ADVERTISEMENT

ಹುಬ್ಬಳ್ಳಿ– ಸೊಲ್ಲಾಪುರ ಇಂಟರ್‌ಸಿಟಿ ರೈಲು ಸ್ಥಗಿತ?

ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ, ಪಾರ್ಸೆಲ್‌ ಬುಕ್ಕಿಂಗ್ ಈ ತಿಂಗಳ 12ರಿಂದಲೇ ರದ್ದು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 9:38 IST
Last Updated 18 ಫೆಬ್ರುವರಿ 2017, 9:38 IST
ಬಾಗಲಕೋಟೆ:  ಪ್ರಯಾಣಿಕರ ಕೊರತೆ ಕಾರಣ ಕೇಂದ್ರ ರೈಲ್ವೆ ವಲಯವು,  ಸೊಲ್ಲಾಪುರ–ಹುಬ್ಬಳ್ಳಿ ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗುತ್ತಿದೆ. ಅದಕ್ಕೆ ಪೂರ್ವಭಾವಿ ಎಂಬಂತೆ, ಈ ತಿಂಗಳ  12ರಿಂದ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಬಂದ್ ಮಾಡಿದೆ. ಜೊತೆಗೆ ಅದೇ ದಿನದಿಂದ ಸರಕು ಸಾಗಣೆ ಬುಕ್ಕಿಂಗ್ ಕೂಡ ಸ್ಥಗಿತವಾಗಿದೆ. 
 
ಸೊಲ್ಲಾಪುರದಿಂದ ಹುಬ್ಬಳ್ಳಿಯನ್ನು ಕಡಿಮೆ ಅವಧಿಯಲ್ಲಿ ಕ್ರಮಿಸುವ ಉದ್ದೇಶದಿಂದ  ನಾಲ್ಕು ವರ್ಷಗಳ ಹಿಂದೆ ಕೇಂದ್ರ ರೈಲ್ವೆ ವಲಯದ ಸೊಲ್ಲಾಪುರ ವಿಭಾಗದಿಂದ ಇಂಟರ್‌ಸಿಟಿ ರೈಲು ಸಂಚಾರ ಆರಂಭಿಸಲಾಗಿದೆ.
 
ಐದು ತಿಂಗಳ ಹಿಂದೆಯೇ ಪತ್ರ:  ‘ನಿಗದಿತ ಗುರಿಗಿಂತಲೂ ಶೇ 50ಕ್ಕಿಂತ ಕಡಿಮೆ ಆದಾಯ ಇರುವ ರೈಲುಗಳ ಸಂಚಾರ ಸ್ಥಗಿತಗೊಳಿಸಲು ಇಲಾಖೆ ಮುಂದಾಗಿದೆ. ಹಾಗಾಗಿ ಈ ರೈಲು ಸಂಚಾರವನ್ನು ನಿಲ್ಲಿಸುವುದಾಗಿ ಕೇಂದ್ರ ರೈಲ್ವೆಯು ಐದು ತಿಂಗಳ ಹಿಂದೆಯೇ ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ಬಳಕೆದಾರರ ಸಂಘಕ್ಕೆ ಪತ್ರ ಬರೆದಿದೆ’ ಎನ್ನುತ್ತಾರೆ ಸಂಘದ ಸಲಹಾ ಸಮಿತಿ ಸದಸ್ಯ ದಾಮೋದರ ರಾಠಿ.
 
ಪ್ಯಾಸೆಂಜರ್ ರೈಲಿನೊಂದಿಗೆ ಸ್ಪರ್ಧೆ:  ಸೊಲ್ಲಾಪುರದಿಂದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (11423) ಪ್ರತಿ ದಿನ ಬೆಳಿಗ್ಗೆ 6ಕ್ಕೆ ಹೊರಡುತ್ತದೆ. ಬಾಗಲಕೋಟೆಯನ್ನು 10.40ಕ್ಕೆ ಬಿಟ್ಟು ಮಧ್ಯಾಹ್ನ 2ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಮತ್ತೆ ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿಯಿಂದ ಹೊರಟು (11424) ಸಂಜೆ 6.50ಕ್ಕೆ ಬಾಗಲಕೋಟೆ ತಲುಪುತ್ತದೆ. ರಾತ್ರಿ 11.30ಕ್ಕೆ ಸೊಲ್ಲಾಪುರ ತಲುಪುತ್ತದೆ.  ಆದರೆ ಈ ಅವಧಿಯಲ್ಲಿಯೇ ಸೊಲ್ಲಾಪುರ–ಹುಬ್ಬಳ್ಳಿ ನಡುವೆ ಪ್ಯಾಸೆಂಜರ್ ರೈಲು ಸಂಚರಿಸುತ್ತದೆ. ಬೆಳಗಿನ ಜಾವ 3.30ಕ್ಕೆ ಸೊಲ್ಲಾಪುರ ಬಿಡುವ ಪ್ಯಾಸೆಂಜರ್ 9.40ಕ್ಕೆ ಬಾಗಲಕೋಟೆಗೆ ಬಂದು, 1.30ಕ್ಕೆ ಹುಬ್ಬಳ್ಳಿ ತಲುಪುತ್ತದೆ. 
 
