ADVERTISEMENT

ಸ್ವ ಸಾಮರ್ಥ್ಯವೇ ನಮಗೆ ಮುಖ್ಯ: ಧನ್ನೂರ

ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನ: ವಚನಗ್ರಂಥಗಳೊಂದಿಗೆ ಅಧ್ಯಕ್ಷರ ಮೆರವಣಿಗೆ, ಮಕ್ಕಳಿಂದ ಛದ್ಮವೇಷ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:18 IST
Last Updated 20 ಮಾರ್ಚ್ 2017, 6:18 IST
ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯಲ್ಲಿ ಭಾನುವಾರ ನಡೆದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಹಡಪದ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಸಮ್ಮೇಳನದ ಅಧ್ಯಕ್ಷ ಡಿ.ಎಂ.ಧನ್ನೂರ ಇದ್ದರು
ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯಲ್ಲಿ ಭಾನುವಾರ ನಡೆದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಹಡಪದ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಸಮ್ಮೇಳನದ ಅಧ್ಯಕ್ಷ ಡಿ.ಎಂ.ಧನ್ನೂರ ಇದ್ದರು   

ಮುದ್ದೇಬಿಹಾಳ: ಯಾವ ಸ್ವಾಮಿಗಳ, ದೇಗುಲಗಳ  ಆಶೀರ್ವಾದವೂ ನಮ್ಮನ್ನು ಗೆಲ್ಲಿಸಲಾರದು. ನಮ್ಮ ಸ್ವ ಸಾಮರ್ಥ್ಯವೇ ನಮಗೆ ಮುಖ್ಯ. ತನ್ನ ಬಿಟ್ಟು ದೇವರಿಲ್ಲ ಇದು ಸತ್ಯ.  ತನ್ನನ್ನು ತಾನೇ ಕೀಳು ಎಂದು ತಿಳಿದುಕೊಂಡು ಮೋಕ್ಷಕ್ಕಾಗಿ ದೇವರನ್ನು ಹುಡುಕಿಕೊಂಡು ದೇವಸ್ಥಾನ ಅಲೆಯುವುದನ್ನು ಬಿಡಬೇಕು ಎಂದು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಿ.ಎಂ.ಧನ್ನೂರ ಕರೆ ನೀಡಿದರು.

ಭಾನುವಾರ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಮಾತಿನುದ್ದಕ್ಕೂ ಮೂಢ ನಂಬಿಕೆಗಳ, ಕುರುಡು ಸಂಪ್ರದಾಯಗಳ ವಿರುದ್ಧ ಛಾಟಿಯೇಟು ಬೀಸಿದ  ಧನ್ನೂರ ಅವರು,  ಬಸವಣ್ಣ ಹಾಗೂ ಶರಣರ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಮನಮುಟ್ಟುವಂತೆ ಹೇಳಿದರು.

ಲಿಂಗ, ಜಂಗಮ, ಪ್ರಸಾದ ಎಂಬ ಅಷ್ಟಾವರಣಗಳನ್ನು ಅರ್ಥಮಾಡಿ ಕೊಳ್ಳಬೇಕು. ಶರಣರ ಪರಿಶ್ರಮ ದೊಡ್ಡದು. ಕೋಟ್ಯಂತರ ಸಂಖ್ಯೆಯಲ್ಲಿದ್ದ ವಚನಗಳ ಸಾರ ಅರ್ಥಮಾಡಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ತ್ಯಾಗದ ಫಲವಾಗಿ ಈಗ 20 ಸಾವಿರ ವಚನ ಗಳನ್ನು ನಾವು ಓದುತ್ತಿದ್ದೇವೆ. ವೈಚಾರಿಕ ಪ್ರಜ್ಞೆ ಹುಡುಕಿಕೊಂಡು ಮನೆ ಬಿಟ್ಟ ಬಸವಣ್ಣನನ್ನು ನಾವು ಇವತ್ತಿಗೂ ಅರ್ಥಮಾಡಿಕೊಂಡಿಲ್ಲ.

