ADVERTISEMENT

ಬಿಸಿಲ ಝಳಕ್ಕೆ ಬಸವಳಿದ ವಿಜಯಪುರ ಜನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:27 IST
Last Updated 23 ಏಪ್ರಿಲ್ 2017, 5:27 IST

ವಿಜಯಪುರ: ಕಡು ಬೇಸಿಗೆಯ ಆರಂಭ­ದಲ್ಲೇ ಬಿಸಿಲ ಝಳ ಹೆಚ್ಚಿದೆ. ಏಪ್ರಿಲ್‌ನಲ್ಲಿ ಮೊದಲ ಬಾರಿಗೆ 42.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈಚೆಗಿನ ವರ್ಷಗಳಲ್ಲಿ ಜಿಲ್ಲೆಯ ಇತಿಹಾಸ.ತಿಂಗಳ ಆರಂಭದಿಂದಲೂ ಬೇಸಿ­ಗೆಯ ಪ್ರಖರತೆ ಹೆಚ್ಚುತ್ತಿದೆ. ಬಹುತೇಕ ದಿನ 40 ಡಿಗ್ರಿ ಆಸುಪಾಸೇ ಗರಿಷ್ಠ ತಾಪಮಾನ ದಾಖಲಾಗಿದೆ.

ಬೆಂಗಳೂರಿನ ಭಾರತ ಹವಾಮಾನ ವಿಭಾಗ ಇದೇ 23ರ ಭಾನುವಾರ ಜಿಲ್ಲೆಯ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಮುನ್ಸೂಚನೆ ನೀಡಿದ್ದು, ಸೋಮವಾರ, ಮಂಗಳ­ವಾರ, ಬುಧವಾರ ಸಹ 42 ಡಿಗ್ರಿ ದಾಖಲಾಗುವ ಮುನ್ಸೂಚನೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ತತ್ತರಗೊಂಡ ಜನತೆ
‘ಬಿಸಿಲಿನ ಪ್ರಖರತೆ, ಬಿಸಿ ಗಾಳಿಗೆ ಜಿಲ್ಲೆಯ ಜನತೆ ತತ್ತರಿಸಿದೆ. ಭೂಮಿ ಕಾದ ಕಾವಲಿಯಂತಾಗಿದೆ. ಮುಂಜಾನೆ ಒಂಬತ್ತು ಗಂಟೆ ದಾಟುತ್ತಿದ್ದಂತೆ, ಮನೆ­ಯಿಂದ ಹೊರ ಬರಲಾಗದ ಸ್ಥಿತಿ. ಬಿಸಿಲ ಝಳಕ್ಕೆ ಒಳಗೂ ಇರಲಾಗುತ್ತಿಲ್ಲ. ಏರ್‌ ಕೂಲರ್‌, ಫ್ಯಾನ್‌ ಇದ್ದರೂ ಪ್ರಯೋಜನಕ್ಕೆ ಬಾರವು...

ಹಗಲು ಸೂರ್ಯನ ಬೆಂಕಿಯಂಥ ಕಿರಣಗಳಿಗೆ ಕಾದ ಭೂಮಿ ರಾತ್ರಿಯಿಡಿ ಕಾವನ್ನು ಹೊರ ಉಗುಳುತ್ತಿದೆ. ಇದು ಬಿಸಿಗಾಳಿಯಾಗಿ ಪರಿವರ್ತನೆಗೊಂಡು, ಉಸಿರಾಡಲು ಕಷ್ಟ ಎನ್ನುವಂಥ ವಾತಾ­ವರಣ ನಿರ್ಮಾಣಗೊಂಡಿದೆ. ರಾತ್ರಿಯಿಡಿ ಸೆಖೆ ಕಾಡುತ್ತಿದ್ದು, ನಿದ್ದೆ ಬಾರದಾಗಿದೆ. ನಸುಕಿನ ವೇಳೆ ಮಾತ್ರ ಕೊಂಚ ನಿದ್ದೆ ಎಂಬಂತಾಗಿದೆ ನಮ್ಮ ಪರಿಸ್ಥಿತಿ...’ ಎನ್ನುತ್ತಾರೆ ನಗರದ ಮಳ್ಳುಗೌಡ ಪಾಟೀಲ, ಈರಣ್ಣ ಚಿಂಚಲಿ.

