ADVERTISEMENT

ಪಕ್ಷಾಂತರ ಪರ್ವ ಹೆಚ್ಚಾಗಲಿದೆ...

ಕತ್ನಳ್ಳಿ ಮಠದ ಪೀಠಾಧೀಶ ಶಿವಯ್ಯ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:43 IST
Last Updated 21 ಮಾರ್ಚ್ 2018, 12:43 IST
ಪಕ್ಷಾಂತರ ಪರ್ವ ಹೆಚ್ಚಾಗಲಿದೆ...
ಪಕ್ಷಾಂತರ ಪರ್ವ ಹೆಚ್ಚಾಗಲಿದೆ...   

ವಿಜಯಪುರ: ‘ಈಗ ಎಲೆಕ್ಷನ್ ಬಂದದ...ಅಚ್ಚೀ ಕಡೀಂದ ಇಚ್ಛೀ ಕಡೆಗೆ...ಇಚ್ಚಿಕಡೆಯಿಂದ ಅಚ್ಚೀ ಕಡೆಗೆ...ಇದು ಹಿಂಗ ಮುಂದುವರೀತದ....’

ತಾಲ್ಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ನಡೆಯುತ್ತಿರುವ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮ ದೇವತೆ ಲಗಮವ್ವ ದೇವಿ ದೇವಾಲಯದ ಕಟ್ಟೆಯ ಮೇಲೆ ರಂಗೋಲಿ ಬಿಡಿಸಿದ ಕಂಬಳಿ ಮೇಲೆ ನಿಂತು ಕತ್ನಳ್ಳಿ ಮಠದ ಪೀಠಾಧೀಶ ಶಿವಯ್ಯ ಸ್ವಾಮೀಜಿ ನುಡಿದ ಗುರು ಕರುಣೆಯ ಮಾತುಗಳಿವು. ನೆರೆದ ಸಹಸ್ರಾರು ಸಂಖ್ಯೆಯ ಭಕ್ತರು ಗುರುಗಳ ಹೇಳಿಕೆಯನ್ನು ಶ್ರದ್ಧಾ-ಭಕ್ತಿಯಿಂದ ಆಲಿಸಿದರು.

ಭವಿಷ್ಯದ ರಾಜಕೀಯ ವಿದ್ಯಮಾನಗಳನ್ನು ಸೂಚ್ಯವಾಗಿ ವಿವರಿಸಿದ ಶ್ರೀಗಳು, ‘ಪಕ್ಷಾಂತರ ಪರ್ವ ಹೆಚ್ಚಾಗಲಿದೆ. ಆ ಪಕ್ಷದವರು, ಈ ಪಕ್ಷಕ್ಕೆ, ಈ ಪಕ್ಷದಲ್ಲಿರುವವರು ಆ ಪಕ್ಷಕ್ಕೆ ಎಂಬುದು ನಡೆದೇ ಇರುತ್ತದೆ. ಆ ಮನ್ಯಾಗಿನವರು ಈ ಮನಿಗೆ ಪೋ...ಆ ಮನ್ಯಾಗಿನವರು ಈ ಮನಿಗೆ ಪೋ...’ ಎಂದ ಅವರು, ‘ಈಗ ಎಲೆಕ್ಷನ್ ಬಂದದ...ಎಲೆಕ್ಷನ್ ಅಂದ್ರ ಕಲೆಕ್ಷನ್ ಅಲ್ಲ....ನಿಮ್ಮನ್ನ ಉದ್ಧಾರ ಮಾಡೂವವರ ಸೆಲೆಕ್ಷನ್ ಆಗಬೇಕು’ ಎಂದು ಹೇಳಿದರು.

ADVERTISEMENT

‘ಎಲೆಕ್ಷನ್ ಅಂದ್ರ ಕಟಿಪಟಿ, ಲಟಪಟಿ, ಕಡ್ಡಿಪಟಿ ಇದ್ದಂಗ...ಈ ಬಾರಿಯಂತೂ ಇಲೆಕ್ಷನ್ ಅಂದ್ರ ಭಾರೀ ಐತಿ, ನೀವು ಆಯುಷ್ಯದೊಳಗೆ ಇಂತಾ ಇಲೆಕ್ಷನ್ ನೋಡಂಗಿಲ್ಲ, ಅಷ್ಟೊಂದು ಕಟಿಪಟಿ, ಲಟಪಟಿ ಐತಿ...ಯಾರ ರೊಕ್ಕಾ ಕೊಡ್ತಾರ ಅವರಿಗೆ ಮತ ಹಾಕಬ್ಯಾಡ್ರೀ...ಯಾರ ಸೇವಾ ಮಾಡ್ತಾರ ಅವರಿಗೆ ಮತ ಹಾಕೂ ಅಭ್ಯಾಸ ಈಗ ಮಾಡ್ಕೋರಿ’ ಎಂದರು.

‘ಎಲೆಕ್ಷನ್ ಅಂದ್ರ ಯಾವ ಯೋಗ್ಯ ಅದಾನ, ಯಾವ ಅಯೋಗ್ಯ ಅದಾನ ಎಂಬುದನ್ನ ನೋಡಿ ವೋಟ್ ಹಾಕಿ ಸೆಲೆಕ್ಷನ್ ಮಾಡ್ರೀ’ ಎಂದರು.

ಆನೆ ಬೆಲೆ ಎತ್ತಿಗೆ....
ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ ಹಾಗೂ ಕೋಳಿ ಬೆಲೆ ಮನುಷ್ಯನಿಗೆ ಬಂದಿದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು. ಮನುಷ್ಯನ ಬೆಲೆ ಕುಸಿದು ಹೋಗಿದೆ, ನಾಯಿಗಿಂತಲೂ ಮನುಷ್ಯ ಕನಿಷ್ಠ ಆಗಿದ್ದಾನೆ, ಇದನ್ನು ನಾನು ಹಿಂದೂ ಹೇಳೀನಿ ಎಂದರು.

ಸದಾ ಸದಾಶಿವನ ಧ್ಯಾನ ಮಾಡ್ರೀ... ಶುಭಕಾರ್ಯಕ್ಕ ಬಂದಾಗ, ದೇವನ ಸನ್ನಿಧಿಗೆ ಬಂದಾಗ ಗಡಬಡ ಮಾಡಬ್ಯಾಡ್ರೀ... ಸಮಾಧಾನದಿಂದ ಗುರು ಸೇವಾ ಮಾಡ್ರೀ... ಎಲ್ಲಾ ಒಳ್ಳೆಯದಾಗುತ್ತದೆ ಎಂದು ಶ್ರೀಗಳು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.