ADVERTISEMENT

ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 10:07 IST
Last Updated 15 ಸೆಪ್ಟೆಂಬರ್ 2017, 10:07 IST
ವಿಜಯಪುರ ಅಮಾನಿಕೆರೆಯಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಜಾಲಿ ಮರಗಳು
ವಿಜಯಪುರ ಅಮಾನಿಕೆರೆಯಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಜಾಲಿ ಮರಗಳು   

ವಿಜಯಪುರ: ಬಯಲು ಸೀಮೆ ಭಾಗಗಳ ರೈತರು, ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಾಲ್ಕು ದಶಕಗಳಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟದ ಫಲವಾಗಿ ಸರ್ಕಾರ, ಎತ್ತಿನಹೊಳೆ ಯೋಜನೆಗೆ ₹ 13 ಸಾವಿರ ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಯನ್ನು ಆರಂಭಿಸಿದೆ.

ಈ ಕಾಮಗಾರಿಯಿಂದ ಬಯಲು ಸೀಮೆ ಭಾಗದ ಜನರ ನಿರೀಕ್ಷೆಗೆ ತಕ್ಕಷ್ಟು ನೀರು ಬರುವುದಿಲ್ಲ, ಈ ಯೋಜನೆ ಅವೈಜ್ಞಾನಿಕವಾಗಿದೆ ಎಂದು ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲಹಂಕ ವ್ಯಾಪ್ತಿಯ 12 ಕೆರೆ, ದೇವನಹಳ್ಳಿ 9, ಚಿಕ್ಕಬಳ್ಳಾಪುರ ತಾಲ್ಲೂಕು 24 ಕೆರೆ, ಶಿಡ್ಲಘಟ್ಟ ತಾಲ್ಲೂಕು 9, ಗೌರಿಬಿದನೂರು ತಾಲ್ಲೂಕು 8 ಕೆರೆ, ಗುಡಿಬಂಡೆ ತಾಲ್ಲೂಕು 3 ಕೆರೆಗಳು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿವೆ, ಬಹುತೇಕ ಎಲ್ಲಾ ಕೆರೆಗಳಲ್ಲಿ ಅಂತರ್ಜಲದ ಮಟ್ಟವನ್ನು ತೀವ್ರಗತಿಯಲ್ಲಿ ಕಡಿಮೆ ಮಾಡುವಂತಹ ಜಾಲಿಮರಗಳು ದಟ್ಟವಾಗಿ ಬೆಳೆದು ನಿಂತಿದ್ದರೂ, ಸಣ್ಣ ನೀರಾವರಿ ಇಲಾಖೆ ಗಮನ ಹರಿಸಿಲ್ಲ.

ADVERTISEMENT

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿಯೂ ತೆರವುಗೊಳಿಸಿ ಅಭಿವೃದ್ಧಿ ಪಡಿಸುವ ಕಾರ್ಯವಾಗಿಲ್ಲವೆಂದು ರೈತ ಮುಖಂಡ ಶಿವಣ್ಣ ಆರೋಪಿಸಿದ್ದಾರೆ.

ಕೆರೆಗಳಲ್ಲಿ ಜಾಲಿ ಮರಗಳು ಬೆಳೆದಿದ್ದು, ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿದ ಕೆರೆಗಳಲ್ಲಿ ಜಾಲಿ ಮರಗಳನ್ನು ತೆರವುಗೊಳಿಸಬೇಕು. ಸರ್ಕಾರದಿಂದ ಕೆರೆಗಳ ಅಭಿವೃದ್ಧಿಗಾಗಿ ಬರುವ ಹಣವನ್ನು ಗ್ರಾಮ ಪಂಚಾಯಿತಿಗಳ ಖಾತೆಗೆ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಈ ಯೋಜನೆ ಇನ್ನೂ ತ್ವರಿತ­ವಾಗಿ ಆಗಬೇಕು. ನೀರು ತುಂಬಿಸುವ ಮುನ್ನ ಸಮರೋಪಾದಿ ಕಾಮಗಾರಿ ನಡೆಸಿ ಕೆರೆಯಲ್ಲಿನ ಹೂಳು ತೆಗೆಯಬೇಕು, ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳ ಹೂಳು ತೆಗೆಯುವುದರಿಂದ ಮತ್ತು ನೀರು ಉಣಿಸುವ ಕಾಲುವೆಗಳನ್ನು ನಿರ್ಮಿಸುವುದರಿಂದ ಕೆರೆಗಳಿಗೆ ಬೇಕಾದ ಪ್ರಮಾಣದಲ್ಲಿ ನೀರು ಬಂದು ಸೇರುತ್ತದೆ. ಇದರಿಂದ ಕೆರೆಗಳಲ್ಲಿ ಸದಾಕಾಲ ನೀರು ಶೇಖರಣೆಯಾಗಿ ಗ್ರಾಮಿಣ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸುತ್ತದೆ ಎಂದು ರೈತ ಮುಖಂಡ ಮುನೀಂದ್ರ ಹೇಳಿದರು.

ಕೆರೆ ಸಂಜೀವಿನಿ ಯೋಜನೆಯಡಿ ಈ ವರ್ಷದಲ್ಲಿ ಮೂರು ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದೊಂದು ಕೆರೆಗೆ ತಲಾ ₹5 ಲಕ್ಷದಂತೆ ₹15 ಲಕ್ಷ ಬಿಡುಗಡೆಯಾಗಿದೆ, ಕೆರೆಗಳಲ್ಲಿ ಹೂಳು ತೆಗೆಯಲು ಈ ಅನುದಾನ ಬಳಕೆ ಮಾಡುತ್ತೇವೆ. ಜೆಸಿಬಿಗಳ ಮೂಲಕ ಕೆಲಸ ಮಾಡಬೇಕಾಗಿರುವುದರಿಂದ ಗಂಟೆಯ ಲೆಕ್ಕಾಚಾರದಲ್ಲಿ ಹಣ ಪಾವತಿ ಮಾಡುತ್ತೇವೆ. ತಾಲ್ಲೂಕಿನ ಗುಡುನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ಪೂರ್ಣಗೊಂಡಿದೆ. ಕನ್ನಮಂಗಲ ಕೆರೆಯಲ್ಲಿ ಕಾಮಗಾರಿ ಪ್ರಾರಂಭವಾಗಿಲ್ಲ, ಉಗನವಾಡಿ ಕೆರೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಫಾಲಕ ಎಂಜಿನಿಯರ್‌ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.