ADVERTISEMENT

‘42.5 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ಈ ಹಿಂದೆ ಇಂತಹ ಬಿಸಿಲು ಕಂಡಿರಲಿಲ್ಲ. ಆರೋಗ್ಯ ಕಾಳಜಿ­ಯಿಂದ ಹೊರಗೆ ಅಡ್ಡಾಡೋ­ದನ್ನೇ ಬಿಟ್ಟಿದ್ದೇವೆ. ನಮ್ಮ ಚಟುವಟಿಕೆ ನಡೆ­ಯುತ್ತಿರುವುದು ಸಂಜೆ 6ರಿಂದ 10ರವರೆಗೆ ಮಾತ್ರ’ ಎಂದು ಅಪ್ಪು ಅಂಗಡಿ ತಿಳಿಸಿದರು.‘ಹವಾಮಾನ ಮುನ್ಸೂಚನಾ ಕೇಂದ್ರ ನಗರದ ಹೊರವಲಯದಲ್ಲಿದೆ. ಇಲ್ಲಿನ ವಾತಾವರಣದ ಜತೆಗೆ ಹೊರಗಿನ ವಾತಾವರಣ ಹೋಲಿಸಿದರೆ ಕೊಂಚ ವ್ಯತ್ಯಾಸ ಕಂಡು ಬರಲಿದೆ. ನಗರ ‘ಬಿಸಿಯ ದ್ವೀಪ’ದ ವ್ಯಾಪ್ತಿಯೊಳಗೆ ಬರುವುದರಿಂದ ಇಲ್ಲಿ ದಾಖಲಾಗುವ ಗರಿಷ್ಠ ತಾಪಮಾನಕ್ಕಿಂತ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ ತಾಪಮಾನ ವಿಜಯಪುರದಲ್ಲಿ ಹೆಚ್ಚಿರುತ್ತದೆ’ ಎಂದು ಹವಾಮಾನ ತಜ್ಞ ಎಚ್‌.ವೆಂಕಟೇಶ್‌ ಹೇಳಿದರು.

43 ಡಿಗ್ರಿ ಗರಿಷ್ಠ ದಾಖಲೆ‘ವಿಜಯಪುರ ಹೊರವ­ಲಯದ­ಲ್ಲಿರುವ ಹಿಟ್ನಳ್ಳಿ ಕೃಷಿ ಮಹಾವಿ­ದ್ಯಾಲಯದ ಹವಾಮಾನ ಮುನ್ಸೂಚನಾ ವಿಭಾಗದಲ್ಲಿನ 25 ವರ್ಷದ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೂ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ 2010ರ ಮೇ 12 ಹಾಗೂ 19ರಂದು ದಾಖಲಾಗಿದೆ. 2017ರ ಏ 20ರ ಗುರುವಾರ 42.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದರೆ, ಶುಕ್ರವಾರ ಏಕಾಏಕಿ 2 ಡಿಗ್ರಿ ಕಡಿಮೆಯಾಗಿ 40 ಡಿಗ್ರಿ ದಾಖಲಾಗಿದೆ’ ಎಂದು ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಎಚ್‌.ವೆಂಟಕೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘1996ರ ಮಾರ್ಚ್‌ 26ರಿಂದ 31ರವರೆಗೆ ನಿರಂತರ ಐದು ದಿನ ಜಿಲ್ಲೆಯ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 41 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2004ರ ಮಾರ್ಚ್‌ 19, 21, 22, 24ರಂದು ಸಹ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಪ್ರಸ್ತುತ ವರ್ಷ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲೇ 40, 41, 42 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ’ ಎಂದು ಹವಾಮಾನ ತಜ್ಞ ಎಚ್‌.ವೆಂಕಟೇಶ್‌ ಅಂಕಿ–ಅಂಶಗಳ ಮಾಹಿತಿಯನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.