ADVERTISEMENT

ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಡಗರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 9:58 IST
Last Updated 20 ಅಕ್ಟೋಬರ್ 2017, 9:58 IST
ಬಸವನಬಾಗೇವಾಡಿಯಲ್ಲಿ ಲಕ್ಷ್ಮೀ ಪೂಜೆಗಾಗಿ ಪಟಾಕಿ, ಹೂವು, ಹಣ್ಣು ಖರೀದಿ ಜೋರಾಗಿತ್ತು
ಬಸವನಬಾಗೇವಾಡಿಯಲ್ಲಿ ಲಕ್ಷ್ಮೀ ಪೂಜೆಗಾಗಿ ಪಟಾಕಿ, ಹೂವು, ಹಣ್ಣು ಖರೀದಿ ಜೋರಾಗಿತ್ತು   

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದ ಸುತ್ತಲಿನ ಮಾರುಕಟ್ಟೆ, ನಿಯೋಜಿತ ಮೆಗಾ ಮಾರುಕಟ್ಟೆ ಆವರಣದಲ್ಲಿ ಬೆಳಗ್ಗೆಯಿಂದಲೇ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.

‘ಕಳೆದ ವರ್ಷದ ದೀಪಾವಳಿಯಲ್ಲಿ ಒಂದು ಕೆಜಿ ಚಂಡು ಹೂವಿಗೆ ₹20 ಇದ್ದರೆ ಈ ವರ್ಷ ಬೆಳಿಗ್ಗೆ ಕೆಜಿಗೆ ₹100 ಇತ್ತು. ಮಧ್ಯಾಹ್ನ 3 ರಷ್ಟೊತ್ತಿಗೆ ಕೆಜಿಗೆ ₹200ರಂತೆ ಮಾರಾಟವಾಯಿತು. ಒಂದು ಕೆಜಿ ಚೆಂಡುಹೂವು ಖರೀದಿಸಲು ಬಂದವರು ಅರ್ಧ ಕೆಜಿ ಮಾತ್ರ ಖರೀದಿಸಿದರು. ಸೇವಂತಿಗೆ ಹೂವು ಕಳೆದ ವರ್ಷ ಕೆಜಿಗೆ ₹40 ಇತ್ತು. ಈ ದೀಪಾವಳಿಯಲ್ಲಿ ಒಂದು ಕೆಜಿ ಹೂವಿಗೆ ₹200 ಇದ್ದುದ್ದರಿಂದ ಜನರು ಕಳೆದ ವರ್ಷಕ್ಕಿಂತ ಅತಿ ಕಡಿಮೆ ಪ್ರಮಾಣದ ಹೂವು ಖರೀದಿಸುತ್ತಿದುದು ಕಂಡು ಬಂದಿತು.

ಚಿಕ್ಕ ಬಾಳೆ ದಿಂಡು ಜೋಡಿಗೆ ₹50 ರಿಂದ ₹100 , ದೊಡ್ಡ ಬಾಳೆ ದಿಂಡು (ಬಾಳೆ ಗೊನೆ ಇರುವ) ₹800 ರಿಂದ ₹2000 ವರೆಗೆ ಮಾರಾಟವಾಯಿತು. ಬಾಳೆ ಗೊನೆ ಬೆಲೆ ಕೇಳಿದ ಕೆಲ ಜನರು ಚಿಕ್ಕ ಬಾಳೆ ದಿಂಡುಗಳನ್ನೇ ತಂದು ಅಂಗಡಿ ಮುಂಭಾಗವನ್ನು ಅಲಂಕರಿಸಿದರು.

ADVERTISEMENT

ಕುಂಬಳಕಾಯಿ, ಒಂದಕ್ಕೆ ₹100. ಚಂಡು ಹೂವಿನ ಗಿಡ ಜೋಡಿಗೆ ₨50, ಹೂವಿನ ಹಾರ ಗಾತ್ರಕ್ಕೆ ತಕ್ಕಂತೆ ₹30 ರಿಂದ 100 ವರೆಗೆ ಇತ್ತು. ಹೀಗೆ ಪೂಜೆಗೆ ಅಗತ್ಯವಿರುವ ವಿವಿಧ ಸಾಮಗ್ರಿಗಳ ಬೆಲೆ ಹೆಚ್ಚಳವಿದ್ದರೂ ಜನರು ಖರೀದಿಯಲ್ಲಿ ನಿರತರಾಗಿದ್ದರು. ಜೊತೆಗೆ ಪಟಾಕಿ ಖರೀದಿಸಿದರು.

