ADVERTISEMENT

ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ

ಟಾಸ್ಕ್‌ಫೊರ್ಸ್‌ ಸಭೆಯಲ್ಲಿ ಶಾಸಕ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 6:04 IST
Last Updated 31 ಮಾರ್ಚ್ 2015, 6:04 IST

ಇಂಡಿ: ಬರುವ ಬೇಸಿಗೆಯ ಹಂಗಾಮಿನಲ್ಲಿ ತಾಲ್ಲೂಕಿನ ಯಾವದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆದರೆ ಅದಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಟ ಸೂಚನೆ ನೀಡಿದರು.

ಅವರು ಶನಿವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಟಾಸ್ಕ್‌ಫೊರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ­ಯಲ್ಲಿಯೇ ಇದ್ದುಕೊಂಡು ನಿತ್ಯ ತಮ್ಮ ವ್ಯಾಪ್ತಿ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯಯ ಬಗ್ಗೆ ಪರಿಶೀಲಿಸಬೇಕು. ಮಂಜಾಗ್ರತಾ ಕ್ರಮ ಕೈಕೊಳ್ಳಬೇಕು. ಸಂಬಂಧಪಟ್ಟ ಇಲಾಖೆ­ಗಳ ಮುಖ್ಯಸ್ಥರೊಂದಿಗೆ ಸಂಪರ್ಕ ಹೊಂದಿರಬೇಕು. ಬೇಸಿಗೆಯಲ್ಲಿ ತಾಲ್ಲೂಕಿನ ಯಾವುದೇ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಂಪೂರ್ಣ ಹೊಣೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳದ್ದು ಎಂದು ಹೇಳಿದರು.

ಜಾನುವಾರುಗಳಿಗೆ ಮೇವಿನ ಸಮಸ್ಯೆಯಾದರೆ ತಾಲ್ಲೂಕಿನ ಹಳಗುಣಕಿ ಮತ್ತು ತಡವಲಗಾ ಜೋಡಗುಡಿ ಹತ್ತಿರ ಗೋಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಕಳೆದ ವರ್ಷ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಟ್ಯಾಂಕರ್‌ ಮಾಲೀಕರಿಗೆ ಬಿಲ್ಲು ನೀಡುವಂತೆ ಸೂಚಿಸಿದರು.
ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಆ ಗ್ರಾಮಕ್ಕೆ ಈ ಕೂಡಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಉಪ ಕಂದಾಯ ವಿಭಾಗಾಧಿಕಾರಿ ಕರಷ್ಣಗೌಡ ತಾಯಣ್ಣನ­ವರ, ತಹಶೀಲ್ದಾರ ರಾಜಶೇಖರ ಡಂಬಳ, ಇಓ ರಾಜಕುಮಾರ ತೊರವಿ, ಇಇ ಬಿ.ಎಫ್‌. ನಾಯ್ಕರ, ಪುರಸಭೆಯ ವ್ಯವಸ್ಥಾಪಕಿ ಎಸ್‌.ಎಸ್‌.ಬಾಗಲಕೋಟ, ಹೆಸ್ಕಾಂ ಇಇ ಎಸ್‌.ಎಸ್‌.ಬಿರಾದಾರ, ಕ್ರೀಡಾಧಿಕಾರಿ ಸಿ.ಎಸ್‌.ವಾಲಿಕಾರ ಸೇರಿ­ದಂತೆ ತಾಲ್ಲೂಕಿಕನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.