ADVERTISEMENT

ತೆರೆದ ಬಾವಿ ಪಕ್ಕದಲ್ಲೇ ಅಂಗನವಾಡಿ ಕೇಂದ್ರ!

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:23 IST
Last Updated 15 ಮೇ 2017, 5:23 IST
ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿ ಬೂದಿಹಾಳ ಗ್ರಾಮದಲ್ಲಿ ತೆರೆದ ಬಾವಿ ಪಕ್ಕದಲ್ಲೇ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ
ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿ ಬೂದಿಹಾಳ ಗ್ರಾಮದಲ್ಲಿ ತೆರೆದ ಬಾವಿ ಪಕ್ಕದಲ್ಲೇ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ   

ವಿಜಯಪುರ: ‘ಊರಾಗ ಸಾಕಸ್ಟ್‌ ಜಾಗ ಇದ್ರೂ ಬಾವಿ ಬತ್ಯಾಕನೇ ಅಂಗನವಾಡಿ ಕಟ್ಯಾರ. ಸಣ್ಣ ಮಕ್ಕಳ್ಗಿ ಯಾವಾಗ ಏನ ಆಗ್ತೈತೋ ಗೊತ್ತಿಲ್ಲ. ಏನು ತಿಳಿಯದ ಮಕ್ಕಳ್ನ ಇಲ್ಲಿಗೆ ಕಳಸ್ತೀವಿ. ಬಾವಿ ಹತ್ರ ಹೋಗಿ ಬಿದ್ದರ ಏನ್‌ ಮಾಡೋದ್ರಿ.

ಬಾವಿ ಇರೋದು ಗೊತ್ತಿದ್ರೂ ಅಧಿಕಾರಿಗಳು ಈ ಮೊದ್ಲ ದೋಬಿಗಾಟ, ಶುದ್ಧ ಕುಡಿಯುವ ನೀರಿನ ಘಟಕ ಕಟ್ಟಿದ್ರು. ಈಗ ಅಂಗನವಾಡಿ ಕೇಂದ್ರ ಕಟ್ಯಾರ. ಇಲ್ಲಿಗೆ ಕಳಸಾಕ ಹೆದರಿಕಿ ಬರಾಕತೈತಿ...’ ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿ ಬೂದಿಹಾಳ ಗ್ರಾಮಸ್ಥರ ಆತಂಕದ ನುಡಿಗಳಿವು.

‘ತೆರೆದ ಬಾವಿ ಸನಿಹದಲ್ಲೇ ಅಂಗನ­ವಾಡಿ ಕಟ್ಟಡ ನಿರ್ಮಿಸಿದ್ದು, ಅಪಾಯಕ್ಕೆ ಆಹ್ವಾನವಿತ್ತಂತಾಗಿದೆ. ಅಧಿಕಾರಿಗಳು ಬಾವಿಗಿ ಬೇಲಿಯಾರೇ ಹಾಕ್ಲಿ, ಇಲ್ಲದಿದ್ರ ಅಂಗನವಾಡಿಯಾದ್ರು ಬ್ಯಾರೆ ಕಡೆ ಕಟ್ಲಿ. ಇಲ್ಲೇ ನಡೆದ್ರ ಅನಾಹುತ ಘಟಿಸೋದು ಗ್ಯಾರಂಟಿ’ ಎನ್ನುತ್ತಾರೆ ಗ್ರಾಮದ ಶಿವಲಿಂಗಯ್ಯ ಹಿರೇಮಠ.

ADVERTISEMENT

ಬಾವಿ ಪಕ್ಕದಲ್ಲಿ ಅಂಗನವಾಡಿ ನಿರ್ಮಿಸುವುದು ತಪ್ಪು. ಗ್ರಾಮದಲ್ಲಿ ಬೇರೆ ಕಡೆ ಜಾಗ ದೊರೆಯದಿದ್ದ ಕಾರಣಕ್ಕೆ, ಎಲ್ಲ ಜನಪ್ರತಿನಿಧಿಗಳ ಒಪ್ಪಿಗೆ ಪಡೆದು ನಾನು ಅಧಿಕಾರ ಸ್ವೀಕರಿಸುವ ಪೂರ್ವ­ದಲ್ಲೇ, ಇದನ್ನು ಇಲ್ಲಿ ನಿರ್ಮಿಸಲಾಗಿದೆ.

ಸದ್ಯ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪರಿ­ಹಾರಕ್ಕೆ ಎಲ್ಲ ಸಿಬ್ಬಂದಿ ಯತ್ನಿಸುತ್ತಿದ್ದಾರೆ. ಕೇಂದ್ರದಲ್ಲಿ ಇನ್ನೂ ಮಕ್ಕಳ ಕಲಿಕೆ ಆರಂಭವಾಗಿಲ್ಲ. ಆದಷ್ಟು ಶೀಘ್ರ ಬಾವಿಗೆ ಬೇಲಿ ಹಾಕುವ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಸ್‌.ತಳವಾರ.

ಈ ಕುರಿತಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶರಣಮ್ಮ ಯಲಗೋಡ ಅವರನ್ನು ಪ್ರಶ್ನಿಸಿದರೆ ‘ತಮಗೆ ಕಟ್ಟಡ ನಿರ್ಮಾಣದ ಮಾಹಿತಿಯಿತ್ತು. ನಮ್ಮ ಅಭಿಪ್ರಾಯ ಯಾರೂ ಕೇಳಲ್ಲ. ಭೂ ಸೇನಾ ನಿಗಮದವರು ನಿರ್ಮಿಸಿದ್ದಾರೆ. 

ಇದರ ನಿರ್ಮಾಣಕ್ಕೆ ಪರ­ವಾನಗಿ ಕೊಟ್ಟವರು ಯಾರು ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅವಘಡ ಸಂಬಂಧಿಸಿ­ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತುರ್ತಾಗಿ ಜರುಗಿಸಬೇಕು’ ಎಂಬ ಆಗ್ರಹ ಗ್ರಾಮದ ಸಿದ್ದನಗೌಡ ಬಿರಾದಾರ ಅವರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.