ADVERTISEMENT

ಸಾಹಿತ್ಯ ಸಮ್ಮೇಳನ ಮಾ.18ರಂದು

ನಾಲತವಾಡದಲ್ಲಿಯೇ: ಶಾಸಕ ಸಿ.ಎಸ್‌.ನಾಡಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 8:40 IST
Last Updated 6 ಮಾರ್ಚ್ 2017, 8:40 IST
ಮುದ್ದೇಬಿಹಾಳ:  ಕಳೆದ ಫೆ. 12ರಂದು ನಡೆಯಬೇಕಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕೆಲ ಕಾರಣಗಳಿಂದ ಮುಂದೂಡಲಾಗಿತ್ತು. ಸಮ್ಮೇಳನವನ್ನು ಇದೇ 18ರಂದು ತಾಲ್ಲೂಕಿನ ನಾಲತ ವಾಡದಲ್ಲಿ ನಡೆಸಲು ತೀರ್ಮಾನಿಸಾಗಿದೆ ಎಂದು ಕನ್ನಡ  ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ತಿಳಿಸಿದರು.
 
 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌.ನಾಡಗೌಡರ ಉಪಸ್ಥಿತಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ, ತಾಲ್ಲೂಕು ಕಸಾಪ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದರು.
 
 ಸಮ್ಮೇಳನ ರೂಪುರೇಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ಆಮಂತ್ರಣ ಪತ್ರಿಕೆಗಳನ್ನೂ ಮುದ್ರಿಸುವುದಿಲ್ಲ. ಹಳೇ ಆಮಂತ್ರಣ ಪತ್ರಿಕೆಗಳ ದಿನಾಂಕವನ್ನೇ ಬದಲಾಯಿಸಿ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
 
ಶಾಸಕ ನಾಡಗೌಡ ಮಾತನಾಡಿ, ಹಿಂಬಾಲಕರ ಅತಿರೇಕದ ನಡವಳಿಕೆಯಿಂದ ಸಮ್ಮೇಳನಕ್ಕೆ ಹಿಂದೆ ತೊಂದರೆ ಆಗಿತ್ತು. ಈಗ ಅದೆಲ್ಲ ಬಗೆಹರಿದಿದೆ. ಮೊದಲು ನಿಗದಿಪಡಿಸಿದ ಸ್ಥಳದಲ್ಲೇ ಸಮ್ಮೇಳನ ನಡೆಸುವ ತೀರ್ಮಾನವನ್ನು ಪರಿಷತ್ ಕೈಕೊಂಡಿದೆ ಎಂದರು.
 
‘ದಲಿತ ಸಾಹಿತಿಗಳನ್ನು ಕೈಬಿಡಲಾಗಿದೆ ಎನ್ನುವ ಆರೋಪಕ್ಕೆ ಆಸ್ಪದ ಇಲ್ಲ. ಅಂಥದ್ದೇನಾದರೂ ನಡೆದಲ್ಲಿ ಪರಿಷತ್ ಗಮನಕ್ಕೆ ತಂದರೆ ಅವರು ದೂರವಾಣಿ, ಪತ್ರಮುಖೇನ ಅಂಥವರನ್ನು ಸಂಪರ್ಕಿಸಿ ಸಮ್ಮೇಳನಕ್ಕೆ ಆಹ್ವಾನ ನೀಡುತ್ತಾರೆ.  18 ರಂದು ನಡೆಯುವ ಸಮ್ಮೇಳನಕ್ಕೆ ಯಾವುದೇ ಅಡ್ಡಿ, ಆತಂಕ ಎದುರಾಗದೆ ಯಶಸ್ವಿ ಯಾಗುವ ವಿಶ್ವಾಸ ಇದೆ’ ಎಂದರು.
 
ತಾಲ್ಲೂಕು ಕಸಾಪ ಅಧ್ಯಕ್ಷ ಮಹಾಂತಪ್ಪ ನಾವದಗಿ ಮಾತನಾಡಿ ಯಾವುದೇ ಗೊಂದಲ, ಅಪಪ್ರಚಾರಕ್ಕೆ ಆಸ್ಪದ ಕೊಡುವುದಿಲ್ಲ.  ಎಲ್ಲವೂ ಫೆ.12ರಂದು ನಿಗದಿಪಡಿಸಿದಂತೆ ನಡೆಯುತ್ತದೆ ಎಂದು ಹೇಳಿದರು.
 
ಜಿಲ್ಲಾ ಕಸಾಪ ಪದಾಧಿಕಾರಿಗಳಾದ ರಂಗನಾಥ ಅಕ್ಕಲಕೋಟ, ಮಹಾಂತೇಶ ಸಾಲಿಮಠ, ಖಾದ್ರಿ ಇನಾಮದಾರ, ಬಿ.ಆರ್.ಬನಸೋಡೆ, ಎಪಿಎಂಸಿ ನಿರ್ದೇಶಕ ಪ್ರಭು ಡೇರೇದ, ತಾಲ್ಲೂಕು ಕಸಾಪ ಕಾರ್ಯದರ್ಶಿ ಜಹಾಂಗೀರ ಮುಲ್ಲಾ ಇನ್ನಿತರರು ಪಾಲ್ಗೊಂಡಿದ್ದರು.
 
* ಮತ್ತೊಮ್ಮೆ ತಪ್ಪು ಮರುಕಳಿಸದಂತೆ ಜಾಗ್ರತೆ ವಹಿಸಲಾಗುವುದು. ಆಮಂತ್ರಣ ಪತ್ರಿಕೆಯಲ್ಲಿ ದಿನಾಂಕ ಹೊರತುಪಡಿಸಿ ಇನ್ಯಾವುದೇ ಬದಲಾವಣೆ ಇರುವುದಿಲ್ಲ
ಮಹಾಂತಪ್ಪ ನಾವದಗಿ, ಅಧ್ಯಕ್ಷ, ಕಸಾಪ ತಾಲ್ಲೂಕು ಘಟಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.