ಇದು ಆತ್ಮ ನಿರೀಕ್ಷಣೆಯ ಕಾಲ, ತಾಸುಗಟ್ಟಲೆ ಬಸವಣ್ಣನ ಕುರಿತು ಭಾಷಣದ ಅಗತ್ಯವಿಲ್ಲ. ಲಿಂಗತತ್ವ ಅರಿತವನೇ ಗುರು. ಪ್ರತಿಯೊಬ್ಬನೂ ಪರಮಾತ್ಮನೇ ಎಂದು ಭಾವುಕರಾಗಿ ನುಡಿದರು.

ಸಭೆಯನ್ನುದ್ದೇಶಿಸಿ ಪ್ರೊ.ಬಿ.ಎಂ. ಹಿರೇಮಠ, ಸಿದ್ಧಬಸವ ಕಬೀರಾನಂದ ಸ್ವಾಮಿಗಳು, ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿಗಳು, ಸಿದ್ದಣ್ಣ ಮೇಟಿ, ಮಂಜುನಾಥಗೌಡ ಪಾಟೀಲ, ಎಂ.ಜಿ.ಯಾದವಾಡ ಮಾತನಾಡಿದರು.

ವೇದಿಕೆಯಲ್ಲಿ ಮಹಾಂತಪ್ಪಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಸಂಗಮೇಶ ಡೊಂಗರಗಾವಿ, ನಿವೃತ್ತ ತಹಶೀಲ್ದಾರ್ ಪಾಟೀಲ ಮತ್ತಿತರರು ಇದ್ದರು. ಪಲ್ಲವಿ ತೆಗ್ಗಿನಮಠ ವಚನ ಗಾಯನ ನಡೆಸಿದರು. ತಂಗಡಗಿಯ ಶಿವಶರಣೆ ನೀಲಾಂಬಿಕೆ ಸಂಘದವರು ಪ್ರಾರ್ಥಿಸಿದರು. ಸಂಗಮೇಶ ಶಿವಣಗಿ ಸಂಗಡಿಗರು ನಾಡಗೀತೆ ಹಾಡಿದರು.

ಈಚೆಗೆ ನಿಧನರಾದ ಸಾಹಿತಿ ಮಲಕಣ್ಣ ಅಮರಗೋಳ ಸ್ಮರಣಾರ್ಥ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಸ್ವಾಗತಿಸಿದರು. ಅಶೋಕ ಮಣಿ ನಿರೂಪಿಸಿದರು. ಎನ್‌.ಆರ್‌.ಮೋಕಾಶಿ ವಂದಿಸಿದರು.

ನೂರಾರು ವಾದ್ಯ ವೈಭವದ ಸಂಭ್ರಮ
ತಾಲ್ಲೂಕಿನ ತಂಗಡಗಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಸಾವಿರಾರು ಜನರ ಸಮ್ಮುಖದಲ್ಲಿ ಭಾನುವಾರ ಸಂಭ್ರಮದಿಂದ ನೆರವೇರಿತು. ಸಮ್ಮೇಳ ನದ ಅಧ್ಯಕ್ಷ ಹಿರಿಯ ಶರಣ ಸಾಹಿತಿ, ನಿವೃತ್ತ ಮುಖ್ಯಗುರುಗಳಾದ ಡಿ.ಎಂ . ಧನ್ನೂರ ಅವರನ್ನು ಜೋಡೆತ್ತಿನ ಚಕ್ಕಡಿಯ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯ ಮುಂಚೂಣಿಯಲ್ಲಿ ವಚನಗ್ರಂಥಗಳನ್ನೂ ಸಹ ತಲೆಯ ಮೇಲೆ ಹೊತ್ತು ಮೆರೆಸಲಾಯಿತು.

