ADVERTISEMENT

ಶತಮಾನ ಗತಿಸಿದರೂ ಬರಿದಾಗದ ‘ಬಾವಡಿ’

ಆದಿಲ್‌ಶಾಹಿ ಅರಸರು ತಮ್ಮ ಪ್ರೀತಿ ಪಾತ್ರರ ನೆನಪಿಗೋಸ್ಕರ ನಿರ್ಮಿಸಿರುವ ಅಮೂಲ್ಯ ರತ್ನಗಳು

ಬಸವರಾಜ ಸಂಪಳ್ಳಿ
Published 22 ಮಾರ್ಚ್ 2017, 7:49 IST
Last Updated 22 ಮಾರ್ಚ್ 2017, 7:49 IST
ವಿಜಯಪುರದಲ್ಲಿ ಆದಿಲ್‌ಶಾಹಿ ಅರಸರು ಸುಮಾರು 15ನೇ ಶತಮಾನದಲ್ಲಿ ನಿರ್ಮಿಸಿದ್ದರು ಎನ್ನಲಾದ ಐತಿಹಾಸಿಕ ತಾಜ್‌ ಬಾವಡಿ.- ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಆದಿಲ್‌ಶಾಹಿ ಅರಸರು ಸುಮಾರು 15ನೇ ಶತಮಾನದಲ್ಲಿ ನಿರ್ಮಿಸಿದ್ದರು ಎನ್ನಲಾದ ಐತಿಹಾಸಿಕ ತಾಜ್‌ ಬಾವಡಿ.- ಪ್ರಜಾವಾಣಿ ಚಿತ್ರ   

ವಿಜಯಪುರ: ನಿನ್ನೆಮೊನ್ನೆ ಕೊರೆಸಿದ ಕೊಳವೆಬಾವಿಗಳು, ತೋಡಿದ ಬಾವಿ­ಗಳು, ಕಟ್ಟಿದ ಬೃಹತ್‌ ಅಣೆಕಟ್ಟೆಗಳೇ ಬತ್ತಿ ಬರಿದಾಗುತ್ತಿರುವ ಕಾಲದಲ್ಲಿ, ಇಂದಿನ ಬರಗಾಲದಲ್ಲೂ, ಆರೇಳು ಶತಮಾನಗಳ ಹಿಂದೆ ಆದಿಲ್‌ಶಾಹಿ ಅರಸರು ವಿಜಯ­ಪುರ­ದಲ್ಲಿ ನಿರ್ಮಿಸಿರುವ ಹತ್ತಾರು ಬಾವ­ಡಿ­ಗಳು ನೀರು ತುಂಬಿ ನಳನಳಿಸುತ್ತಿರು­ವುದು ಐತಿಹಾಸಿಕ ಸೋಜಿಗವೇ ಸರಿ.

ಆದಿಲ್‌ಶಾಹಿ ಅರಸರ ವೈಜ್ಞಾನಿಕ ದೃಷ್ಟಿಕೋನಕ್ಕೆ ‘ಬಾವಡಿ’ ಎಂಬ ಜಲ ಸಂಪನ್ಮೂಲಗಳು ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಎದುರಿನಿಂದ ನೋಡಲು ಅರಮನೆಯಂತೆ ಕಾಣುವ ಬಾವಡಿಗಳ ಸುಂದರ ಕಮಾನುಗಳು, ಇಸ್ಲಾಮಿಕ್‌  ಶೈಲಿಯ ವಾಸ್ತುಶಿಲ್ಪದ ಪ್ರತಿಕೃತಿಗಳಾಗಿವೆ ಎಂಬುದು ಇತಿಹಾಸಕಾರರ ವಿಶೇಷಣೆ.

ಬಾವಡಿಗಳಿಗೆ ಪ್ರವೇಶಿಸಲು ನಾಲ್ಕು ಕಡೆಯೂ ಮೆಟ್ಟಿಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ನೀರು ಕಲುಷಿತ­ವಾಗದಂತೆ ತಡೆಯುವ ಉದ್ದೇಶದಿಂದ ಸುತ್ತಲೂ ಎತ್ತರದ ಗೋಡೆಯನ್ನು ಆಕರ್ಷಕವಾಗಿ ಕಟ್ಟಲಾಗಿದೆ.

ವಿಜಯಪುರದ ಸುತ್ತಲಿನ ವಿಸ್ತಾರವಾದ ಪ್ರದೇಶದಲ್ಲಿ ಎಲ್ಲಿಯೇ ಮಳೆಯಾದರೂ ನೀರು ತನ್ನಿಂದ ತಾನೇ ಸರಾಗ­ವಾಗಿ ಹರಿದು ಬರುವಂತೆ ನವನವೀನ ತಾಂತ್ರಿಕತೆಯನ್ನು ಅನುಸರಿಸಿ ಬಾವಡಿಗಳನ್ನು ನಿರ್ಮಿಸಲಾಗಿದೆ. ಅಂತರ್ಜಲ ವೃದ್ಧಿಗೆ ಈ ಬಾವಡಿಗಳು ನಿತ್ಯವೂ ಕೊಡುಗೆ ನೀಡುತ್ತಿವೆ.

