ADVERTISEMENT

ಬಿಜೆಪಿಗೆ ಪಕ್ಷಾಂತರಿಗಳು ಬೇಕಿಲ್ಲ; ಕೂಚಬಾಳ

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಬಿಜೆಪಿ ಸೇರ್ಪಡೆಗೆ ಪ್ರಬಲ ಪ್ರತಿರೋಧ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:54 IST
Last Updated 20 ಮಾರ್ಚ್ 2018, 10:54 IST

ವಿಜಯಪುರ: ‘ಪಕ್ಷಾಂತರಿಗಳು ಬಿಜೆಪಿಗೆ ಬೇಕಿಲ್ಲ. ಕ್ಷೇತ್ರದಲ್ಲಿ ಪಕ್ಷ ಸದೃಢವಾಗಿದೆ. ಕಾರ್ಯಕರ್ತರು ಕಟ್ಟಿದ ಸುಂದರ ಗೂಡಿಗೆ ಕಾಗೆಗಳ ಪ್ರವೇಶಕ್ಕೆ ಅವಕಾಶ ನೀಡಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆರ್.ಎಸ್‌.ಪಾಟೀಲ ಕೂಚಬಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸೇರ್ಪಡೆ ಯತ್ನಕ್ಕೆ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದರು.

‘ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳೆಲ್ಲಾ ಒಂದಾಗಿದ್ದೇವೆ. ಹೊರಗಿನವರನ್ನು ಕರೆತರುವ ಅಗತ್ಯವಿಲ್ಲ. ಹಿಂದಿನ ತಪ್ಪುಗಳನ್ನು ಈ ಬಾರಿ ಮಾಡಲ್ಲ. ನಮ್ಮಲ್ಲೇ ಯಾರೇ ಒಬ್ಬರಿಗೂ ಟಿಕೆಟ್‌ ನೀಡಿದರೇ ಎಲ್ಲರೂ ಒಟ್ಟಾಗಿ ಬಿಜೆಪಿ ಗೆಲುವಿಗೆ ದುಡಿಯುತ್ತೇವೆ’ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುದ್ದೇಬಿಹಾಳದಲ್ಲಿ ಈ ಬಾರಿ ಬಿಜೆಪಿ ಗೆಲುವು ಕಟ್ಟಿಟ್ಟ ಬುತ್ತಿ. ಪಕ್ಷಕ್ಕಾಗಿ ದುಡಿದವರನ್ನು ವರಿಷ್ಠರು ಗುರುತಿಸುವ ಅಚಲ ವಿಶ್ವಾಸ ನಮ್ಮದಾಗಿದೆ’ ಎಂದು ಹೇಳಿದರು.

ADVERTISEMENT

‘ಚುನಾವಣೆ ಸಂದರ್ಭ ಇಂತಹ ಊಹಾಪೋಹ ಸಹಜವಾದದ್ದು. ಮುಖಂಡರು, ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರಲ್ಲೂ ಒಂದೇ ವಿಶ್ವಾಸವಿದೆ. ವರಿಷ್ಠರು ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ಕೊಡಲಿದ್ದಾರೆ ಎಂಬುದು ನಮಗೆ ಮನದಟ್ಟಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಇದೇ ಸಂದರ್ಭ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಂಗಳಾದೇವಿ ಬಿರಾದಾರ ಮಾತನಾಡಿ ‘ಕೆಲ ದಿನಗಳ ಹಿಂದಷ್ಟೇ ನಡಹಳ್ಳಿ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೀಗ ಅವರೇ ಬಿಜೆಪಿ ಸೇರುವ ಬಗ್ಗೆ ಊಹಾಪೋಹದ ಸುದ್ದಿ ಹರಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಕ್ಷೇತ್ರದಲ್ಲಿ ದಶಕದ ಹಿಂದಿನಿಂದಲೂ ಭದ್ರವಾಗಿ ಬೇರೂರಿದೆ’ ಎಂದು ತಿಳಿಸಿದರು.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಮಲಕೇಂದ್ರಾಯಗೌಡ ಪಾಟೀಲ, ಎಂ.ಎಸ್‌.ಪಾಟೀಲ ನಾಲತವಾಡ, ವಕೀಲ ಬಿ.ಜಿ.ಜಗ್ಗಲ, ಶಂಕರಗೌಡ ಹಿರೇಗೌಡರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.