ಗ್ರಾಮದ ಚರಲಿಂಗೇಶ್ವರ ದೇವಸ್ಥಾನದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಮರೋಳ ಮೆರವಣಿಗೆ ಯನ್ನು ಉದ್ಘಾಟಿಸಿದರು. ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಅನ್ನದಾನ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಅಧಿಕಾರಿಗಳಾದ ಬಿ.ಎಸ್. ಪ್ಯಾಟಿಗೌಡರ, ಎಸ್.ಡಿ.ಗಾಂಜಿ, ಕೆ.ಎಸ್.ಹಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಮಂಕಣಿ, ಪ್ರಮುಖರಾದ ಅಡಿವೆಪ್ಪ ಕಡಿ, ಎಸ್.ಎಸ್.ಪಾಟೀಲ, ಜಿ.ಎಸ್. ಕಶೆಟ್ಟಿ, ಪ್ರಭು ಮದರಕಲ್ಲ, ಪಾವಡೆಪ್ಪ ಯಾಳವಾಳ, ಶಂಕ್ರಪ್ಪ ಹೊಳಿ, ಉಮ್ಮಣ್ಣ ಹುಂಡೇಕಾರ, ಎಸ್.ಎನ್. ಡೊಂಗರಗಾಂವಿ,

ಧರಿಯಪ್ಪ ದೇಸಣಗಿ, ಚಂದ್ರಾಮಪ್ಪ ಸಜ್ಜನ, ಶಂಕರಗೌಡ ಪಾಟೀಲ, ಸಂಗಪ್ಪ ಹೊಳಿ, ಸಿದ್ದಣ್ಣ ಸಜ್ಜನ, ಅನಿಲ ಹೊಳಿ, ಬಸವರಾಜ ಸಜ್ಜನ, ಸಂಗಣ್ಣ ದೇವರಮನಿ, ಕನಕಪ್ಪಮುತ್ಯಾ ಚಲವಾದಿ, ಶಾಂತಪ್ಪ ತಾರನಾಳ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ನಾಲತವಾಡ,

ಶಿವಶಂಕರಗೌಡ ಹಿರೇಗೌಡರ, ಪ್ರಭು ಕಡಿ, ಎಸ್.ಬಿ.ಬಂಗಾರಿ, ಸಿ.ಬಿ.ಇಟಗಿ, ಪ್ರೊ.ಬಿ.ಎಂ.ಹಿರೇಮಠ, ಜಿ.ಎಸ್.ರೂಢಗಿ, ಜಿ.ಎಚ್.ಗೌರೋಜಿ, ಮಹಾಂತೇಶ ಅಂಬಿಗೇರ, ರಾಜು ಕೊಂಗಿ, ಬಸವರಾಜ ಇಸ್ಲಾಂಪುರ ಸೇರಿದಂತೆ ಅನೇಕ ಶರಣ ಬಂಧುಗಳು ಪಾಲ್ಗೊಂಡಿದ್ದರು.

ಶರಣ ಜ್ಯೋತಿ ಹೊತ್ತ ಶರಣ ಬಂಧುಗಳು ಮೆರವಣಿಗೆಯ ಮುಂದಾ ಳತ್ವ ವಹಿಸಿದ್ದರು. ಚರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ತೆಗ್ಗಿನಮಠ, ಮಾರುತಿ ಗುಡಿ, ಬಸವೇಶ್ವರ ದೇವಸ್ಥಾನ ಮೂಲಕ ಕಾರ್ಯಕ್ರಮ ಸ್ಥಳ ನೀಲಾಂಬಿಕೆಯ ಹೊಸ ದೇವಸ್ಥಾನದವರೆಗೆ ವಿಜೃಂಭಣೆ ಯಿಂದ ನಡೆಯಿತು.

