ADVERTISEMENT

ನೇಮಕಾತಿ: ನಿಯಮ ತಿದ್ದುಪಡಿಗೆ ಶಿಕ್ಷಕರ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:59 IST
Last Updated 20 ಮೇ 2017, 4:59 IST

ವಿಜಯಪುರ: ಶಿಕ್ಷಕರ ನೇಮಕಾತಿ ನಿಯಮಗಳ ತಿದ್ದುಪಡಿ ವಿರೋಧಿಸಿ, ಎಐಡಿವೈಓ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

‘ಮುಂದಿನ ದಿನಗಳಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಿ, ಪದವಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ 2017-–18ನೇ ಸಾಲಿನಲ್ಲಿ 10 ಸಾವಿರ, 2018–-19, 2019–20 ಸಾಲಿನಲ್ಲಿ ತಲಾ 4 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಕುರಿತು ಶುಕ್ರವಾರ ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಉಂಟು ಮಾಡಿದೆ. ಹಲವು ಶಿಕ್ಷಣ ತಜ್ಞರ ಜೊತೆಯಲ್ಲಿ ಸರ್ಕಾರ ಚರ್ಚೆ ನಡೆಸಿ 2001ರಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ನೇಮಕಾತಿಯನ್ನು ಸಿ.ಇ.ಟಿ ನಡೆಸುವ ಮೂಲಕ ಮಾಡಿಕೊಳ್ಳಲಾಗುತ್ತಿತ್ತು.

ADVERTISEMENT

ಆದರೆ, ಇದೀಗ ನೇಮಕಾತಿಗೆ ಸಮಯದ ಕೊರತೆ ಇದೆ ಎನ್ನುವ ಕಾರಣಕ್ಕೆ, ಏಕಾಏಕಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಉತ್ತಮ ಕ್ರಮವನ್ನು ಕೈ ಬಟ್ಟಿರುವುದು ಸರಿಯಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮದೇ ಆದ ಪರೀಕ್ಷಾ ಪದ್ಧತಿ ಮತ್ತು ನಿಯಮಗಳನ್ನು ಅನುಸರಿಸುವುದರಿಂದ ಶಿಕ್ಷಕ ಆಕಾಂಕ್ಷಿಗಳು ಪಡೆಯುವ ಪದವಿಗಳಲ್ಲಿ ಭಿನ್ನ ಫಲಿತಾಂಶಗಳು ಬರುತ್ತವೆ.

ಅದರಲ್ಲೂ ನಿರ್ದಿಷ್ಟವಾಗಿ, ಆಂತರಿಕ ಮೌಲ್ಯಮಾಪನ ಅಂಕಗಳನ್ನು ನೀಡುವ ಅಂಶದಲ್ಲಿ ರಾಜ್ಯಾದ್ಯಂತ ಏರುಪೇರುಗಳಿವೆ. ಪ್ರಾಯೋಗಿಕ ಪರೀಕ್ಷೆಗಳಲ್ಲಿ ನೀಡುವ ಅಂಕಗಳು ಕೂಡಾ ಭಿನ್ನವಾಗಿರುತ್ತವೆ.

ಈ ತಾರತಮ್ಯ ಕೊಂಚ ಕಡಿಮೆ ಮಾಡಲು ಸಿಇಟಿ ಪದ್ಧತಿ ಸಹಕಾರಿಯಾಗಿದೆ. ಹೀಗಾಗಿ ಇರುವ ಪದ್ಧತಿಯನ್ನು ಮುಂದುವರಿಸಿ ಪಾರದರ್ಶಕ ನೇಮಕಾತಿ ನಡೆಸಬೇಕು. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವುದನ್ನು ನಿಲ್ಲಿಸಬೇಕು. ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಎಐಡಿವೈಓನ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ, ಶರತ್, ರಾಘು ಸುಣಗಾರ, ಮುತ್ತು, ಸಂಜು ಪವಾರ, ರಾಹುಲ, ಗವ್ವಣ್ಣ, ಸಂತೋಷ ರಾಠೋಡ, ಶ್ರೀಶೈಲ ಹಾರಕುಡೆ, ಶೇಕರ ಬೀಳಗಿ, ಮಲ್ಲು ಕಾಖಂಡಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.