ADVERTISEMENT

‘ವರದಕ್ಷಿಣೆ ಪಿಡುಗಿನಿಂದ ದೂರವಿರಿ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:03 IST
Last Updated 18 ಏಪ್ರಿಲ್ 2017, 6:03 IST

ವಿಜಯಪುರ: ಭಾವನಾತ್ಮಕ ಮಾನವೀಯ ಸಂಬಂಧಗಳನ್ನು ಬೆಸೆಯುವ ಮದುವೆಯನ್ನು, ಕೇವಲ ವ್ಯವಹಾರಿಕ ಕೊಡುಕೊಳ್ಳುವಿಕೆಯ ವ್ಯಾಪಾರಿ ದೃಷ್ಟಿಕೋನಕ್ಕೆ ಸೀಮಿತಗೊಳಿಸುವ ವಿಷ ವರ್ತುಲದ ಭಾಗವಾಗಬೇಡಿ ಎಂದು ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಪ್ರೊ.ಇಂದ್ರಾಣಿ ಕರುಣಾಸಾಗರ ಕಿವಿಮಾತು ಹೇಳಿದರು.

ಘಟಿಕೋತ್ಸವದಲ್ಲಿ  ಪ್ರಧಾನ ಭಾಷಣ ಮಾಡಿದ ಅವರು, ವರದಕ್ಷಿಣೆಯಂತಹ ಕೆಟ್ಟ ವ್ಯವಹಾರದಲ್ಲಿ ಬಲಿಯಾಗುವುದು ಮೊದಲು ಮಹಿಳೆಯ ಆತ್ಮಗೌರವ. ಈ ಕಾರಣಕ್ಕಾಗಿ ಯಾರೂ ಸಹ ಇಂತಹ ಕೆಟ್ಟ ವ್ಯವಹಾರದ ಭಾಗವಾಗಬಾರದು ಎಂದು ಸಲಹೆ ನೀಡಿದರು.ಕೆಲವೊಂದು ದಾಖಲೆಗಳ ಪ್ರಕಾರ ಪ್ರತಿ 29 ನಿಮಿಷಕ್ಕೆ ಒಮ್ಮೆ ಅತ್ಯಾಚಾರ ನಡೆದರೆ, 77 ನಿಮಿಷಕ್ಕೆ ವರದಕ್ಷಿಣೆಗೆ ಸಂಬಂಧಿಸಿದ ಕೊಲೆ ನಡೆಯುತ್ತದೆ.

ತಹ ಬಹುತೇಕ ಅಪರಾಧಗಳಲ್ಲಿ ಮಹಿಳೆಯೇ ಮಹಿಳೆಯ ವೈರಿಯಾಗಿ ನಡೆಯುವ ಸಂಗತಿಗಳು ಮೇಲಿಂದ ಮೇಲೆ ಘಟಿಸುತ್ತಿವೆ ಎಂದು ವಿಶ್ಲೇಷಿಸಿದರು. ಭಾರತದಲ್ಲಿ ಮಹಿಳೆಯರಿಗೆ ಸವಾಲು ಮತ್ತು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ನೂತನ ಪದವೀಧರರು ಚಿಂತನೆ ನಡೆಸಬೇಕು. ಮಹಿಳೆಯನ್ನು ಸುಶಿಕ್ಷಿತಳನ್ನಾಗಿ ಮಾಡಿದರೆ ಅದು ಸಮಾಜವನ್ನು ಶಿಕ್ಷಿತಗೊಳಿಸಿದಂತೆ. ಅಷ್ಟೇ ಅಲ್ಲದೇ ಮಾನವತ್ವ ಮತ್ತು ನಿರ್ದಿಷ್ಟವಾಗಿ ದೇಶವನ್ನು ಸಶಕ್ತಗೊಳಿಸಿದಂತೆ. ಅವಳು ತನ್ನ ಮಗುವಿಗೂ ಅದನ್ನೇ ಆದ್ಯತೆಯಾಗಿಸುತ್ತಾಳೆ. ಹೀಗೆ ಶಿಕ್ಷಣದಿಂದ ಆಗುವ ಬದಲಾವಣೆಯ ಅಲೆಗಳು ಸಮುದಾಯದ ಧನಾತ್ಮಕ ಬದಲಾವಣೆಗಳಿಗೆ ನಿಮಿತ್ತವಾಗುತ್ತವೆ ಎಂದರು.

ADVERTISEMENT

ಲಿಂಗ ಸಮಾನತೆಯನ್ನು ಪ್ರಜ್ಞಾಪೂರ್ವಕ ಸತತ ಪ್ರಯತ್ನದ ಮೂಲಕ ಅನುಷ್ಠಾನಕ್ಕೆ ತರಬೇಕಿದೆ. ಪ್ರಗತಿಪರ ಸಮಾಜ ರೂಪಿಸುವುದಕ್ಕೆ ಇದೊಂದು ರಹದಾರಿಯಾಗಿದೆ ಎಂದರು.ಅನನ್ಯ ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಗುರುತಿಸುವ ಹಾಗೂ ಗೌರವಿಸುವುದಕ್ಕಾಗಿ ಒಬ್ಬರು ಮತ್ತೊಬ್ಬರಿಗೆ ಪೂರಕವಾಗಿರಬೇಕು.  ಪರಸ್ಪರರು  ಹೊಣೆಯನ್ನು ನಿರ್ವಹಿಸುವುದಕ್ಕೆ ಅಗತ್ಯವಿರುವ ಕ್ರಿಯಾಶೀಲ ಸ್ವಾತಂತ್ರ್ಯದ ಅವಕಾಶವನ್ನು ಸಮಾನ ನೆಲೆಯಲ್ಲಿ ಕಲ್ಪಿಸುವಂತಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.