15ರಿಂದ 16ನೇ ಶತಮಾನದಲ್ಲಿ ಏಷ್ಯಾದ ಅತಿದೊಡ್ಡ ನಗರ ಎಂಬ ಖ್ಯಾತಿ ಗಳಿಸಿದ್ದ ವಿಜಯಪುರದಲ್ಲಿ ಸುಮಾರು ಮೂರು ಲಕ್ಷ ಜನಸಂಖ್ಯೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಆದಿಲ್‌ಶಾಹಿ ಅರಸರು ಕಲ್ಪಿಸಿದ್ದರು. ಅವುಗಳನ್ನು ಗುಮ್ಮಟನಗರದಲ್ಲಿ ಈಗಲೂ ಕಾಣಬಹು­ದಾಗಿದೆ. ವಿಶ್ವದ ಯಾವುದೇ ನಗರದಲ್ಲೂ ಇಷ್ಟು ಸುವ್ಯವಸ್ಥಿತ ನೀರಾವರಿ ವ್ಯವಸ್ಥೆ ಅಂದಿನ ಕಾಲಕ್ಕೆ ಇರಲಿಲ್ಲವೆನೋ ಎಂಬ ಅಚ್ಚರಿ ಮೂಡುತ್ತದೆ.

ತಾಜ್‌ಬಾವಡಿ, ಚಾಂದ್‌ ಬಾವಡಿ, ಇಬ್ರಾಹಿಂಪುರ ಬಾವಡಿ, ಲಂಗರ್‌ ಬಾವಡಿ, ಅಜಗರ್‌ ಬಾವಡಿ, ಮುಖಾರಿ ಮಸ್ಜಿದ್‌ ಬಾವಡಿ, ಮಾಸ್‌ ಬಾವಡಿ, ದೌಲತ್‌ಕೋಟಿ ಬಾವಡಿ, ಬಸ್ರಿ ಬಾವಡಿ, ನಗರ್‌ ಬಾವಡಿ, ಸಂದಲ್‌ ಬಾವಡಿ, ಸೋನಾರ್‌ ಬಾವಡಿ...

ಹೀಗೆ ಸುಮಾರು 30ಕ್ಕೂ ಅಧಿಕ ಬಾವಡಿಗಳನ್ನು ಆದಿಲ್‌ಶಾಹಿ ಅರಸರು ನಿರ್ಮಿಸುವ ಮೂಲಕ ಇಡೀ ನಗರದ ಜನತೆ ನೀರಿಗಾಗಿ ಎಂದಿಗೂ ಪರಿತಪಿಸದಂತೆ ‘ಜಲಾಡಳಿತ’ ನಡೆಸಿದ್ದರು.

ವಿಜಯಪುರದ ಅತ್ಯಂತ ಪುರಾತನ­ವಾದ ಬಾವಡಿ ಅಂದರೆ ‘ಚಾಂದ್‌ ಬಾವಡಿ’. 1549ರಲ್ಲಿ ಅಲಿ ಆದಿಲ್‌ ಷಾ ತನ್ನ ರಾಣಿ ಚಾಂದ್‌ಬೀಬಿಯ ಗೌರವಾರ್ಥ ಚಾಂದ್‌ ಬಾವಡಿಯನ್ನು ಉಪ್ಪಲಿ ಬುರ್ಜ್‌ ಬಳಿ ನಿರ್ಮಿಸಿದ್ದ.

ಎರಡನೇ ಇಬ್ರಾಹಿಂ ಆದಿಲ್‌ ಷಾ ತನ್ನ ಪತ್ನಿ ತಾಜ್‌ ಸುಲ್ತಾಳ ಹೆಸರಿನಲ್ಲಿ 1690ರಲ್ಲಿ ನಗರದ ಕೇಂದ್ರ ಸ್ಥಳದಲ್ಲಿ ‘ತಾಜ್‌ ಬಾವಡಿ’ಯನ್ನು ನಿರ್ಮಿಸಿದ್ದ ಎಂಬುದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ.

ಅತ್ತ ಬಾವಿಯೂ ಅಲ್ಲದ, ಇತ್ತ ಕೊಳವೂ ಅಲ್ಲದ, ಕೆರೆಯೂ ಅಲ್ಲದ ಒಂದು ರೀತಿ ಕಲ್ಯಾಣಿಯನ್ನು ಹೋಲುವ ಚೌಕಾಕಾರದ ಬಾವಡಿಗಳು ಕೇವಲ ನೀರಿನ ಮೂಲವಾಗಿರಲಿಲ್ಲ. ಆದಿಲ್‌ಶಾಹಿ ಅರಸರು ತಮ್ಮ ಪ್ರೀತಿ ಪಾತ್ರರ ನೆನಪಿಗೋಸ್ಕರ ಕಷ್ಟಪಟ್ಟು ನಿರ್ಮಿಸಿರುವ ಅಮೂಲ್ಯ ರತ್ನಗಳಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಾವಡಿಗಳು ವಿರೂಪಗೊಳ್ಳತೊಡಗಿವೆ. ಅದು ಪ್ರಕೃತಿಯಿಂದಾಗಿ ಅಲ್ಲ. ಇಲ್ಲಿನ ನಿವಾಸಿಗಳಿಂದಾಗಿ ಎಂಬುದು ವಿಷಾದದ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT