ADVERTISEMENT

ಸಿಂಹಾಸನ ಸೇವಾ ಕೈಂಕರ್ಯ ಶ್ಲಾಘನೀಯ

ಬಸವನಬಾಗೇವಾಡಿಯಲ್ಲಿ ಮಲ್ಲಪ್ಪ ಸಿಂಹಾಸನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:53 IST
Last Updated 26 ಏಪ್ರಿಲ್ 2018, 13:53 IST

ಬಸವನಬಾಗೇವಾಡಿ: ‘ಲಿಂ.ಮಲ್ಲಪ್ಪ ಸಿಂಹಾಸನ ಅವರು (ಮಾಮಲೇದಾರ) ಬಸವಣ್ಣನವರ ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಅದರಂತೆ ಜೀವನದಲ್ಲಿ ನಡೆದುಕೊಂಡಿದ್ದನ್ನು ಇತಿಹಾಸದಿಂದ ತಿಳಿದು ಬರುತ್ತದೆ’ ಎಂದು ಉಪನ್ಯಾಸಕಿ ಶೀಲಾ ಅವಟಿ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಮಂಗಳವಾರ ಹಮ್ಮಿ ಕೊಂಡಿದ್ದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ಲಿಂ.ರಾವ್‌ಸಾಹೇಬ್‌ ಮಲ್ಲಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫ.ಗು.ಹಳಕಟ್ಟಿ ಅವರು ಬಸವಾದಿ ಶರಣರ ವಚನಗಳ ಸಂರಕ್ಷಣೆ ಮಾಡುವ ಮೂಲಕ ಜಂಗಮ ಸೇವೆ ಮಾಡಿದರೆ,  ಮಲ್ಲಪ್ಪ ಸಿಂಹಾಸನ ಅವರು ಹಾಳುಕೊಂಪೆಯಾಗಿದ್ದ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸ್ಥಾವರ ಸೇವೆ ಮಾಡಿದ್ದಾರೆ. ಇವರ ಸೇವಾ ಕೈಂಕರ್ಯ ಶ್ಲಾಘನೀಯ. ಮಲ್ಲಪ್ಪ ಸಿಂಹಾಸನ ಅವರು ಮಾಮಲೇದಾರ ಆಗಿದ್ದರೂ ತಮ್ಮ ಸೇವಾ ನಿವೃತ್ತಿ ನಂತರ ವಂತಿಗೆ ಸಂಗ್ರಹಿಸಿ ಭವ್ಯ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಡಾ.ಬಿ.ಶರಣಪ್ಪ ಮಾತನಾಡಿ, ‘ಮಲ್ಲಪ್ಪ ಸಿಂಹಾಸನ ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅವರು ನಿವೃತ್ತಿ ನಂತರ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಮೂಲಕ ಭವ್ಯ ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ, ಡಾ.ಮನೋಹರ ಸಿಂಹಾಸನ, ಸಾನ್ನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಸಾಹಿತಿ ಮಹಾಂತೇಶ ಸಂಗಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್‌.ಎಚ್‌.ಬಿರಾದಾರ ಸ್ವಾಗತಿ ಸಿದರು. ವೈ.ಎನ್‌.ಮಿಣಜಗಿ ನಿರೂಪಿಸಿ ದರು. ಎಸ್‌.ಕೆ.ಸೋಮನಕಟ್ಟಿ ವಂದಿಸಿ ದರು. ಕಾರ್ಯಕ್ರಮಕ್ಕೂ ಮುನ್ನ ಮಲ್ಲಪ್ಪ ಸಿಂಹಾಸನ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.