ADVERTISEMENT

ಮಧ್ಯಾಹ್ನದ ಬಿಸಿಯೂಟ: ಮಕ್ಕಳ ಗೈರು

ರಜೆಯಲ್ಲೂ ವಿಸ್ತರಣೆ; ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಕೇಂದ್ರ ತೆರೆದಿದ್ದರೂ ಸಿಗದ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:21 IST
Last Updated 22 ಏಪ್ರಿಲ್ 2017, 6:21 IST
ವಿಜಯಪುರ: ಸತತ ಬರದಿಂದ ಅಕ್ಷರ ದಾಸೋಹ ಯೋಜನೆಯನ್ನು ಬೇಸಿಗೆ ರಜೆ ಅವಧಿಗೂ ರಾಜ್ಯ ಸರ್ಕಾರ ವಿಸ್ತರಿ­ಸಿದ್ದು, ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಶಾಲಾ ಮಕ್ಕಳಿಗಾಗಿ ಬಿಸಿಯೂಟ ನಡೆದಿದೆ.
 
ಮುಖ್ಯಶಿಕ್ಷಕರ ಜವಾ­ಬ್ದಾರಿ­ಯಡಿ ನಿತ್ಯವೂ ಮಧ್ಯಾಹ್ನ 1 ಗಂಟೆ ವೇಳೆಗೆ ಬಿಸಿ­ಯೂಟ ಸಿದ್ಧಗೊಂಡರೂ, ಮಕ್ಕಳ ಹಾಜರಾತಿ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ.
 
ರಜೆ ಘೋಷಣೆಯಾಗುತ್ತಿದ್ದಂತೆ ಅಪಾರ ಸಂಖ್ಯೆಯ ಮಕ್ಕಳು ನೆಂಟರ ಮನೆಗೆ ತೆರಳಿದ್ದಾರೆ. ಊರಿನಲ್ಲೇ ಉಳಿದು, ಮನೆಯಲ್ಲಿ ಅನುಕೂಲ ಇಲ್ಲದ ಮಕ್ಕಳು ಹಾಗೂ ಮನೆಯ ಎಲ್ಲರೂ ದುಡಿ­ಯಲು ಹೊರ ಹೋಗಿದ್ದ ಕುಟುಂ­ಬದ ಮಕ್ಕಳು ಮಾತ್ರ ಮಧ್ಯಾ­ಹ್ನದ ಊಟಕ್ಕಾಗಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
 
ಬೆಳಿಗ್ಗೆ 11 ಗಂಟೆ ವೇಳೆಗೆ ಶಾಲಾ ಆವರಣ ಪ್ರವೇಶಿಸಿ ಮರ–ಗಿಡಗಳ ನೆರಳಿನಲ್ಲಿ ಕೆಲ ಹೊತ್ತು ಆಟವಾಡಿ, ಬಿಸಿ­ಯೂಟ ಮಾಡಿ ಮನೆಗೆ ಮರಳುತ್ತಿದ್ದಾರೆ. ಅನುಕೂಲಸ್ಥರ ಮಕ್ಕಳು ಯಾರೊಬ್ಬರೂ ಶಾಲೆಯತ್ತ ಹೆಜ್ಜೆ ಹಾಕುವುದಿಲ್ಲ. ಬಂದರೂ ಗೆಳೆಯರ ಜತೆ ಆಟವಾಡಿ ಊಟ ಮಾಡದೆ ಮನೆಗೆ ಮರಳುತ್ತಾರೆ.
 
ಈಗ ನಡೆಯುತ್ತಿರುವ ಅಕ್ಷರ ದಾಸೋಹ ಕಡ್ಡಾಯವಲ್ಲದಿದ್ದರಿಂದ ನಾವೂ ಸಹ ಮಕ್ಕಳಿಗೆ ಒತ್ತಾಯ ಮಾಡು­­ತ್ತಿಲ್ಲ. ಅವರಿಷ್ಟಕ್ಕೆ ಬಿಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಎಸ್‌.ಬಿರಾದಾರ ತಿಳಿಸಿದರು.
 
ಸಿಬ್ಬಂದಿಗೆ ಪೀಕಲಾಟ 
ಶಾಲೆಗೆ ಎಷ್ಟು ವಿದ್ಯಾರ್ಥಿಗಳು ಬರಲಿ­ದ್ದಾರೆ ಎಂಬ ಲೆಕ್ಕವೇ ಯಾರೊ­ಬ್ಬರಿಗೂ ಸಿಗದಾಗಿದೆ. ನಿತ್ಯವೂ ಒಂದೊಂದು ಸಂಖ್ಯೆಯ ಮಕ್ಕಳು ಬರುತ್ತಾರೆ. ಕಡಿಮೆ ಅಡುಗೆ ಮಾಡಿದ ದಿನ ಹೆಚ್ಚಿನ ಮಕ್ಕಳು ಬಂದರೆ, ತುಸು ಹೆಚ್ಚು ಮಾಡಿದ ದಿನ ಬೆರಳೆಣಿಕೆ ಮಕ್ಕಳು ಬರುತ್ತಾರೆ. ಹೇಗೆ ನಿಭಾಯಿಸಬೇಕು ಎಂಬುದೇ ತಿಳಿಯದಾಗಿದೆ.
 
