ADVERTISEMENT

ವಿವಿಧ ಸೌಲಭ್ಯಕ್ಕೆ ಆಗ್ರಹ: ಪ್ರತಿಭಟನಾ ರ್‌್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 4:58 IST
Last Updated 21 ಜನವರಿ 2017, 4:58 IST
ವಿವಿಧ ಸೌಲಭ್ಯಕ್ಕೆ ಆಗ್ರಹ: ಪ್ರತಿಭಟನಾ ರ್‌್ಯಾಲಿ
ವಿವಿಧ ಸೌಲಭ್ಯಕ್ಕೆ ಆಗ್ರಹ: ಪ್ರತಿಭಟನಾ ರ್‌್ಯಾಲಿ   

ವಿಜಯಪುರ: ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ಹಾಗೂ ಅಂಗನವಾಡಿ ನೌಕರರು ಜಂಟಿಯಾಗಿ ಶುಕ್ರವಾರ ಪ್ರತಿಭಟನಾ ರ್‌್ಯಾಲಿ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ರ್‌್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸುನಂದಾ ನಾಯಕ ಮಾತನಾಡಿ ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ ಅನುದಾನ ಕಡಿತ ಮಾಡಿರುವುದು ಸರಿಯಲ್ಲ. ಇದರಿಂದ ಕೂಡಲೇ ಈ ಯೋಜನೆಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ನ್ಯಾಯಯುತವಾಗಿರುವ ಅಂಗನವಾಡಿ, ಅಕ್ಷರ ದಾಸೋಹ ಸಿಬ್ಬಂದಿಯ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

45ನೇ ಎಲ್ಐಸಿಯ ಶಿಫಾರಸಿನಂತೆ ಅಂಗನವಾಡಿ ಸಿಬ್ಬಂದಿಯನ್ನು ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕೊಡಬೇಕು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಪ್ರತ್ಯೇಕ ಸೇವ ನಿಯಮಾವಳಿ ರೂಪಿಸಬೇಕು. ಸೇವಾ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಬೇಕು ಎಂದರು.
ರೈತ- ಕಾರ್ಮಿಕ ಮುಖಂಡ ಭೀಮಶಿ ಕಲಾದಗಿ, ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳ, ಅಕ್ಷರ ದಾಸೋಹ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಮಂಗಲಾ ಶೆಟ್ಟಿ ಮಾತನಾಡಿದರು.

ರಾಜು ಜಾಧವ, ಸುವರ್ಣಾಹಲಗಣಿ, ಜಯಶ್ರೀ ಪೂಜಾರಿ, ಎಸ್‌.ಎಂ. ಜಮಾದಾರ, ರಾಜೇಶ್ವರಿ ಸಂಕದ, ಶೈಲಾ ಕಟ್ಟಿ, ಅಕ್ಷರ ದಾಸೋಹ ಕಾರ್ಯ ಕರ್ತೆಯರಾದ ಸುರೇಖಾ ಬಿ. ವಾಗಮೋಡೆ, ಮೀನಾಕ್ಷಿ ಸಿಂಗೆ, ರಾಜೇಶ್ವರಿ ಬಗಲಿ, ಸುಮಂಗಲ ಹಿರೇಮಠ, ಅಬೀದಾ ಇನಾಮದಾರ, ಸಾವಿತ್ರಿ ಪಾಟೀಲ, ಶ್ರೀದೇವಿ ಚಿಂಚೊಳ್ಳಿ, ಗುರುಬಾಯಿ ಮಠಪತಿ, ಅಂಬು ಜಾಧವ, ಲಕ್ಷ್ಮೀ ಶಿವಣಗಿ, ಸುವರ್ಣಾ ಬಂದಪಟ್ಟಿ, ಮಂಜುಳಾ ಶಿಂಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕರ್ತವ್ಯಕ್ಕೆ ಗೈರು
ಸಿಂದಗಿ: ಕೇಂದ್ರ ಸರ್ಕಾರದ ನೌಕರರ ವಿರೋಧಿ ಧೋರಣೆ ಖಂಡಿಸಿ ಅಂಗನವಾಡಿ, ಬಿಸಿಊಟ ನೌಕರರು ಕರ್ತವ್ಯಕ್ಕೆ ಗೈರು ಉಳಿಯುವ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ ರಸ್ತೆ ಮುಖಾಂತರ ಸಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಲಯದ ಎದುರು ಕೆಲ ಕಾಲ ಧರಣಿ ನಡೆಸಿದರು. ನಂತರ ತಾಲ್ಲೂಕು ಪಂಚಾಯ್ತಿ ಕಾರ್ಯಲಯ ಎದುರು, ಕೊನೆಗೆ ತಹಶೀಲ್ದಾರ್ ಕಾರ್ಯಾಲಯದ ಎದುರು ಧರಣಿ ನಡೆಸಿದರು.

ನಂತರ ನಡೆದ ಪ್ರತಿಭನಾ ಸಭೆಯಲ್ಲಿ ಸರಸ್ವತಿ ಮಠ, ಅಣ್ಣಾರಾಯ ಈಳಗೇರ ಮಾತನಾಡಿ, ಕನಿಷ್ಠ ವೇತನ ಮತ್ತು ನಿವೃತ್ತಿ ಸೌಲಭ್ಯ ನೀಡಬೇಕು, ಬಿಸಿಯೂಟ ಖಾಸಗಿ ಸಂಸ್ಥೆಗಳಿಗೆ ಕೊಡುವುದನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.

ಪ್ರತಿಭಟನಕಾರರು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಾಲ್ಊಉ ಪಂಚಾಯ್ತಿ ಇಓ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಎಸ್.ಎಸ್. ನಾಲ್ಕಮಾನ, ಬಿಸಿಊಟ ನೌಕರರ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷೆ ಬಿ.ಎ. ಇನಾಮದಾರ ಮಾತನಾಡಿದರು.

