ADVERTISEMENT

ರಾಜ್ಯ ಸರ್ಕಾರ ಅಧಿಸೂಚನೆ: ಹರ್ಷ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 5:15 IST
Last Updated 8 ಸೆಪ್ಟೆಂಬರ್ 2017, 5:15 IST
ತಾಲ್ಲೂಕು ರಚನೆಗೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸುವಾಗ ಸಿದ್ಧಪಡಿಸಿದ್ದ ನಿಡಗುಂದಿ ತಾಲ್ಲೂಕಿನ ನಕ್ಷೆ
ತಾಲ್ಲೂಕು ರಚನೆಗೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸುವಾಗ ಸಿದ್ಧಪಡಿಸಿದ್ದ ನಿಡಗುಂದಿ ತಾಲ್ಲೂಕಿನ ನಕ್ಷೆ   

ನಿಡಗುಂದಿ: ನೂತನ ತಾಲ್ಲೂಕುಗಳ ಪಟ್ಟಿಯಲ್ಲಿ ನಿಡಗುಂದಿ ಹೆಸರನ್ನೂ ಉಲ್ಲೇಖಿಸಿರುವುದಕ್ಕೆ ಹಾಗೂ ಈ ಕುರಿತಂತೆ ಕಳೆದ 6ರಂದು ರಾಜ್ಯಪತ್ರ ಹೊರಡಿಸಿರುವುದಕ್ಕೆ ಪಟ್ಟಣದ ತಾಲ್ಲೂಕು ಹೋರಾಟ ಸಮಿತಿ ಹರ್ಷ ವ್ಯಕ್ತಪಡಿಸಿದೆ. ‘30 ವರ್ಷಗಳ ಹೋರಾಟಕ್ಕೆ ಈಗ ಫಲ ದೊರಕಿದೆ’ ಎಂದು ಮುಖಂಡರಾದ ಎಂ.ಕೆ. ಮಾಮನಿ, ಸಂಗಮೇಶ ಕೆಂಭಾವಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ ಸಂತಸ ವ್ಯಕ್ತಪಡಿಸಿದ್ದಾರೆ.

ಶೀಘ್ರ ಸ್ಥಳ ನಿಗದಿ: ‘ತಾಲ್ಲೂಕು ಕಚೇರಿ ತೆರೆಯಲು ಇನ್ನೂ ಸ್ಥಳ ನಿಗದಿ ಮಾಡಿಲ್ಲ, ಶೀಘ್ರವೇ ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯಲಿದೆ’ ಎಂದು ನಿಡಗುಂದಿಯ ವಿಶೇಷ ತಹಶೀಲ್ದಾರ್ ಎಂ.ಬಿ. ನಾಗಠಾಣ ಹೇಳಿದರು.

ಗಡಿ ಗೊಂದಲ: ನಿಡಗುಂದಿ ತಾಲ್ಲೂಕು ಪ್ರಸ್ತಾವ ಸಲ್ಲಿಸುವಾಗ ನಿಡಗುಂದಿ ಹೋಬಳಿ ವ್ಯಾಪ್ತಿಯ 32 ಹಾಗೂ ನಿಡಗುಂದಿಗೆ ಹತ್ತಿಕೊಂಡೇ ಇರುವ ಮುದ್ದೇಬಿಹಾಳ ತಾಲ್ಲೂಕಿನ 13 ಹಳ್ಳಿಗಳನ್ನು ಸೇರಿಸಿ ಹೊಸ ನಿಡಗುಂದಿ ತಾಲ್ಲೂಕು ರಚನೆಗೆ ಶಿಫಾರಸ್ಸು ಮಾಡಲಾಗಿತ್ತು.

ADVERTISEMENT

ಆದರೆ, ನಿಡಗುಂದಿ ಪಟ್ಟಣದಿಂದ 3 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿದ್ದ ಮುದ್ದೇಬಿಹಾಳ ತಾಲ್ಲೂಕಿನ 13 ಗ್ರಾಮಗಳು ನಿಡಗುಂದಿ ತಾಲ್ಲೂಕು ವ್ಯಾಪ್ತಿಯಿಂದ ಹೊರಗುಳಿ ಯಲಿವೆ ಎಂದು ನಿಡಗುಂದಿ ತಾಲ್ಲೂಕು ಹೋರಾಟ ಸಮಿತಿಯ ಸಂಗಣ್ಣ ಕೋತಿನ, ಈರಣ್ಣ ಮುರನಾಳ ಸೇರಿ ದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲ ಹಳ್ಳಿಗಳು ಪ್ರತಿಯೊಂದು ವ್ಯವಹಾರಕ್ಕೂ ನಿಡಗುಂದಿಯೊಂದಿಗೆ ಸಂಪರ್ಕ ಇಟ್ಟುಕೊಂಡಿವೆ. ಹೀಗಾಗಿ ಆ ಗ್ರಾಮಗಳನ್ನು ನಿಡಗುಂದಿ ತಾಲ್ಲೂಕು ವ್ಯಾಪ್ತಿಗೆ ಸೇರಿಸಬೇಕು ಎಂದರು.

ಹೋರಾಟ: ನಿಡಗುಂದಿಗೆ ಸಮೀಪವಿರುವ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳಿಗಳನ್ನು ನಿಡಗುಂದಿಗೆ ಸೇರಿಸಬೇಕು. ಇಲ್ಲದಿದ್ದರೆ, ಆಯಾ ಗ್ರಾಮಸ್ಥರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಶಿವಾನಂದ ಅವಟಿ, ಬಸವರಾಜ ಕುಂಬಾರ, ಶಿವಾನಂದ ಮುಚ್ಚಂಡಿ, ಪ್ರಹ್ಲಾದ ಪತ್ತಾರ, ಶೇಖರ ದೊಡಮನಿ ಆಗ್ರಹಿಸಿದ್ದಾರೆ.

* * 

ಉದ್ದೇಶಿತ ನಿಡಗುಂದಿ ತಾಲ್ಲೂಕು ವ್ಯಾಪ್ತಿಯ ಗಡಿ ನಿಗದಿ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ
ಎಂ.ಬಿ.ನಾಗಠಾಣ
ವಿಶೇಷ  ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.