ADVERTISEMENT

ಮಾಸ್ಟರ್ ಪ್ಲಾನ್ ಜಾರಿಗೆ ಜಿಲ್ಲಾಧಿಕಾರಿ ಸೂಚನೆ

ಅಂಬೇಡ್ಕರ್ ವೃತ್ತದಿಂದ ಶಿವಾಜಿ ವೃತ್ತದವರಗೆ ರಸ್ತೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 6:13 IST
Last Updated 2 ಸೆಪ್ಟೆಂಬರ್ 2014, 6:13 IST

ವಿಜಾಪುರ: ನಗರದ ಅಂಬೇಡ್ಕರ್ ವೃತ್ತದಿಂದ ಶಿವಾಜಿ ವೃತ್ತದವರೆಗೆ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ­ಧಿಕಾರಿ ಡಿ.ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗ­ಣದಲ್ಲಿ ಸೋಮವಾರ ನಗರದ ಮಾಸ್ಟರ್ ಪ್ಲಾನ್ ಕುರಿತಂತೆ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ, ಒಂದು ತಿಂಗಳೊಳಗಾಗಿ ಎಲ್ಲ ಪ್ರಕ್ರಿಯೆ ಪೂರ್ಣ­ಗೊಳಿಸಬೇಕು. ಮಾಸ್ಟರ್ ಪ್ಲಾನ್ ಜಾರಿಯಾಗುವ ಮೊದಲ ಹಂತದ ರಸ್ತೆ ವಿಸ್ತರಣೆಗೆ ತೆರವು­ಗೊಳಿಸಬೇಕಾದ ಕಟ್ಟಡಗಳ ಹಾಗೂ ನಿವೇಶನಗಳ ಮೌಲ್ಯಮಾಪನ ವಿವರ­ವನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಿಯಮಾನುಸಾರ ಹಾಗೂ ಹೊಸ ಕಾಯ್ದೆಯನ್ವಯ ಕಟ್ಟಡಗಳಿಗೆ ಪರಿ­ಹಾರ ನೀಡಬೇಕಿದ್ದು, ಈ ಕುರಿತಂತೆ ಖಾಸಗಿ ಕಟ್ಟಡಗಳ ವಿವರ, ಮಾಲೀ­ಕತ್ವದ ವಿವರ, ಕಟ್ಟಡಗಳ ಮೌಲ್ಯ­ಮಾಪನ, ಆಸ್ತಿ ಹಾಗೂ ಕಟ್ಟಡವಾರು  ಪರಿಹಾರ ಮೊತ್ತ, ಕಟ್ಟಡಗಳ ಚೆಕ್‌­ಬಂದಿ ಕುರಿತಂತೆ ವಿವರವಾದ ಮಾಹಿ­ತಿಯನ್ನು ಎರಡು ದಿನಗಳೊಳ­ಗಾಗಿ ಮಹಾನಗರಪಾಲಿಕೆ ಅಧಿಕಾರಿ­ಗಳಿಗೆ ನೀಡು­ವಂತೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಿ­ದರು.

