷ್ಟಿದ್ದರೆ, ಸ್ವಿಟ್ಜ ರ್ಲೆಂಡ್‌ನಲ್ಲಿ ಶೇ 7.6, ಗ್ರೇಟ್ ಬ್ರಿಟನ್‌ ನಲ್ಲಿ ಶೇ 17.5ರಷ್ಟು ಇದೆ ಎಂದು ಜಿಎಸ್‌ಟಿ ಬೆಳವಣಿಗೆ, ಸ್ವರೂಪದ ಕುರಿತು ವಿವರಣೆ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ಡಾ.ಮಂಜುಳಾ ವಿ.ಆರ್. ಸರಕು ಹಾಗೂ ಸೇವಾ ತೆರಿಗೆಯ ಪ್ರಕ್ರಿಯೆ, ಜಿಎಸ್‌ಟಿ ಮಹತ್ವ, ಅನುಷ್ಠಾನ ಹಂತ ಸೇರಿದಂತೆ ವಿವಿಧ ವಿಷಯಗಳ ಕುರಿತು ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ಸಮಗ್ರವಾದ ಮಾಹಿತಿ ನೀಡಿದರು.

ವಿಚಾರ ಸಂಕಿರಣಕ್ಕೆ ವಿಶ್ರಾಂತ ಕುಲಪತಿ ಡಾ.ಬಿ.ಜಿ.ಮೂಲಿಮನಿ ಚಾಲನೆ ನೀಡಿದರು. ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್. ಎಚ್.ಲಗಳಿ, ಎಎಸ್‌ಪಿ ವಾಣಿಜ್ಯ ಕಾಲೇ ಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಕಾರ್ಯದರ್ಶಿ ಎನ್.ಆರ್. ಮೈಲಗೊಂಡ ಮಾತನಾಡಿದರು.

ಡಾ.ಆರ್.ವಿ.ಕುಲಕರ್ಣಿ, ಶಾಂತೇಶ ಕಳಸಗೊಂಡ, ಎಸ್.ಎಸ್.ಶಿಂಧೆ, ಎಸ್.ಬಿ.ಪಾಟೀಲ, ಪ್ರೊ.ಎಸ್.ಎಸ್. ಚೌಕಿಮಠ ಉಪಸ್ಥಿತರಿದ್ದರು. ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಜೆ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಜಿ.ರೂಡಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT