ADVERTISEMENT

ಹಳಿಗೆ ಬಾರದ ವಹಿವಾಟು; ನೆನಪಾದರೆ ಬೆಚ್ಚಿ ಬೀಳ್ತೀವಿ..!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 10:00 IST
Last Updated 8 ನವೆಂಬರ್ 2017, 10:00 IST

ವಿಜಯಪುರ: ₹ 500, 1000 ಮುಖಬೆಲೆಯ ನೋಟು ರದ್ದುಗೊಳಿಸಿ ಇಂದಿಗೆ ವರ್ಷ. ಕುಸಿತಗೊಂಡ ವಹಿವಾಟು ಹಳಿಗೆ ಮರಳಿಲ್ಲ ಎಂಬುದು ಉದ್ಯಮ ವಲಯದ ಒಟ್ಟಾಭಿಪ್ರಾಯವಾದರೆ, ನೆನಪಾದರೆ ಇಂದಿಗೂ ಬೆಚ್ಚಿ ಬೀಳ್ತೀವಿ ಎಂದವರು ಜನ ಸಾಮಾನ್ಯರು. ‘ಆ ದಿನಗಳು’ ತುಂಬಾ ಕಠಿಣವಾಗಿದ್ದವು ಎಂದರು.

ನೋಟು ರದ್ದತಿಯ ಮೂಲ ಆಶಯವೇ ಈಡೇರಲಿಲ್ಲ ಎಂಬುದು ಪ್ರಜ್ಞಾವಂತರ ಅನಿಸಿಕೆ. ಹಿಂದಿಗಿಂತಲೂ ಪರಿಸ್ಥಿತಿ ಕೊಂಚ ಸುಧಾರಿಸಿದೆ ಎಂದು ಹೇಳಿದವರು ಬೆರಳೆಣಿಕೆ ಮಂದಿ. ‘ಕಪ್ಪು ಹಣ ಹೊರಗೆ ಬರಲಿದೆ. ದೇಶದ ಖಜಾನೆ ಸೇರಿ ಅಭಿವೃದ್ಧಿಗೆ ಬಳಕೆಯಾಗಲಿದೆ ಎಂಬ ಏಕೈಕ ಸದಾಶಯದಿಂದ ‘ಆ ದಿನಗಳ’ ಸಂಕಷ್ಟವನ್ನು ಸಹಿಸಿಕೊಂಡೆವು. ಆದರೆ ಇಂದಿಗೂ ನೈಜ ಆಶಯ ಈಡೇರಲಿಲ್ಲ. ಸಾಮಾನ್ಯರು ತ್ರಾಸು ಪಟ್ಟೆವು. ಸಿರಿವಂತರು ಎಂದಿನಂತೆ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ಭಂಡಾರ ಹೊರ ತೆಗೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆಟೊ ಚಾಲಕ ಮುನ್ನಾ ಬೇಸರ ವ್ಯಕ್ತಪಡಿಸಿದರು.

‘ಕಾರ್ಯಾಚರಣೆಯಿಂದ ದೇಶದ ಸಾಮಾನ್ಯ ಜನತೆಗೆ ಯಾವೊಂದು ಲಾಭವಾಗಲಿಲ್ಲ. ನೌಕರಿದಾರರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ತ್ರಾಸು ಪಡಬೇಕಿದೆ. ಜನ ಸಾಮಾನ್ಯರು ಆಸ್ತಿ ಮಾಡಲಾಗುತ್ತಿಲ್ಲ. ಆದರೆ ದೊಡ್ಡವರದ್ದು ಮಾತ್ರ ಇಂದಿಗೂ ಯಥಾಸ್ಥಿತಿ. ಅಂದಾದುಂದಿ ಎಗ್ಗಿಲ್ಲದೆ ನಡೆದಿದೆ’ ಎಂದು ನಿವೃತ್ತ ಪ್ರಾಂಶುಪಾಲ ಎನ್.ಕೆ.ಮನಗೊಂಡ ತಿಳಿಸಿದರು.

ADVERTISEMENT

‘ನೋಟು ರದ್ದತಿ ಬಳಿಕ ಬ್ಯಾಂಕ್‌ ವಹಿವಾಟು ಕ್ರಮಬದ್ಧವಾಗಿ ನಡೆದಿದೆ. ಕ್ಯಾಷ್‌ಲೆಸ್‌ ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳಬೇಕಿದೆ. ರಿಯಲ್‌ ಎಸ್ಟೇಟ್‌ ಉದ್ಯಮ ಕುಸಿತಗೊಂಡಿದ್ದರಿಂದ ಸಾಮಾನ್ಯರಿಗೆ ನಿವೇಶನ ಖರೀದಿಯ ಸಾಮರ್ಥ್ಯ ದೊರೆತಿದೆ. ಮಾರುಕಟ್ಟೆಯಲ್ಲಿ ಧಾರಣೆ ನಿಯಂತ್ರಣಕ್ಕೆ ಬಂದಿದೆ. ಭ್ರಷ್ಟಾಚಾರಕ್ಕೆ ಬ್ರೇಕ್‌ ಬಿದ್ದಿದೆ. ಕೆಲ ಸಣ್ಣ–ಪುಟ್ಟ ಲೋಪ ಹೊರತು ಪಡಿಸಿದರೆ, ಒಟ್ಟಾರೆ ಕೇಂದ್ರ ಸರ್ಕಾರ ವರ್ಷದ ಹಿಂದೆ ತೆಗೆದುಕೊಂಡ ನಿರ್ಣಯ ಚಲೋ ಆಗಿದೆ’ ಎಂದು ವಿಜಯಪುರ ನಿವಾಸಿ ಎನ್‌.ಎ.ಸಾರವಾಡ ಪ್ರತಿಕ್ರಿಯಿಸಿದರು.