‘ಪ್ರಮುಖ ನಿಲ್ದಾಣಗಳನ್ನು ಇಂಟರ್‌ಸಿಟಿಗಿಂತ 30 ನಿಮಿಷ ಅಥವಾ ಒಂದು ಗಂಟೆಯ ಅಂತರದಲ್ಲಿ ಪ್ಯಾಸೆಂಜರ್‌ ರೈಲು ತಲುಪುತ್ತಿದೆ. ಇದರಿಂದ ಹೆಚ್ಚಿನವರು ಪ್ಯಾಸೆಂಜರ್‌ ರೈಲು ಬಳಸುತ್ತಾರೆ. ಜೊತೆಗೆ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ದರ ಹೆಚ್ಚು. ಹಾಗಾಗಿ ಪ್ರಯಾಣಿಕರು ಆಸಕ್ತಿ ತೋರುತ್ತಿಲ್ಲ. ಓಡಾಟದ ಸಮಯ ಬದಲಾಯಿಸಿದರೆ  ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಬಹುದು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನೈರುತ್ಯ ರೈಲ್ವೆ ಅಧಿಕಾರಿಯೊಬ್ಬರು ಹೇಳುತ್ತಾರೆ. 
 
‘ಹೊಸದಾಗಿ ರೈಲು ಆರಂಭಿಸುವಾಗ ಎಲ್ಲಾ ರೀತಿಯ ಸಮೀಕ್ಷೆ ನಡೆಸಿರುತ್ತಾರೆ. ಹಾಗಾಗಿ ಇಲ್ಲಿ ಪ್ರಯಾಣಿಕರ ಕೊರತೆ ಎಂದು ಗಾಡಿ ನಿಲ್ಲಿಸಲು ಆಗುವುದಿಲ್ಲ’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
 
‘ಮುಂಬೈಗೆ ರೈಲು ಓಡಿಸಲಿ’
‘ಗದಗ, ಬಾಗಲಕೋಟೆ, ವಿಜಯಪುರದಿಂದ ಪ್ರತಿನಿತ್ಯ ಮುಂಬೈಗೆ ಈಗ ಯಾವುದೇ ರೈಲು ಸಂಚಾರವಿಲ್ಲ.  ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸ್ಥಗಿತವಾದರೆ ಅದೇ ಅವಧಿಯಲ್ಲಿ ಮುಂಬೈ–ಸೊಲ್ಲಾಪುರ–ಗದಗ ಇಲ್ಲವೇ ಹುಬ್ಬಳ್ಳಿಯವರೆಗೆ ಹೊಸ ರೈಲು ಆರಂಭಿಸುವಂತೆ ರೈಲ್ವೆ ಮಂಡಳಿಗೆ ರೈಲ್ವೆ ಬಳಕೆದಾರರ ಸಂಘದಿಂದ ಪತ್ರ ಬರೆಯಲಾಗಿದೆ. ಆದರೆ ಅದಕ್ಕೆ ಇನ್ನೂ ಉತ್ತರ ಬಂದಿಲ್ಲ. ಈಗ ನಿತ್ಯ ಮುಂಬೈ–ಸೊಲ್ಲಾಪುರ ನಡುವೆ ರೈಲು ಸಂಚಾರಿಸುತ್ತಿದೆ. ಅದನ್ನೇ ಗದಗದವರೆಗೆ ವಿಸ್ತರಿಸಬಹುದು’ ಎಂದು ದಾಮೋದರ ರಾಠಿ ಹೇಳುತ್ತಾರೆ.
 
* ರೈಲು ನಿಲ್ಲಿಸಲು ಅವಕಾಶ ನೀಡುವುದಿಲ್ಲ.  ವಿಚಾರ ನನ್ನ ಗಮನಕ್ಕೂ ಬಂದಿದೆ. ವಿಜಯಪುರ, ಗದಗ ಸಂಸದರ ಜೊತೆ ಒಟ್ಟಾಗಿ ಒತ್ತಡ ಹಾಕಲಾಗುವುದು.
ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.