ADVERTISEMENT

ವಿದ್ಯುತ್ ಸ್ಪರ್ಶ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2016, 6:58 IST
Last Updated 20 ಏಪ್ರಿಲ್ 2016, 6:58 IST

ವಿಜಯಪುರ: ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸಿಂದಗಿ ತಾಲ್ಲೂಕಿನ ಹಂದಿಗನೂರಿನಲ್ಲಿ ಸೋಮವಾರ ಸಂಭವಿಸಿದೆ.

ಗ್ರಾಮದ ದ್ಯಾವಮ್ಮ ಚಿನ್ನಪ್ಪ ಸಂಗೋಗಿ (48) ಮೃತ. ಇವರು ಹೊಸದಾಗಿ ಕಟ್ಟಿಸುತ್ತಿರುವ ಮನೆಗೆ ಮನೆಯ ಮುಂದಿನ ಸರ್ಕಾರಿ ನಳಕ್ಕೆ ಅರ್ಧ ಎಚ್‌.ಪಿ. ಸಾಮರ್ಥ್ಯದ ಪಂಪಸೆಟ್‌ ಹಚ್ಚಿ ನೀರು ಬಳಸಿ ಕಟ್ಟಡಕ್ಕೆ ಹೊಡೆದ ನಂತರ ಎಂಜಿನ್‌ಗೆ ವಿದ್ಯುತ್‌ ಸಂಪರ್ಕಕ್ಕಾಗಿ ಅಳವಡಿಸಿದ ಸ್ವಿಚ್‌ ತೆಗೆಯುವ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೇವರ ಹಿಪ್ಪರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಬಿದ್ದು ಬಾಲಕ ಸಾವು 
ವಿಜಯಪುರ:
ಮುದ್ದೇಬಿಹಾಳ ತಾಲ್ಲೂಕಿನ ಹಡಲಗೇರಿ ಗ್ರಾಮದಲ್ಲಿ ಬಾಲಕನೊಬ್ಬ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಗ್ರಾಮದ ಬೀರಲಿಂಗೇಶ್ವರ ಷಣ್ಮುಖಪ್ಪ ಮೇಟಿ (10) ಎಂಬ ಬಾಲಕ ಮೃತಪಟ್ಟ ದುರ್ದೈವಿ.

ಗ್ರಾಮದ ಹತ್ತಿರದ ಬೊಮ್ಮಣ್ಣನ ಹಳ್ಳದ ಮಡುವಿನ ನೀರಿನಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಬಾಲಕ, ನೀರು ಕುಡಿದು ಗಂಭೀರ ಸ್ಥಿತಿಯಲ್ಲಿದ್ದಾಗ ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಅಂಗಡಿ ಕಳ್ಳತನ
ಸಿಂದಗಿ:
ಪಟ್ಟಣದ ಕಾಳಿಕಾನಗರದ ಗಾಯತ್ರಿ ಜ್ಯುವೆಲರ್ಸ್ ಅಂಗಡಿಯಲ್ಲಿ ಸೋಮವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಬಂಗಾರ ಮತ್ತು ಬೆಳ್ಳಿ ಕಳ್ಳತನ ನಡೆದಿದೆ. ಅರ್ಧ ಕೆ.ಜಿ. ಬಂಗಾರ, 2.50 ಕೆ.ಜಿ ಬೆಳ್ಳಿ ಆಭರಣಗಳು ಹಾಗೂ ₹ 15 ಸಾವಿರ ನಗದು ಕಳ್ಳತನವಾಗಿದೆ.

ಘಟನಾ ಸ್ಥಳಕ್ಕೆ ಶ್ವಾನದಳ ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಅಂಗಡಿ ಮಾಲೀಕ ವಿ.ಎಂ.ರಾಂಪೂರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಕಿ ಆಕಸ್ಮಿಕ: ಮನೆ ಭಸ್ಮ
ತಾಂಬಾ:
ಬೆಂಕಿ ಆಕಸ್ಮಿಕದಲ್ಲಿ ತೋಟದ ಮನೆಯೊಂದು ಸಂಪೂರ್ಣ ಭಸ್ಮಗೊಂಡ ಘಟನೆ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಮೆಲಪ್ಪ ಮಲಕಪ್ಪ ಗೊಂಗಿ ಅವರ ತೋಟದ ಮನೆ ಬೆಂಕಿಗೆ ಆಹುತಿಯಾಗಿದೆ.

ಕೊಳವೆಬಾವಿ ಕೊರೆಸುವ ಸಲುವಾಗಿ ಕೈಗಡವಾಗಿ ತಂದಿದ್ದ ₹ 1 ಲಕ್ಷ ನಗದು, 25 ಗ್ರಾಂ ಚಿನ್ನ, 4 ರೇಷ್ಮೆ ಸೀರೆಗಳು, ಒಂದು ಫ್ಯಾನ್‌ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳು ಬೆಂಕಿಗೆ ಆಹುತಿ ಯಾಗಿವೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.