ADVERTISEMENT

ನಿಫಾ: ಜಾಗೃತಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 12:24 IST
Last Updated 26 ಮೇ 2018, 12:24 IST

ವಿಜಯಪುರ: ನಿಫಾ ವೈರಾಣು ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ನಿಫಾ ವೈರಾಣು ಜ್ವರ ಹರಡಲಿದ್ದು, ಈ ಕುರಿತಂತೆ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಿಫಾ ವೈರಾಣು ರೋಗ ತಡೆಗಟ್ಟುವ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಫಾ ವೈರಾಣು ಜ್ವರ ಹೊಸದಾಗಿ ಕಂಡು ಬಂದ ವೈರಾಣು ಸೋಂಕಾಗಿದೆ. ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳೂ ಕಚ್ಚಿದ ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಇತರೆ ಪ್ರಾಣಿಗಳಿಗೂ ಈ ಸೋಂಕು ಹರಡುತ್ತದೆ. ಹೀಗಾಗಿ ಸಾರ್ವಜನಿಕರು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಸೂಕ್ತ ಅರಿವು ಮೂಡಿಸುವ ಜೊತೆಗೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ADVERTISEMENT

ನಿಫಾ ವೈರಾಣು ಜ್ವರಕ್ಕೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ, ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ರ‍್ಯಾಪಿಡ್‌ ರೆಸ್ಪಾನ್ಸ್ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಈ ರೋಗದ ಕುರಿತು ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಸೂಕ್ತ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಎಲ್ಲ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ನರ್ಸಿಂಗ್‌ ಕಾಲೇಜುಗಳಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳಲ್ಲಿ ಈ ಕುರಿತು ಸೂಕ್ತ ಎಚ್ಚರ ವಹಿಸುವಂತೆ ಸುತ್ತೋಲೆ ಸಹ ಹೊರಡಿಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಕ್ಕಣ್ಣವರ ಮಾತನಾಡಿ, ನಿಫಾ ವೈರಾಣು ಜ್ವರ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಮಲೇಷ್ಯಾ, ಸಿಂಗಾಪುರ ಹಾಗೂ ಬಾಂಗ್ಲಾದೇಶಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತಗಳ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ. ಕಾರಣ ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಶೇಂದಿ, ನೀರು ಸೇವಿಸಬಾರದು ಎಂದು ಸಲಹೆ ನೀಡಿದರು.

ಹಣ್ಣು ಮತ್ತು ಒಣ ಖರ್ಜೂರ ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು. ಅನಾರೋಗ್ಯದ ಹಂದಿ ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸಬೇಕು. ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿಯನ್ನು ಅಳವಡಿಸಬೇಕು. ಕೈಗಳನ್ನು ಸಂಪೂರ್ಣವಾಗಿ ಶುದ್ಧವಾಗಿಟ್ಟುಕೊಳ್ಳಬೇಕು. ನಿಫಾ ವೈರಸ್ ಸೋಂಕಿತ ರೋಗಿಯು ಉಪಯೋಗಿಸಿದ ಬಟ್ಟೆ ಮತ್ತು ಇತತೆ ಪದಾರ್ಥಗಳನ್ನು ಬಳಸಬಾರದು. ಸೋಂಕಿತ ರೋಗಿಯು ಕನಿಷ್ಠ 15 ದಿನಗಳು ಮನೆಯಲ್ಲಿ ಮತ್ತು ಚಿಕಿತ್ಸೆ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು.

ಆರ್‌ಟಿಪಿಸಿಆರ್ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ. ಜ್ವರ, ತಲೆನೊವು, ತಲೆ ಸುತ್ತುವಿಕೆ, ದಿಗ್ಭ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ಹಾಗೂ ಸಾವು ಸಂಭವಿಸಬಹುದಾದ ರೋಗ ಲಕ್ಷಣಗಳು ಇದಾಗಿದೆ. ಕೇರಳ ರಾಜ್ಯದಲ್ಲಿ 16ಕ್ಕೂ ಹೆಚ್ಚು ರೋಗಿಗಳ ನಿಫಾ ವೈರಾಣು ದೃಢಪಡಿಸಲಾಗಿದ್ದು, 12 ಜನ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಂಪತ್ ಗುಣಾರಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿರು ಮಾಹಿತಿ ನೀಡಿದರು. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಚವ್ಹಾಣ, ಡಾ.ಗೊಲಗೇರಿ, ಡಾ.ಜ್ಯೋತಿ ಪಾಟೀಲ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

**
ನಿಫಾ ವೈರಾಣು ಜ್ವರದ ಕುರಿತ ಮಾಹಿತಿಗಾಗಿ 24*7 ಉಚಿತ ಆರೋಗ್ಯ ಸಹಾಯವಾಣಿ 104ಗೆ ಕರೆ ಅಥವಾ ವೆಬ್‌ಸೈಟ್‌ www.karhfw.gov.inಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು
ಎಸ್‌.ಬಿ.ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.