ADVERTISEMENT

ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ

ಅಗತ್ಯ ವಸ್ತುಗಳ ಬೆಲೆ ಹೆಚ್ಚಾದರೂ ಹಬ್ಬದ ಖರೀದಿಯ ಉತ್ಸಾಹಕ್ಕೆ ಕೊರತೆ ಇರಲಿಲ್ಲ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2015, 8:46 IST
Last Updated 12 ನವೆಂಬರ್ 2015, 8:46 IST

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿತ್ತು. ಪುಟಾಣಿ ಮಕ್ಕಳಿಂದ ಹಿಡಿದು ಕುಟುಂಬದ ಸದಸ್ಯರೆಲ್ಲರೂ ಹೊಸ ಬಟ್ಟೆ ತೊಟ್ಟು ಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಪೂಜೆಗೆ ಬೇಕಾದ ವಸ್ತುಗಳ ಬೆಲೆ ಒಂದಷ್ಟು ಹೆಚ್ಚಿದ್ದರೂ ಖರೀದಿ ಉತ್ಸಾಹ ಎಲ್ಲೆಡೆ ಕಂಡು ಬಂದಿತು.   ಮುಂಗಾರು ಮಳೆ ಕೈಕೊಟ್ಟ ರೈತನಿಗೆ ಹಿಂಗಾರು ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಬಂದ ಮಳೆ ರೈತನಲ್ಲಿ ಆಶಾಭಾವನೆ ಮೂಡಿ ಸಿತ್ತು. ಹಿಂಗಾರು ಬಿತ್ತನೆ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ ಬಿತ್ತಿದ್ದ ಬೆಳೆ ಬಾಡುವ ಸ್ಥಿತಿಗೆ ಬರುವ ಲಕ್ಷಣಗಳಿರುವುದರಿಂದ ರೈತರಲ್ಲಿ ಅಷ್ಟಾಗಿ ಹಬ್ಬದ ಸಡಗರ ಕಂಡುಬರಲಿಲ್ಲ.

ನಗರದ ಪ್ರಮುಖ ಮಾರುಕಟ್ಟೆ ಸ್ಥಳವಾದ ಶಾಸ್ತ್ರಿ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.  ಎಲ್ಲಿನೋಡಿದರಲ್ಲಿ ಜನಜಂಗುಳಿ. ಬೆಳಿಗ್ಗೆಯಿಂದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನರು ಪೂಜೆಗೆ ಅಗತ್ಯವಿರುವ ಚೆಂಡು ಹೂವು, ಸೇವಂತಿಗೆ, ಬಾಳೆ ದಿಂಡು, ಕಬ್ಬು,  ಸೇಬು, ಬಾಳೆಹಣ್ಣು, ಸೀತಾಫಲ, ಚಿಕ್ಕು, ಬಳುವಲಕಾಯಿ, ಕುಂಬಳಕಾಯಿ  ಸೇರಿದಂತೆ ವಿವಿಧ ಹಣ್ಣು- ಹಂಪಲಗಳು ಹಾಗೂ ಪಟಾಕಿ ಖರೀದಿಸಿದರು.

ದೀಪಾವಳಿ ಹಬ್ಬವೆಂದರೆ ಚೆಂಡು ಹೂವಿಗೆ ಹೆಚ್ಚಿನ ಪ್ರಾಮುಖ್ಯ ಇರುವು ದರಿಂದ ಚೆಂಡು ಹೂವು ಪ್ರತಿ ಕೆಜಿಗೆ ₹ 80 ರಿಂದ 100,  ಸೇವಂತಿಗೆ ಹೂವು ಪ್ರತಿ ಕೆಜಿಗೆ ₹ 150- ರಿಂದ 200, ಬಾಳೆದಿಂಡು ಚಿಕ್ಕವು ₹ 20 ರಿಂದ 60, ದೊಡ್ಡವು ₹150ರಿಂದ 200, ಕಬ್ಬು ಜೋಡಿಗೆ ₹ 20ರಿಂದ 60, ದಾವಣಗೆರೆ, ತುಮಕೂರಿನ ಮಾರುದ್ದ ಹೂವಿಗೆ ₹ 50 ಇತ್ತು. ಸೇಬು, ಬಾಳೆಹಣ್ಣು ಸೇರಿದಂತೆ ವಿವಿಧ ತರಹದ ಹಣ್ಣುಗಳ ಬೆಲೆ ಹೆಚ್ಚಾಗಿದ್ದರೂ ಜನರ ಉತ್ಸಾಹ ಅಷ್ಟೇನು ಕಡಿಮೆಯಾಗಿರಲಿಲ್ಲ.  ಎರಡು ಮೂರು ಕಡೆ ಚೌಕಾಸಿ ಮಾಡಿ ಪೂಜೆ  ಸಾಮಗ್ರಿಗಳನ್ನು ಖರೀದಿಸಿದರು.

