ADVERTISEMENT

‘ಸ್ವಾರ್ಥಕ್ಕಾಗಿ ಹುದ್ದೆ ಬಳಸಿಕೊಂಡಿಲ್ಲ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:44 IST
Last Updated 15 ನವೆಂಬರ್ 2017, 10:44 IST

ದೇವರಹಿಪ್ಪರಗಿ: ‘ನನ್ನ ಅಧಿಕಾರವಧಿಯಲ್ಲಿ ಸದಾ ಜನರ ಸೇವೆಯಲ್ಲಿ ತೊಡಗಿದ್ದೇನೆ. 40 ವರ್ಷಗಳ ರಾಜಕೀಯದಲ್ಲಿ ಸಮಾಜಸೇವೆಯೇ ಪರಮಗುರಿಯೆಂದು ಕಾರ್ಯ ನಿರ್ವಹಿಸುತ್ತಿದ್ದು, ಜನತೆಯ ಆಶೀರ್ವಾದ ನನ್ನ ಮೇಲಿದೆ. ಯಾವುದೇ ಹುದ್ದೆಯಲ್ಲಿರಲಿ ನಾನು ಸ್ವಾರ್ಥಕ್ಕಾಗಿ ಬಳಸಿಕೊಂಡಿಲ್ಲ’ ಎಂದು ಕೇಂದ್ರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು. ಪಟ್ಟಣದ ಹೊಸನಗರದಲ್ಲಿಯ ಪ್ರಳಯಕಟ್ಟಿ ಈರಣ್ಣ ದೇವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

‘ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್‌ ಅವರ ನೆರಳಿನಲ್ಲಿ ಬೆಳೆದು ರಾಜಕಾರಣ ಮಾಡಿದವನು ನಾನು. ಹೀಗಾಗಿ ಜನರೊಂದಿಗೆ, ಜನರಿಗೋಸ್ಕರವೇ ನನ್ನ ರಾಜಕಾರಣ. ಧರ್ಮ, ಸಂಪ್ರದಾಯಗಳನ್ನು ಬಿಟ್ಟು ಯಾವತ್ತು ರಾಜಕೀಯ ಮಾಡಿಲ್ಲ. ಸುಳ್ಳು ಹೇಳುತ್ತ ಕಾಲ ಕಳೆದಿಲ್ಲ. ನನಗೆ ಬಂದ ಅನುದಾನದಲ್ಲಿ ಸಾಧ್ಯವಾದ ಮಟ್ಟಿಗೆ ಹಂಚಿಕೆ ಮಾಡಿ ಸಮಾಜ ಸೇವೆ ಮಾಡಿದ ತೃಪ್ತಿ ನನ್ನಲ್ಲಿದೆ. ಹೀಗಾಗಿ ನಾನು ಎಲ್ಲಿ ಹೋದರು ಜನ ಪ್ರೀತಿಯಿಂದ ಮಾತನಾಡಿಸುತ್ತಾರೆ’ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ‘ಕೇಂದ್ರ ಸಚಿವ ಜಿಗಜಿಣಗಿಯವರು ದೇವರಹಿಪ್ಪರಗಿ ಮತಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚು ಗಮನ ನೀಡಿದ್ದು, ಹೆಚ್ಚಿನ ಅನುದಾನ ನೀಡಿ ಪ್ರಗತಿಗೆ ಸಹಕರಿಸಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಸಂಸದರ ನಿಧಿ ಬಳಸಿಕೊಂಡು ಕಾರ್ಯ ಮಾಡಲಾಗಿದೆ. ಇದಕ್ಕಾಗಿ ಸದಾ ಕೆಲಸ ಮಾಡುವವವರನ್ನು ಬೆಂಬಲಿಸಿ’ ಎಂದು ಮನವಿ ಮಾಡಿಕೊಂಡರು.

ADVERTISEMENT

ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಅನುದಾನ ನೀಡಿದ ಕೇಂದ್ರ ಸಚಿವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಉಪಾಧ್ಯಕ್ಷ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಡಾ.ಬಿ.ಎಸ್.ಪಾಟೀಲ ನಾಗರಾಳಹುಲಿ, ಗುರುಶಾಂತ ಒಂಟೆತ್ತೀನ, ರಮೇಶ ಮಸಬಿನಾಳ, ಮಾಂತೇಶ ವಂದಾಲ ದಿನೇಶ ಪಾಟೀಲ, ಶೇಖರಗೌಡ ಪಾಟೀಲ, ಮೋಹನಗೌಡ ಹಿರೇಗೌಡರ, ಕಾಶೀನಾಥ ಅಗಸರ, ರಮೇಶ ಮಾಳನೂರ, ದೇವಸ್ಥಾನ ಕಮಿಟಿಯ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.