ADVERTISEMENT

ಪಂಚಪೀಠ, ವೀರಶೈವರ ವಿರುದ್ಧ ಅಲ್ಲ

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ: ಪೂರ್ವಭಾವಿ ಸಭೆಯಲ್ಲಿ ಸಚಿವ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 8:43 IST
Last Updated 7 ಡಿಸೆಂಬರ್ 2017, 8:43 IST
ಪಂಚಪೀಠ, ವೀರಶೈವರ ವಿರುದ್ಧ ಅಲ್ಲ
ಪಂಚಪೀಠ, ವೀರಶೈವರ ವಿರುದ್ಧ ಅಲ್ಲ   

ಬಸವನಬಾಗೇವಾಡಿ: ‘ಲಿಂಗಾಯತ ಧರ್ಮವೂ ಎಲ್ಲ ಜಾತಿಗಳನ್ನು ಒಟ್ಟು ಗೂಡಿಸುವಂತಹ ಕೆಲಸ ಮಾಡುತ್ತಿದೆಯೇ ಹೊರತು ಯಾವುದೇ ಸಮಾಜವನ್ನು ಒಡೆಯುವಂತಹ ಕೆಲಸ ಮಾಡುತ್ತಿಲ್ಲ. ವೀರಶೈವ ಎಂಬುದು ಲಿಂಗಾಯತ ಧರ್ಮದ ಒಂದು ಉಪಜಾತಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಡಿ.10 ರಂದು ವಿಜಯಪುರದಲ್ಲಿ ನಡೆಯಲಿರುವ ರ‍್ಯಾಲಿಯ ಸಿದ್ಧತೆ ಕುರಿತು ಚರ್ಚಿಸಲು ಸ್ಥಳೀಯ ವಿರಕ್ತ ಮಠದಲ್ಲಿ ಬುಧವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಅಖಿಲ ಭಾರತ ವೀರಶೈವ ಮಹಾಸಭಾವು ಈ ಹಿಂದೆ 3 ಬಾರಿ ವೀರಶೈವ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಒತ್ತಾಯಿಸಿದ್ದರೂ ವೀರಶೈವರಿಗೆ ಮನ್ನಣೆ ದೊರಕಿಲ್ಲ. ಇಂದು ನಾವು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು ಪಂಚ ಪೀಠಗಳ ಹಾಗೂ ವೀರಶೈವರ ವಿರುದ್ಧ ಅಲ್ಲ’ ಎಂದು ಹೇಳಿದರು.

ADVERTISEMENT

‘ಸಿಖ್, ಬೌದ್ಧ, ಜೈನ ಧರ್ಮೀಯರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದ್ದರಿಂದ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದಿಂದ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯಿಂದ 99 ಉಪಜಾತಿಗಳು ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲ ವಾಗಲಿದೆ’ ಎಂದು ಹೇಳಿದರು.

‘ಸಚಿವ ವಿನಯ ಕುಲಕರ್ಣಿ ಮಾತನಾಡಿ, ‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡುತ್ತಿರುವುದರಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಇದೆ. ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ನನ್ನ ಹೋರಾಟ ನಿರಂತರವಾಗಿರುತ್ತದೆ’ ಎಂದು ಹೇಳಿದರು. ‘ಡಿ.10 ರಂದು ವಿಜಯಪುರ ದಲ್ಲಿ ನಡೆಯುವ ರ‍್ಯಾಲಿಯಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ಲಿಂಗಾಯತರು ಭಾಗವಹಿಸಿ ರ‍್ಯಾಲಿಯನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಸಿದ್ದಲಿಂಗ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಅಪ್ಪುಗೌಡ ಪಾಟೀಲ, ಸಂಗಮೇಶ ಓಲೇಕಾರ, ಸಂಗಮೇಶ ಬಬಲೇಶ್ವರ, ಕಲ್ಲು ದೇಸಾಯಿ, ಸಿದ್ದಣ್ಣ ಸಕ್ರಿ, ಸುಭಾಸ ಛಾಯಾಗೋಳ, ಸಿದ್ದಣ್ಣ ಜಾಲಗೇರಿ, ಬಸನಗೌಡ ಪಾಟೀಲ, ಬಾಳಾಸಾಹೇಬಗೌಡ ಪಾಟೀಲ, ರವಿ ಬಿರಾದಾರ, ಎಪ್.ಡಿ.ಮೇಟಿ, ಶಿವನಗೌಡ ಬಿರಾದಾರ ಇದ್ದರು.

ರಾಜುಗೌಡ ಚಿಕ್ಕೂಂಡ ಸ್ವಾಗತಿಸಿದರು, ಶ್ರೀಕಾಂತ ಪಟ್ಟಣಶಟ್ಟಿ ವಂದಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.