ADVERTISEMENT

ಶಂಕರಲಿಂಗ ಮಹಾಶಿವಯೋಗಿಗಳ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 6:49 IST
Last Updated 18 ಏಪ್ರಿಲ್ 2014, 6:49 IST

ಇಂಡಿ: ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣದ ಕಮರಿಮಠದಲ್ಲಿ ಸದ್ಗುರು ಸಿದ್ಧಲಿಂಗ ಮಹಾರಾಜರ ಗುರು ಶಂಕರಲಿಂಗ ಮಹಾಶಿವಯೋಗಿಗಳ ಮಹಾ ರಥೋತ್ಸವ ಅಂಗವಾಗಿ ಇದೇ 18ರಿಂದ 22ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

18ರಂದು ದನಗಳ ಜಾತ್ರೆ ಇದ್ದು, 19ರಂದು ಬೆಳಿಗ್ಗೆ 8ಕ್ಕೆ ಜರುಗುವ ಷಟಸ್ಥಲ ಧ್ವಜಾರೋಹಣವನ್ನು ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧಿಪತಿ ವೃಷಭಲಿಂಗ ಮಹಾ ಶಿವಯೋಗಿಗಳು ನೆರವೇರಿಸಲಿದ್ದಾರೆ. ಸಂಜೆ 8ಕ್ಕೆ ಬಂಥನಾಳದ ಕರ್ತೃ ವೃಷಭಲಿಂಗ ಮಹಾಶಿವಯೋಗಿಗಳ ಮೂರ್ತಿಯ ಪಲ್ಲಕ್ಕಿ ಪುರಪ್ರವೇಶ ಉತ್ಸವ ಜರುಗಲಿದೆ. ರಾತ್ರಿ 9ಕ್ಕೆ ಅಗ್ನಿ ಪ್ರಜ್ವಲನ,10ಕ್ಕೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ನಂತರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೋತ್ಬಾಳ ಗ್ರಾಮದ ಕಲಾ ತಂಡದ ವರಿಂದ ಜಾನಪದ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.

20ರಂದು ಬೆಳಿಗ್ಗೆ 11.30ಕ್ಕೆ ಬಂಥನಾಳದ ಪೂಜ್ಯ ವೃಷಭಲಿಂಗ ಮಹಾ ಶಿವಯೋಗಿಗಳ ಅಡ್ಡ ಪಲ್ಲಕ್ಕಿ ಉತ್ಸವ, ಅಗ್ನಿ ಶಮನ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ 5ಕ್ಕೆ ಬಂಥನಾಳದ ‘ಲಿಂಗೈಕ್ಯ ಶ್ರೀ ಶಂಕರಲಿಂಗ ಶಿವಯೋಗಿಗಳ ಮಹಾರಥೋತ್ಸವ’ ವಿಜ್ರಂಭಣೆಯಿಂದ ನೆರವೇರಲಿದೆ. ರಾತ್ರಿ 9.30ಕ್ಕೆ ಲಚ್ಯಾಣದ ಸಿದ್ಧಲಿಂಗೇಶ್ವರ ನಾಟ್ಯ ಸಂಘದವರಿಂದ ‘ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು’ ಅರ್ಥಾತ್ ‘ಸೇಡಿಗಾಗಿ ಸಿಡಿದೆದ್ದ ಸಿಂಹ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

21ರಂದು ಬೆಳಿಗ್ಗೆ 10.21ಕ್ಕೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ. ಬಂಥನಾಳ ಹಾಗೂ ಲಚ್ಯಾಣ ಮಠದ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಹಳಿಂಗಳಿಯ ಪೂಜ್ಯ ಶಿವಾನಂದ ಸ್ವಾಮೀಜಿ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ದೇವರ ಹಿಪ್ಪರಗಿಯ ಪರದೇಶಿ ಮಠದ ಶ್ರೀ ರೇಣುಕ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಕೊಕಟನೂರದ ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯರು, ಜಕನೂರು ಕುಚನೂರದ ಕಮರಿಮಠದ ಶ್ರೀ ಸಿದ್ಧಲಿಂಗ ದೇವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಸನ್ಮಾನಿತರಾಗಿ ಇಂಡಿ ಪಟ್ಟಣದ ಪೊಲೀಸ್ ಠಾಣೆಯ ಡಿ.ಎಸ್.ಪಿ. ಡಾ. ಶಿವಕುಮಾರ ಗುಣಾರೆ, ಡಿ.ಆರ್.ಎ. ಪ್ರಸಾದ ಹಾಗೂ ಬಳ್ಳಾರಿಯ ಲಕ್ಷ್ಮಿದೇವಿ ಹಾಗೂ ಚಂದ್ರಶೇಖರ ಉಪ್ಪಾರ ದಂಪತಿಗಳು ಭಾಗವಹಿಸಲಿದ್ದಾರೆ. ನಂತರ ನಾಡಿನ ನಾನಾ ಭಾಗದ ಪೈಲ್ವಾನರಿಂದ ಪ್ರಸಿದ್ಧ ಜಂಗೀ ನಿಕಾಲಿ ಕುಸ್ತಿಗಳು ಜರುಗಲಿವೆ.

22ರಂದು ಬೆಳಿಗ್ಗೆ 10ಕ್ಕೆ ಸದೃಢ ದನಗಳಿಗೆ ಪ್ರಶಸ್ತಿ ಪತ್ರ ವಿತರಿಸ ಲಾಗುವುದು. ಬಂಥನಾಳ ಹಾಗೂ ಲಚ್ಯಾಣ ಮಠದ ಪೂಜ್ಯ ವೃಷಭಲಿಂಗ ಮಹಾಶಿವಯೋಗಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಉತ್ಸವದ ಕಾಲಕ್ಕೆ ನಿತ್ಯ ಅನ್ನ ಪ್ರಸಾದ ವ್ಯವಸ್ಥೆ, ಭಜನೆ, ಕೀರ್ತನೆ, ಗೀಗೀ ಪದಗಳು, ಡೊಳ್ಳಿನ ಪದಗಳು ಹಾಗೂ ವಿವಿಧ ಕಲಾ ತಂಡದವರಿಂದ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಸಮಿತಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.