ಕಡಿಮೆಯಿದ್ದ ದಿನ ಇದ್ದುದರಲ್ಲೇ ಎಲ್ಲರಿಗೂ ಹೊಂದಿಸಲು ಯತ್ನಿಸಲಾಗು­ವುದು. ನಮಗೂ ಇದು ಕಷ್ಟದ ಕೆಲಸ. ಹೆಚ್ಚಿಗೆ ಉಳಿದ ದಿನ ಎಸೆಯಲು ಮನಸ್ಸು ಬಾರದೆ ಮನೆಗೆ ಕೊಂಡೊಯ್ಯುತ್ತೇವೆ ಎಂದು ಹೆಸರು ಬಹಿರಂಗ ಪಡಿಸ­ಲಿಚ್ಚಿಸದ ಅಕ್ಷರ ದಾಸೋಹ ಯೋಜ­ನೆಯ ಸಹಾಯಕಿಯೊಬ್ಬರು ತಿಳಿಸಿದರು.
 
ಕೆಲ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿದ್ದರೂ ಇಲಾಖೆ ಸೂಚಿಸಿದ ಸಂಖ್ಯೆಗೆ ನಾಲ್ಕೈದು ಕಡಿಮೆ ಹಾಜರಾತಿ ತೋರಿಸಿ ಯೋಜನೆಗೆ ಪೂರೈಕೆಯಾಗುವ ಆಹಾರ ಪದಾರ್ಥಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಹ ಶಿಕ್ಷಕರ ವಲಯದಿಂದಲೇ ಕೇಳಿ ಬರುತ್ತಿದೆ.
 
ಡಿಡಿಪಿಐ ಇದನ್ನು ನಿರಾಕರಿಸುತ್ತಾರೆ. ನಮ್ಮಲ್ಲಿ ನಿತ್ಯ ಪ್ರತಿ ಶಾಲೆಯ ಹಾಜರಾತಿ ಪಡೆದೇ ಆಹಾರ ಪದಾರ್ಥ ವಿತರಿ­ಸುತ್ತೇವೆ. ಹಿಂದಿನ ಸಾಲಿನ ಹಾಜ­ರಾತಿಯ ಶೇ 20ರಷ್ಟು ಮಕ್ಕಳನ್ನು ಪರಿ­ಗಣಿಸುತ್ತೇವೆ. ಕೊಂಚ ಹೆಚ್ಚಿರಲಿ ಎಂದು ಪ್ರತಿ ಶಾಲೆಗೆ ಪೂರೈಸುತ್ತಿದ್ದ ಆಹಾರ ಧಾನ್ಯಗಳಲ್ಲಿ ಶೇ 40ರಷ್ಟನ್ನು ಮಾತ್ರ ಪೂರೈಸುತ್ತೇವೆ ಎಂದು ಹೇಳಿದರು.
 
ನೀರಿನ ಬರ 
ನೂರಕ್ಕೂ ಅಧಿಕ ಕೇಂದ್ರಗಳಲ್ಲಿ ಬಿಸಿಯೂಟಕ್ಕೆ ನೀರಿನ ಬರ ತಟ್ಟಿದೆ ಎಂಬುದನ್ನು ಶಿಕ್ಷಣ ಇಲಾಖೆ ಮೂಲಗಳೇ ಖಚಿತ ಪಡಿಸುತ್ತವೆ. ಇಂತಹ ಕೇಂದ್ರಗಳಿಗೆ ನೀರು ಸರಬರಾಜು ಮಾಡುವ ಹೊಣೆ ಆಯಾ ಗ್ರಾಮ ಪಂಚಾಯ್ತಿಯದ್ದು.
 
ಆದರೆ ಸ್ಥಳೀಯ ಆಡಳಿತ ಸಮರ್ಪಕವಾಗಿ ಸ್ಪಂದಿಸದಿದ್ದರಿಂದ ಅಡುಗೆ ತಯಾರಕರು, ಸಹಾಯಕರ ಹೆಗಲಿಗೆ ಈ ಜವಾ­ಬ್ದಾರಿಯೂ ಸೇರಿದೆ. ಹಲವೆಡೆ ಪ್ರಯಾ­ಸಪಟ್ಟು ನೀರೊದಗಿಸಿಕೊಂಡು ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣ­ಗೊಂಡಿದೆ.
 
ವಿಜಯಪುರ ತಾಲ್ಲೂಕು ಖಿಲಾರ­ಹಟ್ಟಿ ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊರೆದಿರುವ ಕೊಳವೆ­ಬಾವಿಯಲ್ಲಿ ನೀರಿಲ್ಲದೆ ಮೂರು ತಿಂಗಳಿಂದ ಬಿಸಿಯೂಟ ತಯಾರಕರು ಬೇರೆಡೆಯಿಂದ ನೀರು ತರುತ್ತಿ­ದ್ದಾರೆ. ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿ­ಸಿದೆ ಎಂದು ಎಸ್‌ಡಿಎಂಸಿ ಸದಸ್ಯ ತಾಯಪ್ಪ ಬಿಸೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.