ರೇಣುಕಾ ಸುಣಗಾರ, ಸೈನಾಜ್ ಮುಲ್ಲಾ, ಸುಭದ್ರಾ ತಿಳಗೂಳ, ಕೆ.ಜಿ. ನಾಗಾವಿ, ಎಸ್.ಎಸ್. ಬಿರಾದಾರ, ರೇಷ್ಮಾ ಜಮಾದಾರ, ಕೆ.ಎಂ.ಕೇಸರಿ, ಅಯ್ಯಮ್ಮ ಸಿಂದಗಿ, ಮೀನಾಕ್ಷಿ ಸುಲ್ಪಿ, ಗಜಾನನ ತಿವಾರಿ, ಬಸೀರ ತಾಂಬೆ, ಶರಣಪ್ಪ ಹರಿಜನ, ಸಾಯಬಣ್ಣ ದೊಡಮನಿ, ಸಾಹೇಬ್ ಪಟೇಲ ನೇತೃತ್ವ ವಹಿಸಿದ್ದರು.

‘ಅನುದಾನ ನೀಡಲಿ’
ಇಂಡಿ: ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿ ಆದೇಶ ಹೊರಡಿಸಿದೆ. ಅದನ್ನು ವಾಪಸ್ ಪಡೆದು ಅನುದಾನ ಬಿಡುಗಡೆ ಮಾಡಬೇಕು. ಅಂಗನವಾಡಿ ಮತ್ತು ಬಿಸಿಯೂಟದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಲ್ಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಮತ್ತು ಬಿಸಿಯೂಟದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಾದ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ, ಗ್ರಾಮೀಣಾಭಿವೃದ್ಧಿ, ಕೃಷಿ ಕಾರ್ಮಿಕರಿಗೆ ಇದ್ದ ಒಟ್ಟು 73 ಯೋಜನೆಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿ, ಕೇವಲ 33 ಯೋಜನೆಗಳನ್ನು ಇಟ್ಟಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಡ ಕೂಲಿ ಕಾರ್ಮಿಕರಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇದ್ದ ಯೋಜನೆಗಳನ್ನು 2015–2016 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇವುಗಳಿಗೆ ಬರುತ್ತಿದ್ದ ₹ 3 ಲಕ್ಷ ಕೋಟಿ ಅನುದಾನ ಕಡಿತಗೊಳಿಸಿದೆ. ಇದರಿಂದ ಬಡವರ ಯೋಜನೆಗಳು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಅಂಗನವಾಡಿ ಸಂಘಟನೆಯ ಅಧ್ಯಕ್ಷೆ ಭಾರತಿ ವಾಲಿ, ಕಾರ್ಯದರ್ಶಿ ದಾನಮ್ಮ ಗುಗರಿ, ಪ್ರಭಾವತಿ ಬಿರಾದಾರ, ಮೈಬೂಬಿ ಬೇನೂರ, ಅನುಸೂಯಾ ಕಂಬಾರ, ಭಾಗೀರಥಿ ತಳವಾರ, ಎಸ್.ಬಿ.ಸ್ವಾಮಿ, ಇಂದ್ರಾ ಅಂಬಾರೆ, ರಾಜಶ್ರೀ ಪೂಜಾರಿ, ಗುರುದೇವಿ ಕಟ್ಟಿಮನಿ, ಸುನಂದಾ ಚವ್ಹಾಣ, ಸಂತೋಷಿ ಹರಿಜನ, ಸಿದ್ದಮ್ಮ ಬಿರಾದಾರ, ಶಶಿಕಲಾ ಅತ್ತಾರ ವಹಿಸಿಕೊಂಡಿದ್ದರು. ತಹಶೀಲ್ದಾರ್ ಬಿ.ಜಿ.ಅಗರಖೇಡ ಅವರು ಮನವಿ ಸ್ವೀಕರಿಸಿದರು.

ಮೆರವಣಿಗೆ
ಮುದ್ದೇಬಿಹಾಳ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿ.ಆಯ್.ಟಿ.ಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಂಘ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು  ಪ್ರತಿಭಟನೆ ನಡೆಸಿದರು.

ನಂತರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಇಓ  ಚಂದ್ರಕಾಂತ ಕುಂಬಾರಗೆ ಮನವಿ ಸಲ್ಲಿಸಿದರು.

ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷೆ ಸುವರ್ಣಾ ರಾಠೋಡ ಮಾತನಾಡಿ, ತಾಲ್ಲೂಕಿನಲ್ಲಿ 850 ಜನ ಅಕ್ಷರ ದಾಸೋಹದ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ, ನೌಕರರಿಗೆ ಕನಿಷ್ಠ ₹ 5000 ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ನೀಡುವ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದು ಎಂದು ಮನವಿ ಮಾಡಲಾಗಿದೆ. ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಅನಿತಾ ಸಜ್ಜನ ಮನವಿ ಸ್ವೀಕರಿಸುವಾಗ ಉಪಸ್ಥಿತರಿದ್ದರು. ಲಕ್ಷ್ಮೀ ಲಮಾಣಿ, ಲಕ್ಷ್ಮೀಬಾಯಿ ದೊಡ್ಮನಿ, ಶೈಲಾ ಹಿರೇಮಠ, ಶೋಭಾ ಯರಝರಿ, ಪಾತೀಮಾ ನದಾಫ್, ರೇಷ್ಮಾ ಘಾಟಿ, ರಾಜೇಶ್ವರಿ ಚಳ್ಳಗಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.