ADVERTISEMENT

ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬೃಹತ್‌ ಬೈಕ್‌ ರ್‌್ಯಾಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 5:08 IST
Last Updated 5 ಸೆಪ್ಟೆಂಬರ್ 2017, 5:08 IST

ವಿಜಯಪುರ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ, ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ, ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳೂರು ಚಲೋ ಬೈಕ್ ರ್‌್ಯಾಲಿ ನಡೆಸಲಾಗುತ್ತಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿ ಖಾನಾಪುರ ಹೇಳಿದರು.

ರಾಜ್ಯ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ ಮತೀಯ ಭಾವನೆಗಳನ್ನು ಕೆರಳಿಸುವಂತಹ, ಪ್ರೊತ್ಸಾಹಿಸುವಂತಹ ಕೆಲಸ ನಡೆಯುತ್ತಿದೆ. ಇದನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಬೃಹತ್‌ ಬೈಕ್‌ ರ್‌್ಯಾಲಿ ಆಯೋಜಿಸಲಾಗಿದೆ ಎಂದು ಇಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ 5 ರಂದು ಬೆಂಗಳೂರಿನಲ್ಲಿ ಬೈಕ್‌ ರ್‌್ಯಾಲಿಗೆ ಮಾಜಿ ಉಪ-ಮುಖ್ಯಮಂತ್ರಿ ಆರ್.ಅಶೋಕ, ಬಿಜೆಪಿ ಹಿರಿಯ ಮುಖಂಡ ಅರವಿಂದ ಲಿಂಬಾವಳಿ, ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಾಂಸದ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ರಾಜ್ಯದಾದ್ಯಂತ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು 5 ಸಾವಿರ ಬೈಕ್ ಮೇಲೆ ಮಂಗಳೂರು ತಲುಪಲಿದ್ದಾರೆ. 7ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ಜಿಲ್ಲೆಯ 300ಕ್ಕೂ ಅಧಿಕ ಯುವ ಮೋರ್ಚಾ ಕಾರ್ಯಕರ್ತರು  ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಪಿಎಫ್ಐ, ಎಸ್‌ಡಿಪಿಐ, ಕೆಎಫ್‌ಡಿ ಮೊದಲಾದ ಸಂಘಟನೆಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ದೂರಿದ ಅವರು, ಆರ್ಎಸ್ಎಸ್, ಹಿಂದೂ ಸಂಘಟನೆಗಳ ಪ್ರಮುಖರ ಕೊಲೆ ಆರೋಪ ಪಿಎಫ್ಐ ಸಂಘಟನೆಯ ಪದಾಧಿಕಾರಿಗಳ ಮೇಲಿದೆ. ದ್ವೇಷ ಭಾವನೆ ಮೂಡಿಸಿ, ಕೋಮು ಸಾಮರಸ್ಯ ಹಾಳುಮಾಡುವಲ್ಲಿ ತೊಡಗಿರುವ ಪಿಎಫ್ಐ ಸಂಘಟನೆ ಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಿರಾದಾರ, ಶ್ರೀಕಾಂತ ರಾಠೋಡ, ಕೃಷ್ಣಾ ಗುನ್ನಾಳ ಕರ, ಮಂಚಾಲೇಶ್ವರಿ ತೋನಶಾಳ, ಬಸವರಾಜ ಹೂಗಾರ, ಬಾಳಪ್ಪ ಗೂಗ್ಗಿಹಾಳ, ಶ್ರೀಕಾಂತ ರಾಠೋಡ, ಪ್ರಶಾಂತ ಅಗಸರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.