‘ನೋಟು ರದ್ದಿನ ನಿರ್ಧಾರದಿಂದ ಭಾಳ ತೊಂದ್ರೆ ಎದುರಿಸಿದೆವು. ಆರಂಭದ ದಿನಗಳಲ್ಲಿ ವಹಿವಾಟು ಕುಸಿತಗೊಂಡಿತ್ತು. ಇಂದಿಗೂ ನಗದು ವರ್ಗಾವಣೆ ಮಾಡಬೇಕು ಎಂದ್ರೇ ತಲೆನೋವು ಬರುತ್ತೆ. ಸರಳೀಕೃತ ವ್ಯವಸ್ಥೆಯಿಲ್ಲದಿದ್ದುದರಿಂದ ಕಿರಿಕಿರಿ ತಪ್ಪದಾಗಿದೆ. ಕೇಂದ್ರ ಸರ್ಕಾರದ ಉದ್ದೇಶ ಸಫಲವಾಗಲಿಲ್ಲ. ಸಾಮಾನ್ಯ ಜನತೆ, ವ್ಯಾಪಾರಿಗಳು ಇಂದಿಗೂ ಅದರ ಕರಾಳ ಛಾಯೆಯಲ್ಲೇ ನಲುಗುತ್ತಿದ್ದಾರೆ. ಉಜ್ವಲ ಭವಿಷ್ಯದ ದಾರಿ ಕಾಣದಾಗಿದೆ’ ಎಂದು ಎಲೆಕ್ಟ್ರಾನಿಕ್ಸ್‌ ಸಾಧನಗಳ ಉದ್ಯಮಿ ಚಂದ್ರಕಾಂತ ಹಿರೇಮಠ ಹೇಳಿದರು.

‘ವರ್ಷವಾದ್ರೂ ಕ್ಯಾಷ್‌ಲೆಸ್‌ ವ್ಯವಸ್ಥೆ ಅನುಷ್ಠಾನಗೊಂಡಿಲ್ಲ. ಪೂರಕ ವಾತಾವರಣವೇ ಇದುವರೆಗೂ ನಿರ್ಮಾಣಗೊಂಡಿಲ್ಲ. ಗ್ರಾಮೀಣರಿರಲಿ, ನಗರ ಪ್ರದೇಶದಲ್ಲಿ ಇದರ ಬಗೆಗಿನ ಸಾಮಾನ್ಯಜ್ಞಾನ ಎಲ್ಲರಿಗಿಲ್ಲ. ಆರಂಭದ ಎರಡ್ಮೂರು ತಿಂಗಳು ಮಾತ್ರ ಪೇ ಟಿಎಂ ಅಬ್ಬರ ಗೋಚರಿಸಿತು. ಸ್ವೈಪಿಂಗ್ ಮೆಷಿನ್‌ಗಳು ಅಂಗಡಿಯಲ್ಲಿ ಚಾಲನೆ ಪಡೆದವು. ದಿನ ಕಳೆದಂತೆ ಹಿಂದಿನ ಯಥಾಸ್ಥಿತಿಯೇ ನಿರ್ಮಾಣಗೊಂಡಿದೆ. ವ್ಯತ್ಯಾಸ ಒಂದೇ ಒಂದು. ವಹಿವಾಟು ನಡೆಸಲು ಇದೀಗ ನಿತ್ಯ ಹೊಸ ಕಿರಿಕಿರಿ ಸೇರ್ಪಡೆಯಾಗುತ್ತಿದೆ’ ಎಂದು ಆಟೊಮೊಬೈಲ್ ಉದ್ಯಮಿ ಯು.ಎಂ.ಕೋಳಕೂರ ತಿಳಿಸಿದರು.

‘ಆರಂಭದ ಮೂರ್ನಾಲ್ಕು ತಿಂಗಳು ವಹಿವಾಟು ನಡೆಯಲಿಲ್ಲ. ನಂತರವೂ ಚೇತರಿಕೆಯಾಗಿಲ್ಲ. ರೈತರಿಗೆ ಭಾಳ ತ್ರಾಸ್ ಆಗೈತಿ. ಹೊಲ ಮಾರಿ ಸಾಲ ತೀರಿಸಲು ಆಗ್ತಿಲ್ಲ. ಮನೆಯಲ್ಲಿ ಶುಭ ಕಾರ್ಯ, ಅಭಿವೃದ್ಧಿ ಕೈಗೆತ್ತಿಕೊಳ್ಳಲು ಸಾಧ್ಯವಾಗದ ರೀತಿ ನೋಟು ರದ್ದು ಚಾಟಿ ಬೀಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.