ಗ್ರಾಮಸ್ಥರು ತಮ್ಮೂರಿನ ಹಬ್ಬ ಎಂದೇ ಭಾವಿಸಿ ಪಾಲ್ಗೊಂಡಿದ್ದರು. ಸ್ಥಳೀಯ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳ 12 ನೇ ಶತಮಾನದ ಬಸವಣ್ಣ ಸಹಿತ ಸಮಕಾಲೀನ ಶರಣ, ಶರಣೆಯರ ಛದ್ಮವೇಷಧಾರಿಗಳಾಗಿ ಸರ್ವಾಧ್ಯಕ್ಷರ ಸಾರೋಟಿನ ಹಿಂದೆ ಟ್ರ್ಯಾಕ್ಟರಿನಲ್ಲಿ ನಿಂತು ಗಮನ ಸೆಳೆದರು.
ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡಿದ್ದರು.

5 ನಿರ್ಣಯ ಸ್ವೀಕಾರ
ಶರಣಾಧಿವೇಶನದ ಬಹಿರಂಗ ಅಧಿವೇಶನದಲ್ಲಿ ಒಟ್ಟು 5 ನಿರ್ಣಯ ಕೈಕೊಳ್ಳಲಾಯಿತು. ತಂಗಡಗಿ ಮತ್ತು ಅಮರಗೋಳ ಸೇರಿದಂತೆ ತಾಲ್ಲೂಕಿನ ಶರಣ ಕ್ಷೇತ್ರಗಳನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರ್ಪಡೆಗೊಳಿಸಬೇಕು. ನಾಡಿನಾದ್ಯಂತ ಚದುರಿ ಹೋಗಿ ಅಳಿವಿನಂಚಿನಲ್ಲಿರುವ ಶರಣ ಸ್ಥಳಗಳನ್ನು ಪುನರುಜ್ಜೀವನಗೊಳಿಸಬೇಕು.

ADVERTISEMENT

ಇನ್ನುಳಿದ ಧರ್ಮಗಳಂತೆ ಲಿಂಗಾಯತ ಧರ್ಮಕ್ಕೂ ಸಂವಿಧಾನದಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು. ತಾಲ್ಲೂಕಿನ ಎಲ್ಲ ನೀರಾವರಿ ಯೋಜನೆಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಶರಣರ ಚರಿತ್ರೆ ಹಾಗೂ ವಚನಗಳನ್ನು ಸೇರ್ಪಡೆ ಮಾಡಬೇಕು ಎನ್ನುವ ನಿರ್ಣಯಗಳು ಸ್ವೀಕೃತಗೊಂಡವು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮ.ಗು.ಯಾದವಾಡ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಚಂದ್ರಶೇಖರ ಇಟಗಿ ನಿರ್ಣಯ ಮಂಡಿಸಿದರು. ತಹಶೀಲ್ದಾರ್ ಎಂಎಎಸ್ ಬಾಗವಾನ ನಿರ್ಣಯ ಸ್ವೀಕರಿಸಿದರು. ಪರಿಷತ್ ತಾಲ್ಲೂಕು ಅಧ್ಯಕ್ಷ ಬಸವರಾಜ ನಾಲತವಾಡ, ಎಸ್.ಬಿ.ಬಂಗಾರಿ, ಬಾಪುಗೌಡ ಪಾಟೀಲ, ಎಸ್.ಬಿ.ಕನ್ನೂರ, ರುದ್ರೇಶ ಕಿತ್ತೂರ, ಚಂದ್ರಶೇಖರ ನಾಗರಾಳ, ಪ್ರಭು ಕಡಿ, ಎಸ್.ಆರ್.ಸುಲ್ಪಿ, ಎಸ್.ಎ.ಬೇವಿನಗಿಡದ, ಪಿ.ಎಸ್.ಮಸ್ಕಿ, ಸಿದ್ದನಗೌಡ ಬಿಜ್ಜೂರ, ಕಾಶಿಬಾಯಿ ಬಿರಾದಾರ, ಮಹಾಂತೇಶ ಬೂದಿಹಾಳಮಠ, ಕಿರಣ ಪಾಟೀಲ, ಮಂಗಳಾದೇವಿ ಬಿರಾದಾರ, ಶಾಂತಗೌಡ ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.