ADVERTISEMENT

‘ಸಂಸ್ಕಾರವಿಲ್ಲದ ಜೀವನ ಶೈಲಿಯಿಂದ ಅನಾಚಾರ’

ದಿ.ಮುರುಗೆಪ್ಪಣ್ಣ ಸುಗಂಧಿ, ದಿ.ಬಾಬುರಾವ ಹುಜರೆ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 8:03 IST
Last Updated 27 ಮಾರ್ಚ್ 2017, 8:03 IST
ವಿಜಯಪುರ: ಪ್ರಸ್ತುತ ನಡೆಯುತ್ತಿರುವ ಅನಾಚಾರಗಳಿಗೆ ಸಂಸ್ಕಾರ ಇಲ್ಲದ ಜೀವನ ಶೈಲಿಯೇ ಕಾರಣವಾಗಿದೆ ಎಂದು ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಅಭಿಪ್ರಾಯಪಟ್ಟರು.
 
ನಗರದ ಮಾರ್ಗದರ್ಶಿ ಕೆರಿಯರ್ ಅಕಾಡೆಮಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಮುರುಗೆಪ್ಪಣ್ಣ ಸುಗಂಧಿ, ದಿ.ಬಾಬುರಾವ ಹುಜರೆ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ  ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು,     ಸಂಸ್ಕಾರ, ಜೀವನ ಮೌಲ್ಯಗಳಿಂದ ಕೂಡಿದ ಬದುಕು ನಮ್ಮದಾಗಬೇಕು. ಆಗ ಬದು ಕಿಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು. 
 
ಮುರಿಗೆಪ್ಪಣ್ಣ ಸುಗಂಧಿ, ಹುಜರೆಯ ವರು ನಮ್ಮ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.  ಮುಂಬೈ ವಿಧಾನ ಪರಿ ಷತ್‌ಗೆ ಆಯ್ಕೆಯಾದ ಹುಜರೆಯವರು ಮುಳವಾಡ ನೀರಾವರಿ, ಆಲಮಟ್ಟಿ ಅಣೆಕಟ್ಟೆ ನಿರ್ಮಾಣದ ಕನಸು ಕಂಡಿದ್ದರು.

ಬೀಚಿಯವರು ತಮ್ಮ ಕರ್ಣ ನಾಟಕವನ್ನು ವಿಜಯಪುರದಲ್ಲಿ ಮುರಿಗೆಪ್ಪ ಸುಗಂಧಿಯವರ ತೋಟದ ಮನೆಯಲ್ಲಿ ಬರೆದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು  ವಿವರಿಸಿದರು. 
 
ಯುವ ಜನತೆಯಲ್ಲಿ ರಾಷ್ಟ್ರಪ್ರೇಮ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ.ಎಂ.ಎಸ್.ಮಾಗಣಗೇರಿ, ಯುವ ಚೇತನ ಶಕ್ತಿ ಇರುವವರು ಮಾತ್ರ ಯುವಕರು. ರಾಜಗುರು, ಸುಖದೇವ, ಭಗತ್‌ಸಿಂಗರ ಇನ್‌ಕಿಲಾಬ್ ಜಿಂದಾ ಬಾದ್‌ ಘೋಷಣೆಗೆ ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು.
 
ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಡುವುದೆಂದರೆ ಅದೊಂದು  ಮೌಲ್ಯ ಧ್ಯೇಯ ಎಂಬಂತಾಗಿತ್ತು.  ಮನೋಜ ಕುಮಾರ ಪಾಂಡೆ, ಸೌರಭ ಕಾಲಿಯಾ, ವಿಕ್ರಮ ಸಿಂಗ್ ಮುಂತಾದ ವೀರ ಸೇನಾನಿಗಳ ಬಲಿದಾನ ನೆನೆದಾಗ   ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತದೆ ಎಂದು ಭಾವುಕರಾಗಿ ನುಡಿದರು.
 
ಡಾ.ಕಂಠೀರವ ಕುಲ್ಲೊಳ್ಳಿ, ಮಾರ್ಗ ದರ್ಶಿ ಕರಿಯರ್ ಅಕಾಡೆಮಿಯ  ಗೌರವಾಧ್ಯಕ್ಷ ರವಿ ಖಾನಾಪುರ, ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಉಪಸ್ಥಿತರಿದ್ದರು. 
 
ಪ್ರೊ.ಶರಣಗೌಡ ಆರ್.ಪಾಟೀಲ ಸ್ವಾಗತಿಸಿದರು. ಸಾಹಿತಿ ರಂಗನಾಥ ಅಕ್ಕಲಕೋಟ ನಿರೂಪಿಸಿದರು. ಭರತೇಶ ಕಲಗೊಂಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.