ದೀಪಾವಳಿ ಹಬ್ಬದಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ ಎಂಬ ನಂಬಿಕೆ  ಇದೆ. ಪೂಜಾ ಸಾಮಗ್ರಿಗಳ ಬೆಲೆ ಒಂದಷ್ಟು ಹೆಚ್ಚು ಎನಿಸಿದರೂ ಖರೀದಿಸುತ್ತಿದ್ದೇವೆ. ಮನೆ ಮಂದಿಯೆಲ್ಲ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಬಾಳೆ ದಿಂಡು ಖರೀದಿಸುತ್ತಿದ್ದ ಮಲ್ಲಿಕಾರ್ಜುನ ಕೆಂಗನಾಳ, ಚನಗೌಡ ಪಾಟೀಲ, ಶಾಂತವೀರ ಮುರಗುಂಡಿ ಹೇಳಿದರು.

ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಮನೆಗೆ ಬರುತ್ತಿದ್ದಂತೆ ಮಹಿಳೆಯರು ಹಬ್ಬದ ಅಡುಗೆ ಹಾಗೂ ಪೂಜೆಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿ ಕೊಂಡು ಅಡುಗೆ ಮಾಡಿದರು. ನಂತರ ಕುಟುಂಬ ಸದಸ್ಯರೆಲ್ಲರೂ ಸೇರಿ ಲಕ್ಷ್ಮೀ ಪೂಜೆಯಲ್ಲಿ ತೊಡಗಿಕೊಂಡಿರುವುದು ಸಾಮಾನ್ಯವಾಗಿತ್ತು.  ಪೂಜಾ ಮಂಟಪ ವನ್ನು ಚೆಂಡು ಹೂವು ಸೇರಿದಂತೆ ವಿವಿಧ ಹೂವು, ಬಾಳೆದಿಂಡು, ಕಬ್ಬು, ಮಾವಿನ ತೋರಣದಿಂದ ಸಿಂಗರಿಸಿ ವಿದ್ಯುತ್‌ ದೀಪಾಲಂಕಾರ ಮಾಡಿರು ವುದು ಕಂಡು ಬಂದಿತು.  ಪೂಜೆಯ ನಂತರ ಮುತ್ತೈದೆಯರು ಆರತಿ ಬೆಳಗಿದ ನಂತರ ಅವರ ಊಟವಾದ ಮೇಲೆ ಮನೆಯವರೆಲ್ಲರೂ ಸೇರಿ ಊಟ ಮಾಡಿದರು.

ಹೊಸ ಬಟ್ಟೆ ತೊಟ್ಟ ಮಕ್ಕಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ತಮಗೆ ಇಷ್ಟವಾದ ಪಟಾಕಿ, ಚುರುಚುರ ಕಡ್ಡಿ, ಆಕಾಶದಲ್ಲಿ ಬಣ್ಣ, ಬಣ್ಣದ  ಚಿತ್ತಾರ ಬಿಡಿಸುವ ಬಾಣ, ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಮನೆಯಲ್ಲಿ ಪೂಜೆ ಮುಗಿದ ನಂತರ ವಾಹನಗಳ ಹಾಗೂ ವರ್ತಕರು ತಮ್ಮ ಅಂಗಡಿಗಳ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

ಕೆಲವರು ಅಮಾವಾಸ್ಯೆಯ ಇಡೀ ರಾತ್ರಿ ಜಾಗರಣೆ ಮಾಡಿ ಲಕ್ಷ್ಮೀ ದೇವಿಯ ಮುಂದಿನ ದೀಪ ನಂದದಂತೆ ನೋಡಿ ಕೊಳ್ಳುವುದು ಸಾಮಾನ್ಯ. ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಪಗಡೆ ಆಟ ಸೇರಿದಂತೆ ವಿವಿಧ ಗ್ರಾಮೀಣ ಸೊಗಡಿನ ಆಟಗಳನ್ನು ಇಡೀ ರಾತ್ರಿ ಆಡುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.