ADVERTISEMENT

ತಾಳಿಕೋಟೆ: ಎಲ್ಲೆಂದರಲ್ಲಿ ಕಸದ ರಾಶಿ, ಕೊಚ್ಚೆ ತಾಣದಂತಾದ ರಸ್ತೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 9:44 IST
Last Updated 16 ಅಕ್ಟೋಬರ್ 2017, 9:44 IST
ತಾಳಿಕೋಟೆಯ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆ ಕೊಚ್ಚೆಯ ಗೂಡಾಗಿ ಅನಾರೋಗ್ಯಕರ ವಾತಾವರಣಕ್ಕೆ ನಾಂದಿ ಹಾಡುತ್ತಿದೆ
ತಾಳಿಕೋಟೆಯ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆ ಕೊಚ್ಚೆಯ ಗೂಡಾಗಿ ಅನಾರೋಗ್ಯಕರ ವಾತಾವರಣಕ್ಕೆ ನಾಂದಿ ಹಾಡುತ್ತಿದೆ   

ತಾಳಿಕೋಟೆ: ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆ ಕೊಚ್ಚೆಯ ಗೂಡಾಗಿ ಪರಿಣಮಿಸಿದ್ದು, ಓಣಿಯ ಜನತೆ ಮೂಗಿಗೆ ಕೈ ಹಿಡಿದುಕೊಂಡೆ ಸಂಚರಿಸುವುದು ಅನಿವಾರ್ಯವಾಗಿದೆ.

ಪಟ್ಟಣದ ಬಸ್‌ ನಿಲ್ದಾಣದಿಂದ ಅಂಬಾಭವಾನಿ ಮಂದಿರಕ್ಕೆ ಹೋಗಲು, ನೀಲಕಂಠೇಶ್ವರ ದೇವಸ್ಥಾನದಿಂದ ಸಾಂಭಪ್ರಭು ದೇವಸ್ಥಾನಕ್ಕೆ ಹೋಗುವುದಕ್ಕೆ ಇದೇ ರಾಜಮಾರ್ಗ. ಇಂತಹ ಪ್ರಮುಖ ರಸ್ತೆಯಲ್ಲಿ ನಿತ್ಯ ಸಂಚರಿಸುವ ಜನರು ಕೊಚ್ಚೆ ತುಳಿದುಕೊಂಡು, ಹಂದಿ, ದನಗಳ ಸಮೂಹ ಭೇದಿಸಿಕೊಂಡೇ ಹೋಗಬೇಕು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನ ತೋರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪ್ರದೇಶದಲ್ಲಿ ನೋಣಗಳು ಗುಂಯ್ಯೆನ್ನುತ್ತವೆ, ಸೊಳ್ಳೆಗಳು ಸಂತತಿ ಹೆಚ್ಚಿಸಿಕೊಂಡು ಮಲೇರಿಯಾ, ಡೆಂಗ್ಯೂ, ಚುಕುನ್ ಗುನ್ಯಾಗಳಂತಹ ರೋಗಗಳಿಗೆ ದಾರಿ ಮಾಡಿಕೊಡುತ್ತಿವೆ. ಈ ಕುರಿತು ಪುರಸಭೆಗೆ ಹೇಳಿ ಹೇಳಿ ಸಾಕಾಗಿದೆ.

ADVERTISEMENT

ಸ್ವಚ್ಛತೆ ಅನ್ನುದು ಹ್ಯಾಂಗಿರತ್ತ ಅಂತ ಕೇಳುವಂಗ ಆಗ್ಯಾದ. ಮನೆಯ ಮುಂದೆ ಕಸ ಹಾಕದಂತೆ ತಡೆಯಬೇಕಂತ ವಾರಗಟ್ಟಲೇ ಬಡಿಗೆ ಹಿಡದು ಕೂತಿನ್ರಿ, ಆದ್ರ, ಯಾವ ಮಾಯದಾಗಲೋ ಕಸ ಹಾಕಿರ್ತಾರ ನನಗಂತೂ ಸಾಕಾಗ್ಯಾದ. ಹೊಲಸು ವಾಸನಿ, ಸೊಳ್ಳಿ ಕಾಟ, ನೋಣಗಳ ಕಾಟ ತಡಿಯಾಕ ಆಗುವಲ್ದು ಎನ್ನುತ್ತಾರೆ ಓಣಿಯ ನಿವಾಸಿ ಸಜ್ಜನ ಸಾಹುಕಾರ.

ಪುರಸಭೆ ಬೆಳಿಗ್ಗೆ ಕಸ ಎತ್ತಲೆಂದು ಟ್ರ್ಯಾಕ್ಟರ್‌ ನೊಂದಿಗೆ ಕಾರ್ಮಿಕರನ್ನು ಕಳಿಸುತ್ತಾರೆ. ಆದರೂ ಇಲ್ಲಿ ಕಸ ಬೀಳು ವುದು ತಪ್ಪುತ್ತಿಲ್ಲ. ಕಸದ ಮೈದಾನವೇ ಸೃಷ್ಟಿಯಾಗುತ್ತದೆ. ಹಂದಿಗಳ ಕಾಟ ಹೆಚ್ಚಿದ ಕಾರಣ ಮಕ್ಕಳು, ಮಹಿಳೆಯರು ಕಂಟೆನರ್‌ಗಳಲ್ಲಿ ಕಸ ಹಾಕಲಾಗದೇ ದೂರದಿಂದ ಎಸೆಯುತ್ತಿದ್ದಾರೆ. ಎಲ್ಲೆಂದರಲ್ಲಿ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳುವ ಪುರಸಭೆ ಹೊಲಸಿನಿಂದ ಕಂಗೆಟ್ಟ ಈ ಪ್ರದೇಶದಲ್ಲಿ ಏಕೆ ಅಭಿಯಾನ ಕೈಗೊಳ್ಳಿತ್ತಿಲ್ಲ ಎಂಬುವುದು ಓಣಿಯ ನಿವಾಸಿಗಳ ಪ್ರಶ್ನೆ.

ಕಸವಿಲೇವಾರಿಗೆ ಸರಿಯಾಗಿ ಮಾಡದ ಕಾರಣ ಎಲ್ಲೆಂದರಲ್ಲಿ ಕಸ ಬಿದ್ದಿದೆ ಎಂಬ ದೂರು ಸಾಕಷ್ಟು ಕೇಳಿ ಬಂದಿವೆ. ಈ ಕುರಿತು ಗಮನ ಹರಿಸಿ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆ ಸೇರಿದಂತೆ ವಿವಿಧಡೆ ಕಂಡು ಬರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪುರಸಭೆ ಅಧಿಕಾರಿ ಶಿಲಾಧರ ಗತ್ತರಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.