ಸಾಕಷ್ಟು ಸಂಖ್ಯೆಯ ರೈತರು ತಮ್ಮ ತೋಟದಲ್ಲಿ ಚಂಡು ಹೂವು ಬೆಳೆಯನ್ನು ಬೆಳೆದಿದ್ದರು. ಉತ್ತಮ ಇಳುವರಿಯೊಂದಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆದು ನಿಂತ ಹೂವಿನ ಗಿಡಗಳು ಕೊಳೆತು ಹೋಗಿವೆ. ಅಳಿದುಳಿದ ಗಿಡಗಳಿಗೆ ರೋಗ ತಗುಲಿದ್ದರಿಂದ ಕೆಲ ಚಿಕ್ಕ ಹೂವುಗಳು ಮಾತ್ರ ಕೈಗೆ ಬಂದಿವೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣ ಹೂವು ಬಂದಿಲ್ಲ ಎಂದು ಚೆಂಡು ಹೂವು ಬೆಳೆದ ರೈತ ದಯಾನಂದ ಜಾಲಗೇರಿ ಹೇಳಿದರು.

ಮನೆಯಲ್ಲಿ ಬೆಳಗ್ಗೆಯಿಂದಲೇ ಹಬ್ಬದ ಚಟುವಟಿಕೆಗಳು ಆರಂಭವಾಗಿದ್ದವು. ಪೂಜಾ ಸಾಮಗ್ರಿಗಳು ಮನೆಗೆ ಬರುತ್ತಿದ್ದಂತೆ ಕುಟುಂಬ ಸದಸ್ಯರು ಚೆಂಡು ಹೂ ಪೋಣಿಸಿ ಮನೆಯ ಬಾಗಿಲುಗಳಿಗೆ ಕಟ್ಟಿದರು. ಲಕ್ಷ್ಮೀ ಪೂಜೆಯ ಮಂಟಪವನ್ನು ವಿವಿಧ ಹೂವು ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕರಿಸಿದರು. ಅಂಗಡಿಗಳಲ್ಲೂ ಪೂಜೆಯ ಸಿದ್ಧದತೆಯೊಂದಿಗೆ ವ್ಯಾಪಾರದ ಭರಾಟೆ ಕಂಡು ಬಂದಿತು.

ಮಹಿಳೆಯರು ಹಬ್ಬದ ಅಡುಗೆ ತಯಾರಿಸಿದ ನಂತರ ಲಕ್ಷ್ಮೀ ಪೂಜೆಯಲ್ಲಿ ತೊಡಗಿಕೊಂಡರು. ವಾಹನ ಮಾಲೀಕರು, ವ್ಯಾಪಾರಸ್ಥರು ತಮ್ಮ ಅಂಗಡಿಗಳ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಪೂಜೆ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು, ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

ಕೆಲವರು ದೀಪಾವಳಿ ಅಮವಾಸ್ಯೆ ಇಡೀ ರಾತ್ರಿ ಜಾಗರಣೆ ಮಾಡಿ ಲಕ್ಷ್ಮೀ ದೇವಿಯ ಮುಂದಿನ ದೀಪ ನಂದದಂತೆ ನೋಡಿಕೊಂಡರು. ಎಲ್ಲ ಅಂಗಡಿ ಮುಂಗಟ್ಟುಗಳ ಮುಂದೆ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿತ್ತು. ಮನೆಗಳ ಮುಂದೆ ಹಣತೆ, ಆಕಾಶ ಬುಟ್ಟಿಗಳು, ರಂಗೋಲಿ ಚಿತ್ತಾರ ಗಮನ ಸೆಳೆಯುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.