ಪ್ರತಿ ಕಟ್ಟಡದ ಮಾಲೀಕರಿಗೆ ರಸ್ತೆ ವಿಸ್ತರಣೆಗೆ ತೆರವುಗೊಳಿಸುವ ಕಟ್ಟಡದ ಅಳತೆ ಅಥವಾ ನಿವೇಶನದ ವಿವರವುಳ್ಳ ಮಾಹಿತಿಯನ್ನು ನಿಯಮಾನುಸಾರ ನೀಡ­ಬೇಕು. ಎಲ್ಲ ಪ್ರಕ್ರಿಯೆಗಳನ್ನು ಕಾನೂನು­­ಬದ್ಧವಾಗಿ ಪೂರ್ಣ­ಗೊಳಿಸ­ಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ರಸ್ತೆ ವಿಸ್ತರಣೆಯಿಂದ ಸ್ಥಳಾಂತರಿಸ­ಬೇಕಾದ ಸಾರ್ವಜನಿಕ ಸೌಕರ್ಯದ ಕುಡಿಯುವ ನೀರಿನ ಪೈಪ್‌ಲೈನ್, ವಿದ್ಯುತ್ ಸಂಪರ್ಕದ ವಿವರ, ಒಳ­ಚರಂಡಿ ಹಾಗೂ ಟೆಲಿಫೋನ್ ಮಾರ್ಗಗಳ ವಿವರ, ಸ್ಥಳಾಂತರಿಸ­ಬೇಕಾದ ವಿವರ, ಇದಕ್ಕೆ ವ್ಯಯಿಸ­ಬೇಕಾದ ವೆಚ್ಚ ಕುರಿತಂತೆ ಅಂದಾಜು ಪಟ್ಟಿಯನ್ನು ಎರಡು ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಿದರು.

ಮಾಸ್ಟರ್ ಪ್ಲಾನ್ ಜಾರಿಯಿಂದ ತೆರವುಗೊಳಿಸಬೇಕಾದ ಕಟ್ಟಡಗಳ ಜತೆಯಲ್ಲಿ ವಿಸ್ತರಣೆಗೊಂಡ ರಸ್ತೆಯನ್ನು ಪುನರ್ ನಿರ್ಮಿಸಲು ತ್ವರಿತವಾಗಿ ಟೆಂಡರ್ ಕರೆದು, ಕಾಮಗಾರಿ ಆರಂಭಿ­ಸುವ ಕುರಿತಂತೆ ಅಗತ್ಯ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಮೊದಲ ಹಂತದಲ್ಲಿ ಅಂಬೇಡ್ಕರ್ ವೃತ್ತದಿಂದ ಶಿವಾಜಿ ವೃತ್ತದವರೆಗೆ ರಸ್ತೆ ವಿಸ್ತರಣೆ ಮತ್ತು ನಿರ್ಮಾಣ ಕಾರ್ಯ ಕೈಗೊಳ್ಳಲಿದ್ದು, ಸಂಬಂಧಿಸಿದ ಕಟ್ಟಡ ಮತ್ತು ಆಸ್ತಿ ಮಾಲೀಕರ ಸಭೆಯನ್ನು ಒಂದು ವಾರದೊಳಗಾಗಿ ಕರೆಯುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ತಿಳಿಸಿದರು.

ಎರಡನೇ ಹಂತದಲ್ಲಿ ಶಿವಾಜಿ ವೃತ್ತದಿಂದ ಗೋದಾವರಿ ಹೋಟೆಲ್‌­ವರೆಗೆ, ಗಾಂಧಿ ವೃತ್ತದಿಂದ ಸಿದ್ದೇಶ್ವರ ದೇವಾಲಯ, ಬಸ್‌ ನಿಲ್ದಾಣದಿಂದ ನೌಬಾಗ್ ಮಾರ್ಗ, ರೈಲ್ವೆ ನಿಲ್ದಾಣ ಮಾರ್ಗದ ವಿಸ್ತರಣೆ ಕುರಿತಂತೆ ಆದ್ಯತೆ ಮೇರೆಗೆ ತೆರವುಗೊಳಿಸಬೇಕಾದ ಆಸ್ತಿ­ಗಳ ವಿವರ, ಮೌಲ್ಯಮಾಪನದ ವಿವರ ಸಲ್ಲಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಆದೇಶಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ರಾಮದಾಸ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾ­ದೇವ ಮುರಗಿ, ಭೂ ಮಾಪ­ನಾಧಿಕಾರಿ ಗೋಪಾಲ, ಪಿಡಬ್ಲ್ಯೂಡಿ, ನಗರಾಭಿವೃದ್ಧಿ ಪ್ರಾಧಿಕಾರ, ಈಶಾನ್ಯ ಸಾರಿಗೆ ಸಂಸ್ಥೆ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.